ಐದು ಕೋಟಿ ಕನ್ನಡಿಗರಿಗೆ ರಾಜ್ಯಪಾಲ ಠಾಕೂರ್ ಸಂದೇಶ
ಕರ್ನಾಟಕದ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಾಡಿನ ಜನತೆಗೆ ಶುಭ ಹಾರೈಸಿದ್ದಾರೆ. ದೀಪಗಳ ಹಬ್ಬ ನಾಡಿನ ಜನರ ಬದುಕಿನಲ್ಲಿ ಹೊಂಬೆಳಕು ಬೀರಲಿ, ಸುಖ, ಶಾಂತಿ ಮತ್ತು ಸಮೃದ್ಧಿಯನ್ನುಂಟುಮಾಡಲಿ ಎಂದು ಅವರು ತಮ್ಮ ಶುಭ ಸಂದೇಶದಲ್ಲಿ ತಿಳಿಸಿದ್ದಾರೆ.
***
ಮತದಾರರ ಪಟ್ಟಿ ತಯಾರಿಕೆ
ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ವಿಭಾಗದ ವ್ಯಾಪ್ತಿಯ ಬೆಂಗಳೂರು ಶಿಕ್ಷಕರ ಹಾಗೂ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ತಯಾರಿಕೆ ಪ್ರಕ್ರಿಯೆಯನ್ನು ಕಳೆದ ತಿಂಗಳಿನಿಂದ ಪ್ರಾರಂಭಿಸಿದ್ದು, ಮತದಾರರ ಅಂತಿಮ ಪಟ್ಟಿಯನ್ನು ಡಿಸೆಂಬರ್ 31ರಂದು ಬಿಡುಗಡೆ ಮಾಡಲಾಗುವುದೆಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಡು ಮತದಾರರ ಪಟ್ಟಿ ತಯಾರಿಕೆ ಮತ್ತು ಮುದ್ರಣ ಅವಧಿಗೆ ನವೆಂಬರ್ 20ರಂದು ನಿಗದಿಪಡಿಸಿದ್ದು, ಕರಡು ಮತದಾರರ ಪಟ್ಟಿಯನ್ನು ನವೆಂಬರ್ 23ರಂದು ಪ್ರಕಟಿಸಲಾಗುವುದು. ಹಕ್ಕು ಮತ್ತು ಆಕ್ಷೇಪಣೆಗಳನ್ನು ನವೆಂಬರ್ 23ರಿಂದ ಡಿಸೆಂಬರ್ 7ರ ವರೆಗೆ ಸಲ್ಲಿಸಬಹುದಾಗಿದೆ.
ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮತ್ತು ಸೇರ್ಪಡೆಗಳ ಪಟ್ಟಿ ತಯಾರಿಕೆ ಹಾಗೂ ಮುದ್ರಣಕ್ಕೆ ಡಿಸೆಂಬರ್ 27ರಂದು ನಿಗದಿಪಡಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿ ಜಿಲ್ಲಾಧಿಕಾರಿ, ಬೆಂಗಳೂರು ಜಿಲ್ಲೆ ಮತ್ತು ನಿಯೋಜಿತ ಅಧಿಕಾರಿಗಳಾಗಿ ಅವಿಭಾಜಿತ ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳನ್ನು ನಿಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
***
ತೋಟಗಾರಿಕೆ ಬೆಳೆಗಾರರಿಂದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ತೋಟಗಾರಿಕೆ ಇಲಾಖೆಯು 10ಮಂದಿ ಪ್ರಗತಿಪರ ತೋಟಗಾರಿಕೆ ಬೆಳೆಗಾರರಿಗೆ ತೋಟಗಾರಿಕೆ ಪ್ರಶಸ್ತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು ರೂ.15,000 ನಗದು, ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ಒಳಗೊಂಡಿರುತ್ತದೆ.
ಅರ್ಜಿ ಸಲ್ಲಿಸುವ ರೈತರು ಸ್ವಂತ ಜಮೀನು ಹೊಂದಿದ್ದು, ಸ್ವತ: ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ಪ್ರಗತಿಶೀಲ ಧೋರಣೆಯುಳ್ಳ ರೈತರಾಗಿರಬೇಕು.
ಅರ್ಜಿ ನಮೂನೆಗಳನ್ನು ಮತ್ತು ಹೆಚ್ಚಿನ ವಿವರಗಳನ್ನು ಜಿಲ್ಲಾ/ತಾಲ್ಲೂಕು ತೋಟಗಾರಿಕೆ ಕಚೇರಿಗಳಲ್ಲಿ ಅಥವಾ ಲಾಲ್‌ಬಾಗ್ ತೋಟಗಾರಿಕೆ ಮಾಹಿತಿ ಕೇಂದ್ರದಿಂದ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 30ಕೊನೆಯ ದಿನ ಎಂದು ತೋಟಗಾರಿಕಾ ಇಲಾಖೆಯ ಪ್ರಕಟಣೆ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications