ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದಗ್‌ನಲ್ಲಿ ಮಳೆಯ ಆಟಾಟೋಪ, ಜನಜೀವವ ಅಸ್ತವ್ಯಸ್ತ

By Staff
|
Google Oneindia Kannada News

A scene in Dharwadಹುಬ್ಬಳ್ಳಿ, ಮಾ.23 : ಬಂಗಾಳಕೊಲ್ಲಿಯಲ್ಲುಂಟಾದ ವಾಯುಭಾರ ಕುಸಿತದಿಂದಾಗಿ ಎರಡು ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕರ್ನಾಟಕದ ಗದಗ್ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಗದಗ್ ಜಿಲ್ಲೆಯ ನರಗುಂದ ತಾಲೂಕಿನಲ್ಲಿರುವ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು ಹೊಲಗದ್ದೆಗಳಿಗೆ ನೀರು ನುಗ್ಗಿದ್ದರಿಂದ ಬೆಳೆಗಳಿಗೆ ಅಪಾರ ಹಾನಿ ಸಂಭವಿಸಿದೆ. ಈ ಅಕಾಲಿಕ ಮಳೆಯಿಂದಾಗಿ ನೂರಾರು ಮನೆಗಳು ನೆಲಸಮಗೊಂಡಿವೆ. ಅನೇಕ ಜನ ಮನೆಮಠ ಕಳೆದುಕೊಂಡು ನಿರ್ವಸಿತರಾಗಿದ್ದಾರೆ. ಪ್ರವಾಹ ಭೀತಿಯಿರುವ ಪ್ರದೇಶದಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಕಾರ್ಯವನ್ನು ಜಿಲ್ಲಾಡಳಿತ ಕೈಗೊಂಡಿದೆ.

ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಮಳೆಯಿಂದಾಗಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ರಸ್ತೆಗಳಿಗೆ ತೀವ್ರ ಹಾನಿಯುಂಟಾಗಿದೆ ಎನ್ನಲಾಗಿದೆ. ಇದರಿಂದಾಗಿ ಬಿಜಾಪುರಕ್ಕೆ ಸಾಗುವ ವಾಹನಗಳು ರಾಮದುರ್ಗ ಮಾರ್ಗವಾಗಿ ಚಲಿಸುತ್ತಿವೆ.

ನರಗುಂದ ತಾಲೂಕಿನ ಯಾವಗಲ್‌ನಲ್ಲಿಯೂ ಸುರಿಯುತ್ತಿರುವ ಮಳೆಯಿಂದಾಗಿ ಬೆಣ್ಣಿಹಳ್ಳಕ್ಕೆ ಪ್ರವಾಹ ಬಂದಿದೆ. ಮಳೆಯ ಹೊಡೆತಕ್ಕೆ ಗೋಧಿ, ಜೋಳ, ಕಡಲೆ ಬೆಳೆಗಳಿಗೆ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ನಿರತವಾಗಿರುವ ಜಿಲ್ಲಾಡಳಿತೆ ಬೆಳೆಹಾನಿಯ ಸಮೀಕ್ಷಾ ಕಾರ್ಯವನ್ನು ಇನ್ನೂ ಕೈಗೊಂಡಿಲ್ಲ.

ಕಳೆದೆರಡು ದಿನಗಳಿಂದ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿಯೂ ನಿರಂತರವಾಗಿ ಮಳೆ ಸುರಿದಿದೆ. ಭಾನುವಾರ ಈ ಪ್ರದೇಶದಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಆದರೆ, ಗದಗ್ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಇನ್ನೂ ಮುಂದುವರೆದಿದೆ. ಉತ್ತರ ಕರ್ನಾಟಕದ ಬೆಳಗಾವಿ, ಬಿಜಾಪುರ, ಧಾರವಾಡ, ರಾಯಚೂರು ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದರೂ ಹೋಳಿ ಹಬ್ಬದ ಆಚರಣೆಗೆ ಅಡ್ಡಿಯುಂಟಾಗಿಲ್ಲ. ಮಳೆಯಲ್ಲಿಯೇ ರಂಗಿನಾಟವನ್ನು ಆಡಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X