ವಿಕಲಚೇತನರಿಗೆ ಬದುಕು ಕೊಟ್ಟ ಡಾ.ಸೇಥಿ ಇನ್ನಿಲ್ಲ
ಜೈಪುರ, ಜ.7: ಕಾಲು ಕಳೆದುಕೊಂಡವರೂ ನಡೆದಾಡುವಂತೆ ಮಾಡಿದ 'ಜೈಪುರ ಕೃತಕ ಕಾಲಿ"ನ ಜನಕ, ಮೂಳೆ ತಜ್ಞ ಡಾ.ಪ್ರಮೋದ್ ಕರಣ್ ಸೇಥಿ (80) ಭಾನುವಾರ(ಜ.6) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಯುದ್ಧದಲ್ಲಿ ಕಾಲು ಕಳೆದುಕೊಂಡವರು, ಪೋಲಿಯೊ ಹಾಗೂ ನೆಲಬಾಂಬ್ ಸ್ಪೋಟದಿಂದ ಕಾಲು ಕಳೆದುಕೊಂಡವರಿಗಾಗಿ ಹಗುರವಾದ, ದೀರ್ಘ ಬಾಳಿಕೆಯ, ಜಲನಿರೋಧಕ ಗುಣಗಳನ್ನು ಹೊಂದಿದ್ದ ಕಡಿಮೆ ವೆಚ್ಚದ ಕೃತಕ ಕಾಲುಗಳನ್ನು ಸೃಷ್ಟಿಸಿದ್ದರು ಡಾ. ಸೇಥಿ. ಇದಕ್ಕೆ ಶೂ ಹಾಕಿ ಅಥವಾ ಹಾಕದೆಯೂ ಬಳಸಬಹುದಾಗಿತ್ತು. 1986ರಲ್ಲಿ ಇದರ ಅಂತಿಮ ರೂಪವನ್ನು ಬೆಳಕಿಗೆ ತರಲಾಯಿತು. ಬಳಿಕ ಇದು ಜೈಪುರ ಕಾಲು ಎಂದೇ ಜನಪ್ರಿಯವಾಯಿತು.
ವಾರಣಾಸಿಯಲ್ಲಿ 1927ರಲ್ಲಿ ಹುಟ್ಟಿದ ಸೇಥಿ ವೈದ್ಯವಿಜ್ಞಾನವನ್ನು ಅಭ್ಯಸಿಸಿದ್ದು ಭಾರತ ಮತ್ತು ಸ್ಕಾಟ್ಲೆಂಡಿನಲ್ಲಿ. ಜೈಪುರದ ಕೀಲು ಕೇಂದ್ರಗಳನ್ನು ಶ್ರೀಲಂಕಾ, ಕಾಂಬೋಡಿಯಾ, ವಿಯಟ್ನಾಂ, ನಿಕಾರಗುವ ಹಾಗೂ ಬಾಂಗ್ಲಾದೇಶಗಳಲ್ಲಿ ಸ್ಥಾಪಿಸಿದ್ದಾರೆ. ಇವರು ಸೃಷ್ಟಿಯ ಜೈಪುರ ಕಾಲುಗಳು ಈಗ ಜಗತ್ತಿನ ಎಲ್ಲೆಡೆ ಇರುವ ವಿಕಲಚೇತನರಿಗೆ ಕಾಲುಕೊಟ್ಟಿವೆ. ನಟಿ, ನರ್ತಕಿ ಸುಧಾ ಚಂದ್ರನ್‌ಗೆ ಈ ಜೈಪುರ ಕಾಲುಗಳು ಅಕ್ಷರಶಃ ಮರುಹುಟ್ಟನ್ನೇ ನೀಡಿದವು. ಕೃತಕ ಕಾಲಿನ ವೈಜ್ಞಾನಿಕ ಅನ್ವೇಷಣೆಗೆ ಗಿನ್ನಿಸ್ ಪ್ರಶಸ್ತಿ ಸೇರಿದಂತೆ 1981ರಲ್ಲಿ ಪದ್ಮಶ್ರೀ, ಏಷ್ಯಾದ ಪ್ರತಿಷ್ಠಿತ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
(ಏಜನ್ಸೀಸ್)











Click it and Unblock the Notifications