ಕಾನೂನುಸಿಇಟಿ: ಸಾವಿರಾರು ವಿದ್ಯಾರ್ಥಿಗಳು ಹಾಜರಿ
ಬೆಂಗಳೂರು,ಮೇ 12: ದೇಶದ 10 ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ಕಾಲೇಜುಗಳ ಪ್ರವೇಶ ಪರೀಕ್ಷೆಗಳು ಭಾನುವಾರ ಸುಸೂತ್ರವಾಗಿ ನಡೆದವು. ದೇಶದ ವಿವಿಧ 20 ಸ್ಥಳಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿದ್ದು, ಸುಮಾರು 11,500 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯನ್ನು ಬರೆದರು.
ಕಳೆದ ವರ್ಷ ನಡೆದ ಇದೇ ಪರೀಕ್ಷೆಗೆ ಕೇವಲ ಆರು ಸಾವಿರ ವಿದ್ಯಾರ್ಥಿಗಳು ಮಾತ್ರ ಈ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಈ ವರ್ಷ ಅದರ ಸಂಖ್ಯೆ ದುಪ್ಪಟ್ಟಾಗಿದೆ. ಬೆಂಗಳೂರು, ಕೋಲ್ಕತ್ತಾ, ಹೈದರಾಬಾದ್, ಭೂಪಾಲ್, ಜೋಧಪುರ್, ರಾಯಪುರ್, ಮತ್ತು ಗಾಂಧಿನಗರದಲ್ಲಿರುವ ಕಾಲೇಜುಗಳು ಮಾತ್ರ ಪ್ರತಿಷ್ಠಿತ ಕಾಲೇಜು ಎಂದು ಪರಿಗಣಿಸಲಾಗಿತ್ತು. ಆದರೆ ಇತ್ತೀಚೆಗೆ ಲಕ್ನೋ, ಪಟಿಯಾಲಾ ಮತ್ತು ಪಾಟ್ನಾ ಕಾನೂನು ಕಾಲೇಜುಗಳು ಕೂಡಾ ಸೇರ್ಪಡೆಗೊಂಡಿವೆ.ಈ ಕಾಲೇಜುಗಳ ಪ್ರವೇಶಕ್ಕೆ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ.
ಪ್ರತಿಷ್ಠಿತ ಕಾನೂನು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಬೇಕಾದರೆ ಈ ಪ್ರವೇಶ ಪರೀಕ್ಷೆ ಅಗತ್ಯವಾಗಿದೆ. ಈ ಪರೀಕ್ಷೆ ತುಂಬ ಕಠಿಣವಾಗಿದ್ದು, ಕಾನೂನು ಸಂಬಂಧಿಸಿದ ವಿಷಯ ಮತ್ತು ಸಾಮಾನ್ಯ ಜ್ಞಾನ ಒಳಗೊಂಡಂತೆ ಪ್ರಶ್ನೆ ಪತ್ರಿಕೆಯನ್ನು ರೂಪಿಸಲಾಗಿತ್ತದೆ. ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಈ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿಧ್ಯಾರ್ಥಿಗಳ ಶಿಕ್ಷಣಾ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತದೆ.
ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಜಯಗೋವಿಂದ ಮಾತನಾಡಿ, ಭಾನುವಾರ ನಡೆದ ಕಾನೂನು ಪರೀಕ್ಷೆ ಸುಗಮದಿಂದ ಸಾಗಿತು. ಪ್ರಥಮ ಬಾರಿ ನಾವು ಪರೀಕ್ಷೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೆವು ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇವೆ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications