ಧಾರವಾಡದಲ್ಲಿ ಮಾಜಿ ಪ್ರಿಯಕರನಿಂದ ಗೃಹಿಣಿ ಅಪಹರಣ
ಧಾರವಾಡ, ಜೂ. 22 : ಮದುವೆ ಬಂದ ಗೃಹಿಣಿಯೋರ್ವಳನ್ನು ಸಿನಿಮೀಯ ರೀತಿಯಲ್ಲಿ ಹಾಡುಹಗಲೇ ವ್ಯಕ್ತಿಯೊಬ್ಬ ಆಟೋರಿಕ್ಷಾದಲ್ಲಿ ಅಪಹರಿಸಿಕೊಂಡ ಹೋದ ಘಟನೆ ಧಾರವಾಡದಲ್ಲಿ ಭಾನುವಾರ ಜರುಗಿದೆ.
ಮುಂಬೈ ವಾಸಿಯಾಗಿರುವ ಹುಬ್ಬಳ್ಳಿ ಮೂಲದ ಪ್ರಿಯಾ ಹಂಡೆ ಎಂಬ ಗೃಹಿಣಿ ಮದುವೆಗೆಂದು ಧಾರವಾಡಕ್ಕೆ ಬಂದಾಗ ಅಪಹರಣ ನಡೆದಿದೆ. ಆಕೆಯನ್ನು ಪ್ರೀತಿಸುತ್ತಿದ್ದ ರಾಜೇಶ್ ಪಾಟೀಲ್ ಎಂಬಾತನೇ ಪ್ರಿಯಾಳನ್ನು ಅಪಹರಿಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ನಗರದಲ್ಲಿರುವ ಲಕ್ಷ್ಮಿ ಥಿಯೇಟರ್ ಬಳಿ ನಡೆದುಕೊಂಡು ಬರುತ್ತಿದ್ದಾಗ ರಿಕ್ಷಾದಲ್ಲಿ ಬಂದ ರಾಜೇಶ್ ಆಕೆಯ ಪಾಲಕರ ಸಮ್ಮಖದಲ್ಲೇ ಪ್ರಿಯಾಳನ್ನು ಅಪಹರಿಸಿದ್ದಾನೆ. ಪಾಲಕರು ಕೂಗಿಕೊಂಡರೂ ಅಪಹರಣವನ್ನು ತಡೆಯಲಾಗಲಿಲ್ಲ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ರಾಜೇಶ್ ಹುಡುಕಾಟದಲ್ಲಿ ತೊಡಗಿದ್ದಾರೆ. ಆತನ ಮನೆಗೂ ಹೋಗಿ ವಿಚಾರಣೆ ನಡೆಸಿದರು.
ಪ್ರಿಯಾ ಮತ್ತು ರಾಜೇಶ್ ನಡುವೆ ಮೊದಲಿನಿಂದಲೂ ಲವಿಡವಿ ಇತ್ತೆಂದು ತಿಳಿದುಬಂದಿದೆ. ಪ್ರಿಯಾ ಮದುವೆಯ ನಂತರ ಮುಂಬೈಗೆ ಹೋಗಿ ನೆಲೆಸಿದ್ದಾರೆ. ಮದುವೆಯ ನಂತರವೂ ಆಕೆ ರಾಜೇಶ್ನನ್ನು ಕೆಲ ಬಾರಿ ಭೇಟಿಯಾಗಿದ್ದಳೆಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ಕನ್ನಡ ವಾರ್ತೆ)


Click it and Unblock the Notifications
