ಆಸ್ಟ್ರೇಲಿಯಾದ ಪಾಕ್ ಕ್ರಿಕೆಟ್ ಸರಣಿ ಬರಖಾಸ್ತು
ಕರಾಚಿ, ಮಾ.11 : ಪಾಕಿಸ್ತಾನದಲ್ಲಿ ಭಯೋತ್ಪಾದನೆ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮುಂಬರುವ ಪಾಕ್ ಪ್ರವಾಸದ ಕ್ರಿಕೆಟ್ ಸರಣಿಯಲ್ಲಿ ಆಡುವುದಿಲ್ಲ ಎಂದು ಹೇಳಿಕೆ ನೀಡಿದೆ.
ಪಾಕ್ ಸರಣಿ ಮಾರ್ಚ್ 29ರಿಂದ ಶುರುವಾಗಬೇಕಿತ್ತು. ಆದರೆ ಆಸ್ಟ್ರೇಲಿಯಾ ಪಂದ್ಯವಾಡಲಿರುವ ಲಾಹೋರ್‌ನಲ್ಲಿಯೇ ಇಂದು ಬೆಳಿಗ್ಗೆ ಘಟಿಸಿದ ಬಾಂಬ್ ಸ್ಫೋಟದಲ್ಲಿ 25ಕ್ಕೂ ಹೆಚ್ಚಿನ ಜನ ಹತರಾಗಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರಣಿಯಿಂದ ಹಿಂಜರಿದಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಹೇಳಿಕೆಯನ್ನು ದೃಢೀಕರಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿಓಓ ಶಫೀಕ್ ನಗ್ಮಿ, ಇದರಿಂದ ನಮಗೆ ನಿರಾಶೆಯಾಗಿದೆ ಎಂದು ಹೇಳಿದ್ದಾರೆ.
ಪಾಕ್ ಸರಣಿಯನ್ನು ಸದ್ಯಕ್ಕೆ ಮುಂದೂಡಲಾಗಿದ್ದು ಮುಂದಿನ ದಿನಾಂಕವನ್ನು ಬರುವ ದಿನಗಳಲ್ಲಿ ತಿಳಿಸಲಾಗುವುದು ಎಂದು ಎರಡೂ ಕ್ರಿಕೆಟ್ ಮಂಡಳಿಯ ಜಂಟಿ ಹೇಳಿಕೆ ತಿಳಿಸಿದೆ. ಸರಣಿಯ ಮುಂದಿನ ದಿನಾಂಕವನ್ನು ನಿಗದಿಪಡಿಸಲು ಬರುವ ವಾರದ ಕೊನೆಯಲ್ಲಿ ಪಾಕ್ ಮಂಡಳಿ ಅಧ್ಯಕ್ಷ ನಸೀಮ್ ಅಶ್ರಫ್ ಮತ್ತು ಆಸ್ಟ್ರೇಲಿಯಾ ಮಂಡಳಿಯ ಓ ಕಾನರ್ ದುಬೈನಲ್ಲಿ ಸಭೆ ನಡೆಸಲಿದ್ದಾರೆ. ಆದರೆ, ಐಸಿಸಿಯ ಕ್ರಿಕೆಟ್ ವೇಳಾಪಟ್ಟಿಯ ಪ್ರಕಾರ ಇವೆರಡೂ ರಾಷ್ಟ್ರಗಳು ಇತರ ರಾಷ್ಟ್ರಗಳೊಡನೆ ಬಿಡುವಿಲ್ಲದ ಕ್ರಿಕೆಟ್ ಆಡುತ್ತಿರುವುದರಿಂದ ಸರಣಿಯೇ ಬರಖಾಸ್ತಾಗುವ ಸಾಧ್ಯತೆಯಿದೆ.
ಪಾಕಿಸ್ತಾನದಲ್ಲಿ ಅರಾಜಕತೆ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ 2002ರಲ್ಲಿ ಮಾಡಿದಂತೆ ತಟಸ್ಥ ಸ್ಥಳದಲ್ಲಿ ಸರಣಿ ನಡೆಸವ ಸಾಧ್ಯತೆಯನ್ನು ಪಾಕ್ ಕ್ರಿಕೆಟ್ ಮಂಡಳಿ ತಳ್ಳಿಹಾಕಿದೆ.
ಇಂಥ ಪರಿಸ್ಥಿಯಲ್ಲಿ ಪಾಕಿಸ್ತಾನದಲ್ಲಿ ಆಡುವುದು ಅಪಾಯಕಾರಿ ಎಂದು ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಆಂಡ್ರೂ ಸೈಮಂಡ್ಸ್ ಮತ್ತು ಬ್ರೆಟ್ ಲೀ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
(ಏಜೆನ್ಸೀಸ್)


Click it and Unblock the Notifications
