ಉಡುಪಿ ಸುಂದರಗೊಳಿಸಲು ಪುತ್ತಿಗೆಶ್ರೀ ಕಂಕಣ
ಉಡುಪಿ, ಜ.21 : ಸಪ್ತಮಠಗಳ ವಿರೋಧದ ನಡುವೆಯೂ ಪರ್ಯಾಯ ಪೀಠವೇರಿದ ಪುತ್ತಿಗೆ ಶ್ರೀಗಳಾದ ಸುಗುಣೇಂದ್ರ ತೀರ್ಥರು ತಮ್ಮ ಕಾರ್ಯಾವಧಿಯಲ್ಲಿ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಹಾಕಿಕೊಂಡಿರುವ ಯೋಜನೆಗಳ ರೂಪುರೇಷೆಗಳನ್ನು ಸೋಮವಾರ ಅವರು ಸರ್ವಜ್ಞಪೀಠವೇರಿದನಂತರ ನಡೆಸಿದ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪರ್ಯಾಯ ಅಧಿಪತಿಯಾಗಿರುವ ಎರಡು ವರ್ಷಗಳಲ್ಲಿ ಹಮ್ಮಿಕೊಂಡಿರುವ ಎಲ್ಲ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸರ್ವಪ್ರಯತ್ನ ಮಾಡುವುದಾಗಿ ಅವರು ಹೇಳಿದರು.
ಯೋಜನೆಗಳು
1) ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಲು 'ಶ್ರೀಕೃಷ್ಣ ನ್ಯಾಯಾಲಯ'.
2) ಉಡುಪಿಯನ್ನು ಸುಂದರ ಉಡುಪಿಯನ್ನಾಗಿಸುವ ಬೃಹತ್ ಕನಸು. ಇದಕ್ಕಾಗಿ ಅನೇಕ ಸರ್ಕಾರೇತರ ಸಂಘಟನೆಗಳು ಮತ್ತು ವಿದೇಶಿ ಸಂಸ್ಥೆಗಳು ಹಣಹೂಡಲು ಮುಂದೆ ಬಂದಿವೆ.
3) ಅನ್ನ ಸಂತರ್ಪಣೆಗಾಗಿ 'ಅನ್ನ ಬ್ರಹ್ಮ' ಕುಟೀರ.
4) ಭಕ್ತರಿಗೆ ತಂಗಲು 'ವಿಶ್ವ ಯಾತ್ರಿ ನಿವಾಸ'.
ಮತ್ತು
5) ಮಹತ್ವಾಕಾಂಕ್ಷೆಯ 'ವಿಶ್ವ ಮಾಧ್ವ ಮಠ' ಸ್ಥಾಪನೆ.
ಪರ್ಯಾಯ ಪೀಠವೇರುವ ವಿವಾದ ಕುರಿತಂತೆ ಮಾತನಾಡಿದ ಅವರು, ಈಗ ಅದು ಮುಗಿದ ಅಧ್ಯಾಯ. ಪೇಜಾವರ ಶ್ರೀಗಳು ಸೇರಿದಂತೆ ಎಲ್ಲ ಯತಿಗಳು ಸಂಪೂರ್ಣ ಸಹಕಾರ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ಎಂದಿನಂತೆ ಪೂಜೆ ಸಲ್ಲುತ್ತಿದೆ ಎಂದರು.
(ಯುಎನ್ಐ)












Click it and Unblock the Notifications