ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀನುಗಳು ಸಾರಾಗಿ,ಬಾತುಕೋಳಿಗಳು ಬಿರಿಯಾನಿಯಾಗಿ..

By Staff
|
Google Oneindia Kannada News

ಬೆಂಗಳೂರಿನಲ್ಲಿ ಆಮ್ಲಜನಕ, ಹಸಿರು, ತಂಗಾಳಿ ಅಳಿದುಳಿದಿದ್ದರೆ ಅದು ಲಾಲ್ ಬಾಗ್ ಮತ್ತು ಕಬ್ಬನ್ ಉದ್ಯಾನವನದಲ್ಲಿ ಸಿಗಬೇಕು. ಜಾಗಿಂಗ್ ಮಾಡುವವರಿಗೆ, ಪ್ರೀತಿ ಮಾಡುವವರಿಗೆ, ವಿರಹಿಗಳಿಗೆ, ಪರಿತ್ಯಕ್ತರಿಗೆ, ಒಂಟಿ ಜೀವಿಗಳಿಗೆ, ಮನೆಬಿಟ್ಟು ಓಡಿಬಂದವರಿಗೆ, ಸ್ವಲ್ಪ ನೆಮ್ಮದಿ ಮತ್ತು ಚೂರು ಸಾಂತ್ವನ ನೀಡುವ ತಾಣಗಳಿವು. ಕಡ್ಳೆಕಾಯಿ ಮಾರುವ ತಿಗಳಮ್ಮ, ರವಿ ಮತ್ತು ರಂಗಜ್ಜಿಗೆ ನಾಕು ಕಾಸು ಸಂಪಾದನೆ ಮಾಡಿಸುವ ಜಾಗವೂ ಇದು.

ಇಂಥ ಜಾಗ ಸ್ವಚ್ಛವಾಗಿರಬೇಕು, ಸುರಕ್ಷಿತವಾಗಿರಬೇಕು, ಆಹ್ಲಾದಕರವಾಗಿರಬೇಕು ಎಂದು ಬಯಸುವವರಿಗೆ ಏನಾದರೊಂದು ಅಪ್ರಿಯ ಸುದ್ದಿ ಉದ್ಯಾನವನದಿಂದ ಹೊರಬರುತ್ತಲೇ ಇರುತ್ತದೆ.ಅಲ್ಲಿ ನಿತ್ಯ ನಡೆದಾಡುವ ದಟ್ಸ್ ಕನ್ನಡ ಓದುಗ ಸಿ. ಎ. ಸಂಜೀವಮೂರ್ತಿ ಲಾಲ್ ಬಾಗಿನ ಕೆರೆಯಂಗಳದಲ್ಲಿ ಜನವರಿ 24 ರ ಬೆಳಿಗ್ಗೆ ಕಂಡ ಒಂದು ನಿತ್ಯ ದರೋಡೆ ಪ್ರಸಂಗವನ್ನು ನಮ್ಮ ವೆಬ್ ಸೈಟ್ ಗಮನಕ್ಕೆ ತಂದಿದ್ದಾರೆ.

ಚಿತ್ರದಲ್ಲಿರುವಂತೆ ಲಾಲ್ ಬಾಗ್ ಪಶ್ಚಿಮ ದ್ವಾರದ ಬಳಿ ಕೆರೆಯ ಮೆಟ್ಟಿಲ ಮೇಲೆ ಒಂದು ಅಥವಾ ಎರಡು ಹರಿಗೋಲು ದಿನವೂ ಕಾಣುತ್ತದೆ. ಗಮನಿಸಿ. ಇದು ಪ್ರವಾಸಿಗಳಿಗಲ್ಲ, ಜಲವಿಹಾರಿಗಳಲ್ಲ. ಯಾರಿಗಾಗಿ ಅಂದರೆ, ಇದರ ಸಹಾಯದಿಂದ ಪ್ರತಿದಿನವೂ ಮೀನುಗಳು, ಬಾತು ಕೋಳಿಗಳು ಸ್ವಲ್ಪ ಸ್ವಲ್ಪವೆ ಮಾಯಮಾಡುವವರಿಗಾಗಿ ಇದೆ. ಈ ಕೆರೆಯಂಚಿನಲ್ಲಿ 2 ರಿಂದ 3 ಕೆ ಜಿ ವರೆಗೂ (ದಡದಿಂದ ನೋಡಿದರೆ) ತೂಗುವಷ್ಟು ಗಾತ್ರವುಳ್ಳ ಸಾವಿರಾರು ಮೀನುಗಳಿದ್ದವು. ಆ ಸಂಖ್ಯೆ ಕ್ರಮೇಣ 100, 150 ಕ್ಕೆ ಇಳಿದಿದೆ.

