ಕನ್ನಡಿಗರ ಬಗ್ಗೆ ತಮಗೆ ಅಪಾರ ಗೌರವ ಇದೆ: ಕರುಣಾ
ಬೆಂಗಳೂರು, ಏ. 3 : ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಪತ್ರ ಬರೆದು ಹೊಗೇನಕಲ್ ವಿಷಯದಲ್ಲಿ ಕನ್ನಡಿಗರನ್ನು ತಾವು ನಿಂದಿಸಿಲ್ಲ ಎಂದು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಈ ಪತ್ರದ ಪ್ರತಿಯೊಂದನ್ನು ಎಸ್.ಎಂ.ಕೃಷ್ಣ ಅವರಿಗೂ ಕಳುಹಿಸಿದ್ದಾರೆ.
ಕರುಣಾನಿಧಿ ಪತ್ರದಲ್ಲಿ ಕನ್ನಡಿಗರ ಬಗ್ಗೆ ಹಾಗೂ ಕನ್ನಡ ನಾಡಿನ ಬಗ್ಗ್ಗೆ ತಮಗೆ ಅಪಾರ ಅಭಿಮಾನ, ಗೌರವ ಇದೆ ಎಂದು ಉಲ್ಲೇಖಿಸಿದ್ದಾರೆ. ಹೊಗೇನಕಲ್ ಕುಡಿಯುವ ನೀರಿನ ಯೋಜನೆಯನ್ನು ತಾವು ಕಾನೂನು ಬದ್ಧವಾಗಿ ಕೈಗೊಂಡಿದ್ದೇವೆ. ಕೇಂದ್ರ ಸರ್ಕಾರ ಹಾಗೂ ಕರ್ನಾಟಕದ ಅನುಮೋದನೆ ಪಡೆದ ಬಳಿಕವೇ ನಾವು ಯೋಜನೆಯನ್ನು ಆರಂಭಿಸಿದ್ದೇವೆ. ಆದರೆ ಕರ್ನಾಟಕದಲ್ಲಿ ರಾಜಕೀಯ ದುರುದ್ದೇಶದಿಂದ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಪತ್ರದಲ್ಲಿ ಸಮರ್ಥಿಸಿಕೊಂಡಿದ್ದಾರೆ.
ತಮಿಳುನಾಡಿನ ಜನತೆಗೆ ಕೆಲವು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕೆಲವು ಯೋಜನೆಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ರೀತಿಯ ಯೋಜನೆಗೆ ಅಡ್ಡಿಪಡಿಸಿದರೆ ಮುಖ್ಯಮಂತ್ರಿಯಾಗಿ ತಾನು ಮೌನ ವಹಿಸಲು ಸಾಧ್ಯವಿಲ್ಲ. ಕರ್ನಾಟಕವು ಹೊಗೇನಕಲ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ತಾವು ಈ ಯೋಜನೆಯನ್ನು ಕೈಬಿಡುವುದಿಲ್ಲ ಎಂದಿರುವುದು ನಿಜ. ತಾವು ಯಾರ ಬಗ್ಗೆಯೂ ಅಗೌರವ ಸೂಚಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಾವು ಸಂವಿಧಾನ ಚೌಕಟ್ಟನ್ನು ಮೀರಿಲ್ಲ. ಈ ಯೋಜನೆ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಉತ್ತಮವಾಗಿ ಪ್ರತಿಸ್ಪಂದಿಸುತ್ತಾರೆಂದು ವಿಶ್ವಾಸವನ್ನು ಕರುಣಾನಿಧಿ ವ್ಯಕ್ತಪಡಿಸಿದ್ದಾರೆ.
