25 ಸಾವಿರ ಹಳ್ಳಿಗಳಿಗೆ ಬ್ರಾಡ್‌ಬ್ಯಾಂಡ್ ಸೇವೆ ವಿಸ್ತರಣೆ
ಬೆಂಗಳೂರು, ಏ. 1 : ಬರುವ ಜುಲೈ ವೇಳೆಗೆ ಭಾರತದ ಬ್ರಾಡ್‌ಬ್ಯಾಂಡ್ ಭೂಪಟದಲ್ಲಿ 25,000 ಹಳ್ಳಿಗಳು ಕಾಣಿಸಿಕೊಳ್ಳಲಿವೆ. ದೇಶದ ಅತ್ಯಂತ ದೊಡ್ಡದಾದ, ವ್ಯಾಪಕವಾದ ದೂರಸಂಪರ್ಕ ಸೇವೆ, ಸೌಲಭ್ಯಗಳನ್ನು ಒದಗಿಸುವ ಭಾರತ ಸಂಚಾರ ನಿಗಮದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ನೋಕಿಯಾ ಸೀಮನ್ಸ್ ಜಾಲ ಸಂಪರ್ಕ (NSN) ಕೊಂಡಿಗಳನ್ನು ಬಳಸಿಕೊಳ್ಳುವುದರ ಮೂಲಕ ಬಿಎಸ್ಎನ್ಎಲ್ ಗ್ರಾಮೀಣ ಭಾರತದ ಬ್ರಾಡ್ ಬ್ಯಾಂಡ್ ಕಹಳೆಯನ್ನು ಊದಲಿದೆ.
ಬಿಎಸ್ಎನ್ಎಲ್ ಕಂಪನಿಯು ಎನ್ಎಸ್ಎನ್ ಬಹುವಿಧ ಸಂಪರ್ಕ ಸಲಕರಣೆಗಳನ್ನು ತನ್ನ ಕಾರ್ಯವ್ಯಾಪ್ತಿಯಲ್ಲಿ ತೊಡಗಿಸಿಕೊಂಡಾಗ, ಅತಿವೇಗಿ ಇಂಟರ್ನೆಟ್ ಸಂಪರ್ಕಗಳು ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಕೈಗೆಟಕುವ ದರಗಳಲ್ಲಿ ದೊರಕುತ್ತವೆ. ವೈಯಕ್ತಿಕ ಉಪಯೋಗಕ್ಕಾಗಿ ಇಂಟರ್ನೆಟ್ ಬಳಸುವ ಗ್ರಾಹಕರನ್ನಲ್ಲದೆ ಈ ಯೋಜನೆಯ ಪ್ರಯೋಜನವನ್ನು ಸಮುದಾಯ ಸೇವಾ ಕೇಂದ್ರಗಳು ಹಾಗೂ ಇ ಆಡಳಿತ ಕಕ್ಷೆಗೆ ಒಳಪಡುವ ಸಂಸ್ಥೆಗಳು ಪಡೆದುಕೊಳ್ಳುತ್ತವೆ.
ಅತ್ಯಂತ ವೇಗವಾಗಿ ಗ್ರಾಮೀಣ ಪ್ರದೇಶಗಳನ್ನು ಸಂಪರ್ಕಿಸುವ ಈ ಯೋಜನೆಯಿಂದ ಹಳ್ಳಿ ಮತ್ತು ಪಟ್ಟಣ ಪ್ರದೇಶಗಳ ನಡುವಿನ ಅಂತರ (Digital Divide) ಕಡಿಮೆಯಾಗುತ್ತದೆ ಎಂಬ ಆಶಾಭಾವನೆ ತಮ್ಮದು ಎಂದು ಬಿಎಸ್ಎನ್ಎಲ್ ಸಂಸ್ಥೆಯ ಆಡಳಿತ ನಿರ್ದೇಶಕ ಕುಲದೀಪ್ ಗೋಯಲ್ ಹೇಳಿದ್ದಾರೆ. ಭಾರತದಲ್ಲಿ ಸದ್ಯದ ಬ್ರಾಡ್‌ಬ್ಯಾಂಡ್ ಸಂಪರ್ಕ ಅಂಕಿಅಂಶ ಹೀಗಿದೆ : ಒಟ್ಟು ಸಂಖ್ಯೆ 34 ಲಕ್ಷ. ಅದರಲ್ಲಿ ಬಿಎಸ್ಎನ್ಎಲ್ ಪಾಲು 17 ಲಕ್ಷ. ಬ್ರಾಡ್‌ಬ್ಯಾಂಡ್ ಸೇವೆಯನ್ನು ಎಡಿಎಸ್ಎಲ್2+ ತಂತ್ರಜ್ಞಾನದ ಬಳಕೆಯ ಮುಖಾಂತರ ಹಳ್ಳಿಗಳಿಗೂ ವಿಸ್ತರಿಸಿ 25,000 ಹಳ್ಳಿಗಳನ್ನು ತನ್ನ ತೆಕ್ಕೆಗೆ ತಂದುಕೊಳ್ಳಲು ಬಿಎಸ್ಎನ್ಎಲ್ ಯೋಜನೆಯನ್ನು ಹಾಕಿಕೊಂಡಿದೆ.
ಸುಮಾರು 7 ಸಾವಿರ ಲಕ್ಷದಷ್ಟು ಜನತೆಯನ್ನು ಹೊಂದಿರುವ ಗ್ರಾಮೀಣ ಭಾರತ ದೂರಸಂಪರ್ಕ ಕ್ಷೇತ್ರದ ಅಭಿವೃದ್ಧಿಯಲ್ಲಿ ನಿಸ್ಸಂಶಯವಾಗಿ ಮಹತ್ವದ ಪಾತ್ರ ವಹಿಸಲಿದೆ. ಇದರಿಂದಾಗಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ನೋಕಿಯಾ ಸೀಮನ್ಸ್ ನೆಟ್ವರ್ಕ್‌ನ ಭಾರತದ ಮುಖ್ಯಸ್ಥ ಮೈಕೆಲ್ ಕೂಹ್ನರ್ ಹೇಳಿದ್ದಾರೆ.
(ಏಜೆನ್ಸೀಸ್)


Click it and Unblock the Notifications
