ಕೊಟ್ಟ ಮಾತಿಗೆ ತಪ್ಪಿನಡೆದರೆ ಮೆಚ್ಚನಾ ಪರಮಾತ್ಮನು
ಹಾವೇರಿ, ಜೂ.18: ಹಾವೇರಿ ಗೋಲಿಬಾರ್ ದುರಂತಕ್ಕೆ ಬಲಿಯಾದ ಅಮಾಯಕ ರೈತ ಸಿದ್ದಲಿಂಗಪ್ಪ ಚೂರಿ ಅವರ ಕುಟುಂಬಕ್ಕೆ ಬಿಜೆಪಿ ಸರ್ಕಾರ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿದೆ. ಸಿದ್ದಲಿಂಗಪ್ಪ ಅವರ ಪತ್ನಿ ಕುಸುಮಾ ಅವರಿಗೆ ಸ್ಥಳೀಯ ತಹಸೀಲ್ದಾರ್ ಕಚೇರಿಯಲ್ಲಿ ನೌಕರಿ ನೀಡಲಾಗಿದೆ.
ಮಂಗಳವಾರಮೃತ ರೈತ ಸಿದ್ದಲಿಂಗಪ್ಪ ಚೂರಿ ಮನೆಗೆ ಭೇಟಿ ನೀಡಿದಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರು, ರೈತನ ಪತ್ನಿ ಕುಸುಮಾ ಅವರಿಗೆ ಹಾವೇರಿ ತಹಸೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಸೇರಲು ಆದೇಶ ನೀಡಲಾಗಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಕುಸುಮಾ ಅವರು ಆದೇಶ ಪಡೆದ ಮರುದಿನವೇ ಕೆಲಸಕ್ಕೆ ಹಾಜರಾಗಬಹುದು.ಸಿದ್ದಲಿಂಗಪ್ಪ ಅವರ ಪುತ್ಥಳಿಯನ್ನು ಹಾವೇರಿನಗರದಲ್ಲಿ ಸ್ಥಾಪನೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಉದಾಸಿ ಹೇಳಿದರು.
ಮಾನವೀಯತೆ ಮೆರೆದ ಮಣ್ಣಿನ ಮಗ
ಈ ಮಧ್ಯೆ ಹಾವೇರಿ ಗೋಲಿಬಾರ್ ನಲ್ಲಿ ತೀವ್ರವಾಗಿ ಗಾಯಗೊಂಡಿರುವ ಪುಟ್ಟಪ್ಪ ಹೊನ್ನತಿ ಅವರನ್ನು ಭೇಟಿ ಮಾಡಿದ ಮಾಜಿ ಪ್ರಧಾನಿ ದೇವೇಗೌಡ ಅವರು ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ದೇವೇಗೌಡರ ಶಿಫಾರಿಸಿನಂತೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಗೆ ಸೇರಿಸಲಾಗಿದೆ. ಸಹಾಯಧನವಾಗಿ ದೇವೇಗೌಡ ಅವರು ಹೊನ್ನತ್ತಿ ಅವರ ಕುಟುಂಬಕ್ಕೆ 3.5 ಲಕ್ಷ ರು ನೀಡಿದ್ದಾರೆ. ಮೂವರು ಸಣ್ಣ ಮಕ್ಕಳಿಗೆ ತಲಾ 50 ಸಾವಿರ , ಹೆಂಡತಿ ಹಾಗೂ ತಾಯಿಗೆ ತಲಾ 50 ಸಾವಿರ ರು. ಮನೆ ಕಟ್ಟಲು 50 ಸಾವಿರ ರು ನೀಡಿ ಮಾನವೀಯತೆ ಮೆರೆದಿದ್ದಾರೆ. ಹೆಚ್ಚಿನ ಸಹಾಯ ಅಗತ್ಯವಿದ್ದರೆ ಸಂಪರ್ಕಿಸಬೇಕಾಗಿ ಸೂಚಿಸಿದ್ದಾರೆ. ಸರ್ಕಾರ ಬರೀ ಮೃತ ರೈತರ ಕುಟುಂಬಕ್ಕೆ ಪರಿಹಾರ ಸೂಚಿಸಿದೆ. ಗಾಯಗೊಂಡವರ ಬಗ್ಗೆ ಕೂಡ ನಿಗಾ ವಹಿಸಬೇಕು ಎಂದು ದೇವೇಗೌಡರು ಹೇಳಿದರು. ನಂತರ ದೇವೇಗೌಡರು ಗೋಲಿಬಾರ್‌ನಲ್ಲಿ ಮೃತಪಟ್ಟ ಸಿದ್ದಲಿಂಗಪ್ಪ ಅವರ ಮನೆಗೂ ಭೇಟಿ ಕೊಟ್ಟು ಮನೆಯವರನ್ನು ಸಂತೈಸಿದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
