ಹಳೆ ವಿಮಾನ ನಿಲ್ದಾಣ ಉಳಿವಿಗಾಗಿ ಹೋರಾಟ ತೀವ್ರ
ಬೆಂಗಳೂರು, ಮೇ 17: ಎಚ್ಎಎಲ್ ವಿಮಾನ ನಿಲ್ದಾಣದ ಉಳಿವಿಗಾಗಿ ಈ ಏರ್ ಪೋರ್ಟ್ ಬಳಕೆದಾರರು, ಶೇರುದಾರರು, ವಿವಿಧ ಸಮೂಹದ ನಾಯಕರುಗಳ ಸಾರ್ವಜನಿಕ ಸಭೆ ಶನಿವಾರ ಸಂಜೆ 4 ಗಂಟೆಗೆ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಏರ್ಪಡಿಸಲಾಗಿದೆ.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೇ 23ರಂದು ಉದ್ಘಾಟನೆಯಾಗುವುದು ಖಚಿತವಾಗಿದ್ದು, ಮೇ 22ರಂದು ಎಚ್ಎಎಲ್ ನಿಲ್ದಾಣ ಮುಚ್ಚುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಚೇಂಜ್ ಇಂಡಿಯಾ ಚಳವಳಿಯ ಹರಿಕಾರ ಆರ್.ಕೆ.ಮಿಶ್ರಾ ನೇತೃತ್ವದಲ್ಲಿ ಸಭೆಯನ್ನು ಕರೆಯಲಾಗಿದೆ.
ಶುಕ್ರವಾರ ಕರೆಯಲಾಗಿದ್ದ ನಗರದ ಪ್ರಮುಖ ಐಟಿ ಉದ್ಯಮಿದಾರರ ಪತ್ರಿಕಾಗೋಷ್ಠಿಯಲ್ಲಿ ಎಚ್ಎಎಲ್ ವಿಮಾನ ನಿಲ್ದಾಣವನ್ನು ಮುಚ್ಚುವ ಕೇಂದ್ರ ನಾಗರಿಕ ವಿಮಾನ ಸಚಿವಾಲಯದ ನಿರ್ಧಾರದ ವಿರುದ್ಧ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಸೇರಿದಂತೆ ಅನೇಕ ಉದ್ಯಮಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಚುನಾವಣೆಯ ನಂತರ ವಿಮಾನ ನಿಲ್ದಾಣವನ್ನು ಉದ್ಘಾಟಿಸುವುದಾಗಿ ಈ ಹಿಂದೆ ಪ್ರಕಟಿಸಲಾಗಿತ್ತು. ಆದರೆ ಈಗ ಏಕಾಏಕಿ ಇದೇ 23ರಂದು ಉದ್ಘಾಟಿಸುವುದಾಗಿ ವಿಮಾನಯಾನ ಇಲಾಖೆ ತಿಳಿಸಿದೆ. ಮೇ 26ರವರೆಗೆ ನ್ಯಾಯಾಲಯ ರಜೆಯಲ್ಲಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿಲು ಸಾಧ್ಯವಾಗದಿರಲಿ ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಮಜುಂದಾರ್ ಷಾ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಎಚ್ಎಎಲ್ ವಿಮಾನ ನಿಲ್ದಾಣವನ್ನು ಮುಚ್ಚುವ ನಿರ್ಧಾರ ಕೈಗೊಂಡಿರುವುದನ್ನು ವಿರೋಧಿಸಿ ಶನಿವಾರ ಎಚ್ಎಎಲ್ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಎಚ್ಎಎಲ್ ವಿಮಾನ ನಿಲ್ದಾಣದ ಬಗ್ಗೆ ಕಾಳಜಿಯಿರುವವರೆಲ್ಲ ಸೇರಿ ಶಾಂತಿಯುತ ಧರಣಿ ನಡೆಸಲು ನಿರ್ಧರಿಸಿರುವುದಾಗಿ ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