ಹೊಗೆ-ಹಗೆ: ಅಲ್ಲಿ ಇಲ್ಲಿ
ಕರ್ನಾಟಕ ಮತ್ತು ತಮಿಳುನಾಡು ನಡುವಿನ ಮನಸ್ತಾಪ ಕಾರಣದಿಂದಾಗಿ ಎರಡೂ ರಾಜ್ಯಗಳಲ್ಲಿ ಅಲ್ಲಲ್ಲಿ ಅಹಿತಕರ ಘಟನೆಗಳು ಸಂಭವಿಸಿದ ವರದಿಗಳು ಬರುತ್ತಿವೆ. ಗುಲ್ಬರ್ಗ ಬಳಿ ತಮಿಳುನಾಡಿನ ಸೇಲಂ ಬಸ್ಸನ್ನು ಕರವೇ ಕಾರ್ಯಕರ್ತರು ತಡೆದು ಬಸ್ಸಿನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ಬುಧವಾರ ಬೆಳಗ್ಗೆ ಹೊಸೂರು ಸಮೀಪದ ಚಂದಾಪುರದಲ್ಲಿ ತಮಿಳುನಾಡಿನ ಸರಕಾರಿ ಬಸ್ಸುಗಳನ್ನು ತಡೆದು ಚಾಲಕ ಮತ್ತು ನಿರ್ವಾಹಕರನ್ನು ದುಷ್ಕರ್ಮಿಗಳು ಥಳಿಸಿದ ಪ್ರಸಂಗ ವರದಿಯಾಗಿದೆ. ಬೆಳಗ್ಗೆಯಿಂದ ತಮಿಳುನಾಡು ಬಸ್ಸುಗಳು ಹೊಸೂರು ರಸ್ತೆಯಲ್ಲಿ ಸಂಚಾರ ಮಾಡುತ್ತಿಲ್ಲ.
ತಮಿಳುನಾಡಿನನಿಂದ ಬೆಂಗಳೂರಿಗೆ ಬರುವ ಬಸ್ಸುಗಳು ಹೊಸೂರುತನಕ ಮಾತ್ರ ಬರುತ್ತವೆ ಎಂದು ಚೆನ್ನೈ ಬೆಂಗಳೂರು ನಡುವೆ ಸಂಚರಿಸುವ ಬಸ್ಸುಗಳ ಚಾಲಕ ನಿರ್ವಾಹಕರು ಹೇಳುತ್ತಿದ್ದಾರೆ. ಕೃಷ್ಣಗಿರಿಯಲ್ಲೂ ಇದೇ ತರಹದ ಗಲಭೆ ನಡೆದಿದೆ. ಕರ್ನಾಟಕ ಬಸ್ಸುಗಳನ್ನು ಅಡ್ಡಹಾಕಿದಕ್ಕಾಗಿ 44 ಮಂದಿ ತಮಿಳು ಉತ್ಸಾಹಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಕೊಯಮತ್ತೂರಿನಲ್ಲಿ ತಮಿಳರು ಕೊಯಮತ್ತೂರು ಕನ್ನಡ ಸಂಘದ ಕಚೇರಿಗೆ ಮುತ್ತಿಗೆ ಹಾಕಿ ಪೀಠೋಪಕರಣಗಳನ್ನು ಧ್ವಂಸಮಾಡಿದರು. ರಸ್ತೆ ತಡೆ ಚಳವಳಿ ನಡೆಸುತ್ತಿದ್ದ ಪ್ರತಿಭಟನೆಕಾರರನ್ನು ಪೊಲೀಸರು ಹಿಮ್ಮೆಟ್ಟಿಸಿದರಲ್ಲದೆ ಕೆಲವರನ್ನು ದಸ್ತಗಿರಿ ಮಾಡಿದ್ದಾರೆ. ಈರೋಡಿನಲ್ಲೂ ಮಂಗಳವಾರ ಪ್ರತಿಭಟನೆ ವ್ಯಕ್ತವಾಯಿತು. ಪ್ರತಿಭಟನಕಾರರು ಯಡಿಯೂರಪ್ಪ ಅವರ ಪ್ರತಿಕೃತಿನ್ನು ಸುಟ್ಟರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications