ವಿಂಬಲ್ಡನ್ ಮೇಲೆ ಬೆಟ್ಟಿಂಗ್ ಭೂತದ ಕರಿನೆರಳು
ಲಂಡನ್, ಜೂ. 22 : ಕ್ರಿಕೆಟನ್ನು ತನ್ನ ಕಬಂಧ ಬಾಹುಗಳಿಂದ ಆವರಿಸಿಕೊಂಡಿರುವ ಬೆಟ್ಟಿಂಗ್ ಭೂತದ ಕರಿನೆರಳು ಜೂನ್ 23 ಸೋಮವಾರದಿಂದ ಆರಂಭವಾಗುತ್ತಿರುವ ವಿಂಬಲ್ಡನ್ ಮೇಲೂ ಆವರಿಸಿಕೊಂಡು ಟೆನ್ನಿಸ್ ಲೋಕವನ್ನು ದಂಗುಬಡಿಸಿದೆ.
ಆಲ್ ಇಂಗ್ಲೆಂಡ್ ಕ್ಲಬ್ನಲ್ಲಿ ಹಿಂದೆ ನಡೆದ ಆಟಗಳನ್ನು ಹಣದ ಆಮಿಷಕ್ಕೆ ಬಿಟ್ಟುಕೊಟ್ಟ ಆರೋಪ ಹೊತ್ತಿರುವ 18 ಆಟಗಾರರು ಈ ಬಾರಿ ಮತ್ತೆ ಕಣದಲ್ಲಿದ್ದಾರೆ. ನಾಲ್ಕು ಪುರುಷರ ಸಿಂಗಲ್ಸ್ ಸೇರಿದಂತೆ ಕಳೆದ ವರ್ಷ ಆಡಲಾದ 8 ಪಂದ್ಯಗಳನ್ನು ವೃತ್ತಿಪರ ಬೆಟ್ಟಿಂಗ್ ತಂಡ 'ಫಿಕ್ಸ್' ಮಾಡಿತ್ತು ಎಂದು 'ದಿ ಟೈಮ್ಸ್' ಪತ್ರಿಕೆ ವರದಿ ಮಾಡಿದೆ.
ಟೆನ್ನಿಸ್ಗೆ ಕಪ್ಪು ಮಸಿ ಬಳಿಯುತ್ತಿರುವವರ ಪಟ್ಟಿಯಲ್ಲಿ ಕೆಲ ಖ್ಯಾತನಾಮರ ಹೆಸರುಗಳೂ ಸೇರಿರುವುದು ಕಳವಳಕ್ಕೆ ಎಡೆಮಾಡಿದೆ. ಕಳೆದ ಬಾರಿ ಸೋತ ಈ ಪಟ್ಟಿಯಲ್ಲಿನ 'ಪುರುಷರು' ನೇರ ಸೆಟ್ಗಳಲ್ಲಿ ಪಂದ್ಯ ಬಿಟ್ಟುಕೊಟ್ಟಿದ್ದರು. ರಷ್ಯಾ, ಸ್ಪೇನ್, ಇಟಲಿ ಮತ್ತು ಆಸ್ಟ್ರಿಯಾ ಆಟಗಾರರ ಮೇಲೆ ಶಂಕೆಯ ಬೆರಳು ನೆಟ್ಟಿದೆ. ಪಂದ್ಯದ ಗತಿಯಲ್ಲಾದ ಅನಿರೀಕ್ಷಿತ ತಿರುವುಗಳು ಬೆಟ್ಟಿಂಗ್ ಬಗ್ಗೆ ಸಂಶಯವೇಳುವಂತೆ ಮಾಡಿವೆ.
ಈಗಾಗಲೇ ಡೆವಿಸ್ ಕಪ್ ಪಂದ್ಯಗಳಲ್ಲಿ ಭ್ರಷ್ಟಾಚಾರ ನಡೆದಿರುವ ಸುದ್ದಿ ಬಂದ ಹಿಂದೆಯೇ ಈ ವಿಷಯ ಹೊರಬಿದ್ದಿರುವುದು ವಿಂಬಲ್ಡನ್ನ ಶ್ರೇಷ್ಠತೆಗೆ ಕುಂದು ತಂದಿದೆ. ವಿಂಬಲ್ಡನ್ ಮಾತ್ರವಲ್ಲ ವಿಶ್ವದಾದ್ಯಂತ ನಡೆಯುತ್ತಿರುವ ಟೆನ್ನಿಸ್ ಪಂದ್ಯಗಳಲ್ಲಿ 140 ಪಂದ್ಯಗಳು ಬೆಟ್ಟಿಂಗ್ಗೆ ಆಹುತಿಯಾಗಿರುವುದು ತನಿಖೆಯಿಂದ ದೃಢಪಟ್ಟಿದೆ.
ಬೆಟ್ಟಿಂಗ್ನಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಮೂರು ವರ್ಷ ನಿಷೇಧದಿಂದ ಹಿಡಿದು ಜೀವಮಾನ ನಿಷೇಧಕ್ಕೊಳಗಾಗುವ ಸಾಧ್ಯತೆಯಿದೆ. ಟೂರ್ನಾಮೆಂಟಲ್ಲಿ ಆಡುವ ಆಟಗಾರರು ಟೂರ್ನಿ ಪ್ರಾರಂಭವಾಗುವ 48 ಗಂಟೆ ಮೊದಲೇ ಬೆಟ್ಟಿಂಗ್ ಅಥವಾ ಮ್ಯಾಚ್ ಫಿಕ್ಸಿಂಗ್ ಬಗ್ಗೆ ತಿಳಿವಳಿಕೆ ನೀಡಬೇಕು.
(ಏಜೆನ್ಸೀಸ್)


Click it and Unblock the Notifications
