ಸಂತಸ ಎರಡು ಪಟ್ಟು ಹೆಚ್ಚಾಗಿದೆ: ದ್ರಾವಿಡ್
ಚೆನ್ನೈ, ಮಾ.30: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ಗಳ ಗಡಿ ದಾಟಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೂರನೇ ಹಾಗೂ ವಿಶ್ವದ ಆರನೇ ಬ್ಯಾಟ್ಸ್ಮನ್ ಆಗಿ ದ್ರಾವಿಡ್ ಹೊರಹೊಮ್ಮಿದ್ದಾರೆ.
ಶನಿವಾರ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್ನಲ್ಲಿ ದ್ರಾವಿಡ್ ಈ ಸಾಧನೆ ಮಾಡಿದ್ದಾರೆ. 120ನೇ ಟೆಸ್ಟ್ ಆಡುತ್ತಿರುವ ದ್ರಾವಿಡ್ 80 ರನ್ಗಳನ್ನು ಪೂರೈಸಿದ ವೇಳೆ ಈ ಎತ್ತರವನ್ನು ಏರಿದರು. ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿದ್ದ 30 ಸಾವಿರದಷ್ಟು ಪ್ರೇಕ್ಷಕರು ಎದ್ದು ನಿಂತು ದ್ರಾವಿಡ್ ಅವರ ಸಾಧನೆಗೆ ಗೌರವ ಸಲ್ಲಿಸಿದರು.
ತೆಂಡೂಲ್ಕರ್(11,782) ಮತ್ತು ಗವಾಸ್ಕರ್ (10,122) ಇವರು 10 ಸಾವಿರ ರನ್ ಗಳಿಸಿದ ಭಾರತದ ಮತ್ತಿಬ್ಬರು ಕ್ರಿಕೆಟಿಗರು. ಉಳಿದವರೆಂದರೆ ಬ್ರಿಯಾನ್ ಲಾರಾ(11,953), ಸ್ಟೀವ್ ವಾ(10,927) ಮತ್ತು ಅಲನ್ ಬಾರ್ಡರ್(11,174). ಹತ್ತ್ತು ಸಾವಿರ ರನ್ಗಳಿಸಿದ ಆಟಗಾರರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಸಮಾನ ಪ್ರಾಬಲ್ಯ ಹೊಂದಿದ್ದವು. ದ್ರಾವಿಡ್ 10 ಸಾವಿರ ರನ್ ಗಡಿದಾಟುವ ಮೂಲಕ ಭಾರತ ಮುಂಚೂಣಿಯಲ್ಲಿದೆ.
ದ್ರಾವಿಡ್ ಮೂರನೆ ಕ್ರಮಾಂಕದಲ್ಲಿ 150ನೇ ಇನ್ನಿಂಗ್ಸ್ ಆಡುವ ಮೂಲಕ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಖ್ಯಾತಿಗೂ ಪಾತ್ರರಾದರು. ನನ್ನ ಕುಟುಂಬದವರ ಸಮ್ಮುಖದಲ್ಲಿ ಈ ಸಾಧನೆ ಮಾಡಿದ್ದೇನೆ. ಇದರಿಂದ ಎರಡು ಪಟ್ಟು ಸಂತಸವಾಗುತ್ತಿದೆ ಎಂದು ದ್ರಾವಿಡ್ ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು.
(ದಟ್ಸ್ಕನ್ನಡ ಕ್ರೀಡಾವಾರ್ತೆ)


Click it and Unblock the Notifications
