ನಕಲಿ ಪ್ರಶ್ನೆ ಪತ್ರಿಕೆ ಜಾಲ ಬಯಲು : ಆರು ವಂಚಕರ ಬಂಧನ
ಬೆಂಗಳೂರು, ಮಾ.24 : ಪದವಿಪೂರ್ವ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಹಂಚುವ ನೆಪದಲ್ಲಿ ಹಣ ಕೀಳುತ್ತಿದ್ದ ನಕಲಿ ಪ್ರಶ್ನೆ ಪತ್ರಿಕೆ ಜಾಲವನ್ನು ಸೋಮವಾರ ಪೊಲೀಸರು ಬಯಲಿಗೆಳೆದಿದ್ದಾರೆ.
ಅತ್ಯಂತ ವ್ಯವಸ್ಥಿತವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ವಿದ್ಯಾರ್ಥಿಯೊಬ್ಬ ಸೇರಿದಂತೆ 6 ಜನರ ತಂಡವನ್ನು ಬಂಧಿಸಲಾಗಿದ್ದು, ಅವರಿಂದ 1.12 ಲಕ್ಷ ರು.ಹಣ, ಎರಡು ಮೊಬೈಲ್ ಫೋನ್ ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಆಯುಕ್ತ ಎಸ್.ಜಿ.ಹೆಗಡೆ ಅವರು ಸುದ್ದಿಗಾರರಿಗೆ ತಿಳಿಸಿದರು.
ಈ ತಂಡದ ನೇತೃತ್ವವಹಿಸಿದ್ದ ಸಿ.ಶಿವಕುಮಾರ್ ಎಂಬಾತ ವಿದ್ಯಾರ್ಥಿಗಳಿಂದ ಪ್ರತಿ ಪೇಪರಿಗೆ 15 ಸಾವಿರ ರು.ಯಂತೆ ಹಣ ಪೀಕಿಸುತ್ತಿದ್ದ. ಆತ ಕಾರ್ಪೊರೇಷನ್ ವಿದ್ಯಾರ್ಥಿನಿಯರ ಶಾಲೆಯಲ್ಲಿ ಸಹಾಯಕ ಮೇಷ್ಟ್ರಾಗಿ ಕೆಲಸ ಮಾಡುತ್ತಿದ್ದ. ಅಸಲಿ ಪ್ರಶ್ನೆ ಪತ್ರಿಕೆಗಳು ತಮ್ಮ ಬಳಿ ಇವೆಯೆಂಬ ಸುದ್ದಿಯನ್ನು ಎಲ್ಲೆಡೆ ಹಬ್ಬಿಸಿ ನಕಲಿ ಪ್ರಶ್ನೆ ಪತ್ರಿಕೆಯನ್ನು ಇವರು ಮಾರುತ್ತಿದ್ದರು. ಈ ಗಾಳಿಸುದ್ದಿಯನ್ನು ನಂಬಿದ ಅನೇಕ ವಿದ್ಯಾರ್ಥಿಗಳು ಹಣ ಚೆಲ್ಲಿ ಇಂಗು ತಿಂದ ಮಂಗನಂತಾಗಿದ್ದಾರೆ.
ಈ ಜಾಲದ ವಂಚನೆಯ ಸುದ್ದಿ ತಲುಪಿದ್ದಂತೆ ಶಿಕ್ಷಣ ಮಂಡಳಿ ವಿದ್ಯಾರ್ಥಿಯೊಬ್ಬನನ್ನು ಮುಂದಿಟ್ಟುಕೊಂಡು ಅವರಲ್ಲಿ ಪ್ರಶ್ನೆ ಪತ್ರಿಕೆ ಪಡೆಯುವ ನೆಪದಲ್ಲಿ ಬಲೆಯನ್ನು ಬೀಸಿತು. ಇಂದು ನಡೆಯಬೇಕಾಗಿದ್ದ ಗಣಿತ ಪ್ರಶ್ನೆ ಪತ್ರಿಕೆ ತಮ್ಮ ಬಳಿಯಿದೆ ಎಂದು ಅವರಿಂದ ದೂರವಾಣಿ ಕರೆ ಬರುತ್ತಿದ್ದಂತೆ ವಿದ್ಯಾರ್ಥಿ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ. ಸ್ಥಳಕ್ಕೆ ಧಾವಿಸಿದ ಪೊಲೀಸರು ವಂಚಕರನ್ನು ಬಂಧಿಸಿದರು.
ಬಂಧಿತರಲ್ಲಿ ಒಬ್ಬನಾಗಿರುವ ವಿದ್ಯಾರ್ಥಿ ತಾನು ತಪ್ಪಿತಸ್ಥನಲ್ಲ ಎಂದು ಬೇಡಿಕೊಂಡಿದ್ದರಿಂದ ಆತನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
ಯಾವುದೇ ಪ್ರಶ್ನೆ ಪತ್ರಿಕೆ ಹೊರಗಡೆಯೆಲ್ಲೂ ಲಭಿಸದ ಸಾಧ್ಯತೆಯಿಲ್ಲದಿರುವುದರಿಂದ ವಿದ್ಯಾರ್ಥಿಗಳು ಮತ್ತು ಪಾಲಕರು ಇಂಥ ವಂಚನೆಯ ಜಾಲಕ್ಕೆ ಸಿಲುಕಬಾರದೆಂದು ಹೆಗಡೆ ಮನವಿ ಮಾಡಿಕೊಂಡಿದ್ದಾರೆ.
(ಯುಎನ್ಐ)
ಪಿಯು ಪ್ರಶ್ನೆಪತ್ರಿಕೆ ಬಯಲಾಗಿದ್ದರೆ ಈ ಸಂಖ್ಯೆಗೆ ಕರೆ ಮಾಡಿ
2008ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆ ವೇಳಾಪಟ್ಟಿ












Click it and Unblock the Notifications