ರಜನಿ ಸಹ ಪ್ರತಿಭಟನೆಯಲ್ಲಿ ಭಾಗವಹಿಸಬೇಕು
ಚೆನ್ನೈ, ಏ.1: ವಿವಾದಾತ್ಮಕ ಹೊಗೇನಕಲ್ಲು ಯೋಜನೆಯನ್ನು ಬೆಂಬಲಿಸಿ ತಮಿಳು ಚಿತ್ರೋದ್ಯಮದ ಕಲಾವಿದರು, ತಂತ್ರಜ್ಞರು ಏ.4ರಂದು ಚೆನ್ನೈನಲ್ಲಿ ಉಪವಾಸ ಸತ್ಯಾಗ್ರಹದ ಮೂಲಕ ಪ್ರತಿಭಟಿಸುವುದಾಗಿ ದಕ್ಷಿಣ ಭಾರತ ಕಲಾವಿದರ ಸಂಘ(ನಡಿಗರ್ ಸಂಘಂ) ಅಧ್ಯಕ್ಷ ಶರತ್ ಕುಮಾರ್ ಇಂದು ಚೆನ್ನೈನಲ್ಲಿ ತಿಳಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ನಡೆದ ತಮಿಳು ಚಲನಚಿತ್ರ ನಿರ್ಮಾಪಕರ ಸಮಿತಿ ತುರ್ತು ಸಭೆಯಲ್ಲಿ ಶರತ್ ಕುಮಾರ್ ಈ ವಿಷಯವನ್ನು ತಿಳಿಸಿದರು.
"ತಮಿಳರನ್ನು ವಿರೋಧಿಸುತ್ತಿರುವ ಕನ್ನಡಿಗ ''ಭಾಷಾಂಧರ''ವಿರುದ್ಧ ಪ್ರತಿಭಟಿಸಲು ಏ.4ರಂದು ನಡಿಗರ್ ಸಂಘದ ಎಲ್ಲ ಸದಸ್ಯರು ಭಾಗವಹಿಸಬೇಕು. ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಪ್ರತಿಭಟನಾ ಸ್ಥಳವನ್ನು ಪ್ರಕಟಿಸುತ್ತೇವೆ. ಏ.4ರಂದು ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಯಾವುದೇ ಭಾಗದಲ್ಲಿ ಚಿತ್ರೋದ್ಯಮದ ಯಾವುದೇ ಚಟುವಟಿಕೆಗಳು ನಡೆಯುವಂತಿಲ್ಲ. ಪ್ರದರ್ಶನ ಮತ್ತು ಡಬ್ಬಿಂಗ್ ಕೆಲಸಕ್ಕೆ ಅಂದು ಬಂದ್. ಎಲ್ಲಾ ತಮಿಳು ಕಲಾವಿದರೂ ಉಪವಾಸ ಸತ್ಯಾಗ್ರಹ ದ ಪ್ರತಿಭಟನೆಯಲ್ಲಿ ತಪ್ಪದೆ ಭಾಗವಹಿಸಬೇಕು. ಬೇರೆ ರಾಜ್ಯ, ದೇಶಗಳಲ್ಲಿ ಚಿತ್ರೀಕರಣದಲ್ಲಿರು ಕಲಾವಿದರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು" ಎಂದು ಶರತ್ ಕರೆಕೊಟ್ಟಿದ್ದಾರೆ.
ಒಂದು ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸದ ಕಲಾವಿದರಿಗೆ ಮುಂದೆ ಚಿತ್ರೋದ್ಯಮದಿಂದ ಯಾವುದೇ ರೀತಿಯ ಸಹಕಾರ ಸಿಗುವುದಿಲ್ಲ. ಇದು ತಮಿಳು ಚಿತ್ರೋದ್ಯಮದ ಸರ್ವಾನುಮತದ ತೀರ್ಮಾನ. ಇದನ್ನು ಉಲ್ಲಂಘಿಸಿದವರ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವುದಾಗಿ ಶರತ್ ಎಚ್ಚರಿಸಿದ್ದಾರೆ.
ನಿರ್ಮಾಪಕರ ಸಮಿತಿಯ ಈ ತೀರ್ಮಾನ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಸತ್ಯರಾಜ್‌ಗೆ ಅನ್ವಯಿಸುತ್ತದೆಯೇ? ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದರು. ತಮಿಳರ ಅನ್ನ ತಿಂದವರು, ಇಲ್ಲಿನ ಸೌಲಭ್ಯಗಳನ್ನು ಪಡೆದ ಯಾರೇ ಆಗಲಿ ಈ ಪ್ರತಿಭಟನೆಯಲ್ಲಿ ಕಡ್ಡಾಯವಾಗಿ ಭಾಗವಹಿಸಲೇ ಬೇಕು. ಇಲ್ಲ ಎಂದರೆ ತಮಿಳುನಾಡಿನಿಂದ ಅವರನ್ನು ಒದ್ದು ಓಡಿಸಲಾಗುತ್ತದೆ ಎಂದು ನಡಿಗರ್ ಸಂಘ ದ ಕಾರ್ಯಕಾರಿ ಸದಸ್ಯರೊಬ್ಬರು ತೀಕ್ಷ್ಣವಾಗಿ ಉತ್ತರಿಸಿದರು.
ಈ ತುರ್ತು ಸಭೆಯಲ್ಲಿ ಎಲ್ಲಾ ತಮಿಳು ಚಲನಚಿತ್ರೋದ್ಯಮದ ಪ್ರತಿನಿಧಿಗಳು ಭಾಗವಹಿಸಿದ್ದರು. ಅವರೆಲ್ಲ ಕನ್ನಡ ಪರ ಸಂಘಟನೆಗಳನ್ನು ಖಂಡಿಸಿ ತಮಿಳು ನಡಿಗರ್ ಸಂಘಕ್ಕೆ ಒಕ್ಕೊರಲ ಬೆಂಬಲ ವ್ಯಕ್ತಪಡಿಸಿದರು.
(ಏಜೆನ್ಸೀಸ್)


Click it and Unblock the Notifications
