ದ್ರಾವಿಡ್ ಬ್ಯಾಟಿಗೆ ತುಕ್ಕು ಹಿಡಿದಿಲ್ಲ, ಇಲ್ಲಿದೆ ನೋಡಿ ಸಾಕ್ಷಿ!
ಮುಂಬಯಿ, ನ.06 : ಪಾಕಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಸರಣಿಯಲ್ಲಿ ಸೆಣಸುವ ಅವಕಾಶದಿಂದ ರಾಹುಲ್ ದ್ರಾವಿಡ್ ವಂಚಿತರಾಗಿದ್ದಾರೆ. ಆ ಸಿಟ್ಟಿಗೋ ಏನೋ ದ್ರಾವಿಡ್ ಮಂಗಳವಾರ(ನ.06) ತಮ್ಮ ಬ್ಯಾಟಿಂಗ್ ನೈಪುಣ್ಯ ತೋರಿಸಿದರು. ಕನ್ನಡ ಹುಡುಗನ ತಾಕತ್ತು ಏನೆಂಬುದನ್ನು ಬಿಂಬಿಸಿದರು. ತಮ್ಮ ಟೀಕಾಕಾರರಿಗೆ ಅವರದು ತೀಕ್ಷ್ಣ ಉತ್ತರ.
ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಮುಂಬೈ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ದ್ರಾವಿಡ್ ಮಿಂಚಿದ್ದಾರೆ. ರಣಜಿ ಟ್ರೋಫಿಯ ನಾಲ್ಕನೇ ಮತ್ತು ಕೊನೆ ದಿನವಾದ ಇಂದು ಡಬ್ಬಲ್ ಸೆಂಚುರಿ ಮುಖಾಂತರ ದ್ರಾವಿಡ್, ಮುಂಬೈಗೆ ದಿಟ್ಟ ಉತ್ತರ ನೀಡಿದ್ದಾರೆ.
ನಿನ್ನೆಯಷ್ಟೇ ಟೀಮ್ ಇಂಡಿಯಾ, ಪಾಕ್ ವಿರುದ್ಧ ಸೆಣಸಿ ಗೆಲುವಿನ ಮಾಲೆ ಧರಿಸಿತ್ತು. ಈಗ ಮುಂಬೈನಲ್ಲಿ ನಡೆಯುತ್ತಿರುವ ರಣಜಿ ಪಂದ್ಯ, ಪ್ರಾಮುಖ್ಯತೆ ಪಡೆದಿದೆ. ದ್ರಾವಿಡ್ ತಮ್ಮ ವೃತ್ತಿ ಬದುಕಿಗೆ 49ನೇ ಸೆಂಚುರಿ ಪೋಣಿಸಿದರು. 34ವರ್ಷದ ಈತ 21ಬೌಂಡರಿ, 5ಸಿಕ್ಸ್ ಗಳನ್ನು 330ಬಾಲ್ ಗಳಲ್ಲಿ ತಮ್ಮ ಖಾತೆಗೆ ಸೇರಿಸಿಕೊಂಡರು.
135ಓವರ್ ಗಳಲ್ಲಿ ಕರ್ನಾಟಕ 6ವಿಕೆಟ್ ನಷ್ಟಕ್ಕೆ 397ರನ್ ಪಡೆದು ಡಿಕ್ಲೇರ್ ಮಾಡಿಕೊಂಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕ 195ರನ್ ಕೂಡಿ ಹಾಕಿತ್ತು. ಅದರಲ್ಲಿ ದ್ರಾವಿಡ್ ಕೊಡುಗೆ ಕೇವಲ 40ರನ್ ಗಳು ಮಾತ್ರ . ಆರಂಭದಲ್ಲಿ ತುಸು ಕಳಪೆ ಆಟ ಪ್ರದರ್ಶಿಸಿದರೂ, ಇಂದಿನ ಪಂದ್ಯದಲ್ಲಿ ದ್ರಾವಿಡ್ ಮ್ಯಾಜಿಕ್ ಸೊಗಸಾಗಿದೆ.
ಪಾಕ್ ವಿರುದ್ಧದ ಮೊದಲ ಎರಡು ಪಂದ್ಯಕ್ಕೆ ದ್ರಾವಿಡ್ ಅವರನ್ನು ಕೈಬಿಡಲಾಗಿದೆ. ಅವರ ಕಳಪೆ ಆಟದಿಂದಾಗಿ ಅವರನ್ನು ಕೈಬಿಡಲಾಯಿತು ಎಂದು ಆಯ್ಕೆ ಸಮಿತಿ ಹೇಳಿದರೂ ಸಹಾ, ಇಲ್ಲಿ ಕ್ರಿಕೆಟ್ ಕಾರಣಗಳಿಗಿಂತ ವೈಯುಕ್ತಿಕ ಕಾರಣಗಳೇ ಮೇಲುಗೈ ಸಾಧಿಸಿರುವುದು ಕ್ರಿಕೆಟ್ ಪ್ರೇಮಿಗಳ ಗಮನಕ್ಕೆ ಬಂದಿದೆ. ದ್ರಾವಿಡ್ ಸೆಂಚುರಿ ಕಂಡು ವೆಂಗ್ ಸರ್ಕಾರ್ ಈಗ ಏನನ್ನುತ್ತಾರೋ? ಪಾಕ್ ವಿರುದ್ಧದ ಕೊನೆಯ ಮೂರು ಪಂದ್ಯಗಳಿಗೆ ಮೋಹಾಲಿಯಲ್ಲಿ ನ.8ರಂದು ಭಾರತ ತಂಡಕ್ಕೆ ಆಯ್ಕೆ ನಡೆಯಲಿದೆ. ದ್ರಾವಿಡ್ ಮತ್ತೆ ತಂಡಕ್ಕೆ ಬರಲಿ ಎಂಬುದು ಅವರ ಅಭಿಮಾನಿಗಳ ಆಗ್ರಹ.
(ದಟ್ಸ್ ಕ್ರಿಕೆಟ್ ವಾರ್ತೆ)












Click it and Unblock the Notifications