ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಮೇಲೆ ನಂಬಿಕೆಯಿಡಿ ಭಾವಿ ಸಿಎಂ ಯಡ್ಡಿ

By Staff
|
Google Oneindia Kannada News

ಶಿವಮೊಗ್ಗ, ಮೇ 30 : ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಲಿರುವ ಬಿ.ಎಸ್.ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ನಂತರ ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದರು. ಯಾವುದೇ ಭಯ ಆತಂಕವಿಲ್ಲದೇ ಸ್ಪಷ್ಟವಾಗಿ ತಮ್ಮ ಕೆಲಸ, ಸಚಿವರ ಜವಾಬ್ದಾರಿ ಹಾಗೂ ಸರ್ಕಾರದಲ್ಲಿ ಸಂಘ ಪರಿವಾರದ ಪಾತ್ರ ಹೀಗೆ ಅನೇಕ ಸಂಗತಿಗಳ ಬಗ್ಗೆ ತಮ್ಮ ಮನದಾಳದ ಇಂಗಿತವನ್ನು ತೆರೆದಿಟ್ಟರು. ರಾಜ್ಯ ಜನತೆ ನಮ್ಮ ಮೇಲೆ ನಂಬಿಕೆ ಇಟ್ಟು ಮತ ನೀಡಿದೆ. ಅವರ ಅಸೆ-ಕನಸುಗಳಿಗೆ ದಕ್ಕೆ ಬಾರದ ಹಾಗೆ, ಜನ ಸೇವಕನಾಗಿ ರಾಜ್ಯಭಾರ ಮಾಡುವೆ ಎಂದು ಭರವಸೆ ನೀಡಿದರು.

ಅಣ್ಣ ಬಸವಣ್ಣನ ನುಡಿಯಾದ ಕಾಯಕವೇ ಕೈಲಾಸ ಎಂಬ ಮಂತ್ರ ಜಪಿಸುತ್ತಿರುವವರು ನಾವು. ಅಮೆ ವೇಗದ ಆಡಳಿತಕ್ಕೆ ಅವಕಾಶವಿಲ್ಲ. ನಾಳೆ ಕೆಲಸ ಇಂದೇ ಆಗಬೇಕು, ಆಡಳಿತ ಯಂತ್ರ ಸಂಪೂರ್ಣ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ತಪ್ಪಿದ್ದಲ್ಲಿ ಮಾಡಿದ್ದುಣ್ಣೋ ಮಾರಾಯ ಶಿಕ್ಷೆ ಖಂಡಿತ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪ್ರತಿ ದಿನ ಒಂದು ಗಂಟೆ ಅದಕ್ಕಾಗಿ ಮೀಸಲಿಡಬೇಕು. ತಾಲ್ಲೂಕು ಮಟ್ಟದಲ್ಲಿ ಬಗೆಹರಿಯದ ಸಮಸ್ಯೆಗಳನ್ನು ಜಿಲ್ಲಾ ಮಟ್ಟದಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರು ಕಡ್ಡಾಯವಾಗಿ ನಿರ್ಧಿಷ್ಟವಾದ ದಿನ ಜಿಲ್ಲಾ ಅಥವಾ ತಾಲ್ಲೂರು ಕೇಂದ್ರಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿ ಪರಿಹಾರ ಸೂಚಿಸಬೇಕು. ಸಣ್ಣಪುಟ್ಟ ವಿಷಯಗಳಿಗೂ ವಿಧಾನಸೌಧ ಸುತ್ತುವ ಪರಿಪಾಠ ನಿಲ್ಲಬೇಕು ಎಂದರು. ಜನರು ವಿಧಾನಸೌಧದ ಮಟ್ಟಿಲು ತುಳಿಯುವುದಕ್ಕಿಂತ ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಯನ್ನು ಬಗೆಹರಿಸುವ ಪರಿಸ್ಥಿತಿ ನಿರ್ಮಾಣವಾಗಬೇಕು. ಆ ಬಗ್ಗೆ ಈಗಾಗಲೇ ಸಾಕಷ್ಟು ಚಂತನೆ ನಡೆಸಿದ್ದು, ಕಾರ್ಯರೂಪಕ್ಕೆ ತರಲಾಗುವುದು. ದತ್ತ ಪೀಠ ಮತ್ತು ಬಾಬಾಬುಡನ್ ಗಿರಿ ಸಮಸ್ಯೆ ನ್ಯಾಯಲಯದಲ್ಲಿದ್ದು, ಈ ವಿಷಯದಲ್ಲಿ ಕಾನೂನು ತನ್ನದೇ ಆದ ಕ್ರಮವನ್ನು ತಗೆದುಕೊಳ್ಳಲಿದೆ ಎಂದು ಜಾರಿಕೊಂಡರು.

ಸಂಘ ಪರಿವಾರಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಸರ್ಕಾರದ ನಿರ್ಧಾರದಲ್ಲಿ ಯಾರ ಹಸ್ತಕ್ಷೇಪವೂ ಇರುವುದಿಲ್ಲ. ಆದರೆ ಸಂಘ ಪರಿವಾರದ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು. ಗಣಿಗಾರಿಕೆ ಕುರಿತು ದೇಶಾದ್ಯಂತ ಸಮಗ್ರ ಚರ್ಚೆ ನಡೆಯಬೇಕು. ನಮ್ಮಲ್ಲಿ ನಡೆಯುತ್ತಿರುವ ಖನಿಜ ಸಂಪತ್ತಿನ ಲೂಟಿ ಬಹುಶಃ ಬೇರೆ ಯಾವ ದೇಶದಲ್ಲಿಯೂ ನಡೆದಿಲ್ಲ. ಈ ಕುರಿತು ಸಂಸತ್ತಿನ ಒಳಗೆ, ಹೊರಗೆ ವ್ಯಾಪಕ ಚರ್ಚೆ ಆಗಬೇಕು. ಗಣಿ ನಿಷೇಧದ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಅದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ನುಣುಚಿಕೊಂಡರು. ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನುಹಂತ ಹಂತವಾಗಿ ಅನುಷ್ಠಾಗೊಳಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X