ಕೇಂದ್ರ ಸರ್ಕಾರಿ ನೌಕರ ವೇತನ ಶೇ.40 ಹೆಚ್ಚಳ?
ನವದೆಹಲಿ, ಮಾ.24: ಸೋಮವಾರ ಕೇಂದ್ರ ಸರ್ಕಾರಕ್ಕೆ 6ನೇ ವೇತನ ಆಯೋಗದ ವರದಿಯನ್ನು ಸಲ್ಲಿಸಲಾಯಿತು. ಸರ್ಕಾರ ಈ ವರದಿಯನ್ನು ಅಂಗೀಕರಿಸಿದರೆ ಅಂದಾಜು 40 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಶೇ.40ರಷ್ಟು ವೇತನ ಹೆಚ್ಚಾಗಲಿದೆ.
ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ನೇತೃತ್ವದ ಆಯೊಗ ತನ್ನ ವರದಿಯನ್ನು ಹಣಕಾಸು ಸಚಿವ ಪಿ.ಚಿದಂಬರಂ ಅವರಿಗೆ ಖುದ್ದಾಗಿ ಇಂದು ಬೆಳಗ್ಗೆ ಸಲ್ಲಿಸಿತು. 6ನೇ ವೇತನ ಆಯೋಗವನ್ನು ಕೇಂದ್ರ ಸರ್ಕಾರ 2006ರಲ್ಲಿ ರಚಿಸಿತ್ತು. ಈ ಆಯೋಗದ ವರದಿಯಿಂದ ಕೇಂದ್ರ ಸರ್ಕಾರಿ ನೌಕರರ ವೇತನ, ಮನೆ ಬಾಡಿಗೆ ಭತ್ಯೆ ಹಾಗೂ ಸಾರಿಗೆ ಭತ್ಯೆಗಳೂ ಗಣನೀಯವಾಗಿ ಹೆಚ್ಚಾಗಲಿವೆ. ರಕ್ಷಣಾ ಮತ್ತು ಅರೆಸೇನಾಪಡೆಯ ಸಿಬ್ಬಂದಿ ಸಹ 6ನೇ ವೇತನ ಆಯೋಗದ ಲಾಭ ಪಡೆಯಲಿದ್ದಾರೆ.
ವೇತನ ಆಯೋಗದ ಶಿಫಾರಸುಗಳು ಜ.1, 2006ರಿಂದ ಜಾರಿಯಾಗಲಿವೆ. ಈಗಾಗಲೇ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನಕ್ಕೆ ತುಟ್ಟಿಭತ್ಯೆಯ ಶೇ.50ರಷ್ಟನ್ನು ಸೇರಿಸಲು ನಿರ್ಧರಿಸಿದೆ. ಬಜೆಟ್‌ನಲ್ಲಿ ವೇತನ ಹೆಚ್ಚುಸುವ ಬಗ್ಗೆ ಕೇಂದ್ರ ಹಣಕಾಸು ಸಚಿವರು ಯಾವುದೇ ಪ್ರಸ್ತಾಪವನ್ನು ಮಾಡಿರಲಿಲ್ಲ. ಚುನಾವಣೆಗಳು ಸಮೀಪದಲ್ಲಿರುವ ಕಾರಣ 6ನೇ ವೇತನ ಆಯೋಗದ ವರದಿಯನ್ನು ಅಂಗೀಕರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
(ಏಜೆನ್ಸೀಸ್)












Click it and Unblock the Notifications