ಈ ಮೀನುಗಳನ್ನು ಕೆರೆಯಲ್ಲಿ ಬಿಟ್ಟಿರುವವರು ಲಾಲ್ ಬಾಗ್ ಆಡಳಿತ ವರ್ಗ. ಮೀನುಗಳನ್ನು ಸಾಕುತ್ತಿರುವವರು ಬೆಳಗಿನ ಹೊತ್ತು ಲಾಲ್ ಬಾಗ್ ಗೆ ವಾಕಿಂಗ್ ಗೆ ಬರುವವರು ಹಾಕುವ ಬ್ರೆಡ್, ಬನ್, ಬಿಸ್ಕತ್, ಪುರಿ ಇತ್ಯಾದಿ. ಕೊಳ್ಳೆ ಹೊಡೆಯುತ್ತಿರುವವರು ಕೆರೆ ಕ್ಲೀನ್ ಮಾಡುತ್ತೇವೆಂದು ಟೆಂಡರ್ ಅಥವಾ ಕಾಂಟ್ರಾಕ್ಟ್ ತೆಗೆದುಕೊಂಡಿರುವವರು.( ಆದರೆ ಕೆರೆಯಲ್ಲಿ ಕಸ, ಪ್ಲಾಸ್ಟಿಕ್, ಕಡ್ಡಿ ಎಲ್ಲವೂ ಹಾಗೇ ತಿಂಗಳಾನು ಗಟ್ಟಳೆಯಿಂದ ಬಿದ್ದಿದೆ).ಸರಕಾರ ಕೊಡುವ ಸಂಬಳ ತಿನ್ನುತ್ತಿರುವ ನಾಲ್ಕೂ ಗೇಟ್ ಗಳನ್ನು ಕಾಯುತ್ತಿರುವ ಸಿಬ್ಬಂದಿ ಏನು ಮಾಡುತ್ತಿದ್ದಾರೆ?

ಹಿಂದೆ ಸುಮಾರು 2 ತಿಂಗಳ ಮುಂಚೆ ಕೆಲವರು ಒಂದು ಜೀಪ್ ತೆಗೆದುಕೊಂಡು ಬಂದು ಕೆರೆಯ ದಡದ ಮೇಲೆಯೇ ನಿಲ್ಲಿಸಿ ನೂರಾರು ಬಾತು ಕೋಳಿಗಳನ್ನು ಬೆಳಿಗ್ಗೆ ಸುಮಾರು 6 ಗಂಟೆಯಲ್ಲಿ ಹಿಡಿದು ಅಪಹರಿಸುತ್ತಿರುವಾಗ ಅಲ್ಲಿ ನಡಿಗೆದಾರರ ಸಂಘದವರೂ ಹಾಗೂ ಇತರೇ ವಾಕ್ ಮಾಡುವವರೂ ಸೇರಿ ಅವರನ್ನು ( ಕಾಂಟ್ರಾಕ್ಟ್ ದಾರರನ್ನು ) ಥಳಿಸಿ ಪೋಲೀಸರಿಗೊಪ್ಪಿಸಿದ್ದರು. ಈಗ ಬಡ ಮೀನುಗಳ ಸರದಿ. ಹಿಂದೆ 200 ರಿಂದ 300 ಬಾತು ಕೋಳಿಗಳಿದ್ದವು. ಈಗ 25 ಇದ್ದರೆ ಹೆಚ್ಚು. ಸೂಕ್ಷ್ಮವಾಗಿ ಗಮನಿಸಿದರೆ ಕೆರೆಯಲ್ಲಿ ಒಂದು ಲೈನ್ ನಲ್ಲಿ ಬೆಂಡ್ ( ಥರ್ಮೋಕೋಲ್ ಚೂರುಗಳು ) ತೇಲುವುದು ಕಾಣುತ್ತದೆ. ಅದೇ ಮೀನಿನ ಬಲೆಗೆ ಸಾಕ್ಷಿ. ಬೆಳಿಗ್ಗೆ ಸುಮಾರು 6 ರಿಂದ 7 ಗಂಟೆವರೆಗೆ ಲಾಲ್ ಬಾಗ್ ಬ್ರಿಡ್ಜ್ ಮತ್ತು ಓವರ್ ಫ್ಲೋ ಮೆಟ್ಟಿಲ ಬಳಿ ಮೀನುಗಳು ಬಾಯ್ ಬಾಯ್ ಬಿಟ್ಟು ಕಾಯುತ್ತಿರುತ್ತವೆ.

ಎಲ್ಲ ಮೀನುಗಳೂ ಯಾರದೋ ಮನೆಯಲ್ಲಿ ಸಾಂಬಾರಾಗುವ ಮುನ್ನ, ಬಾತುಕೋಳಿಗಳು ಬಿರಿಯಾನಿಯಾಗುವ ಮುನ್ನ ಸಂಬಂಧ ಪಟ್ಟವರು ಜಲಚರಗಳ ಬೇಟೆಯನ್ನು ಹತ್ತಿಕ್ಕಬೇಕು. ಉದ್ಯಾನವನಕ್ಕೆ ನಿತ್ಯ ಭೇಟಿಕೊಡುವ ಸಾವಿರಾರು ವೀಕ್ಷಕರಿಗೆ ಸಂತೋಷವನ್ನು ಕಾಪಾಡಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X