ಅರಮನೆ ಮೈದಾನದಲ್ಲಿ ಖರ್ಗೆ, ಧರಂ, ಡಿಕೆಶಿ ಗರ್ಜನೆ

ಅರಮನೆ ಮೈದಾನದಲ್ಲಿ ಖರ್ಗೆ, ಧರಂ, ಡಿಕೆಶಿ ಗರ್ಜನೆ ಬೆಂಗಳೂರು, ನ.05 : ಬೀದಿಗಿಳಿಯೋದ್ರಲ್ಲಿ ನಾವೇನ್ ಕಮ್ಮಿಯಿಲ್ಲ ಅನ್ನೋದನ್ನು ಕಾಂಗ್ರೆಸ್ ಸೋಮವಾರ(ನ.05)ತೋರಿಸಿದೆ. ಈ ಪರಿಣಾಮ ಮೇಖ್ರೀ ಸರ್ಕಲ್ ಸೇರಿದಂತೆ ನಗರದ ವಿವಿಧೆಡೆ ಟ್ರಾಫಿಕ್ ಜಾಮ್. ಇರುವೆ ಥರಾ ವಾಹನಗಳು ತೆವಳುತ್ತಿದ್ದವು.. ಹಿಡಿ ಶಾಪ ಹಾಕುತ್ತಾ ಜನ ಮುಂದೆ ಹೋಗುತ್ತಿದ್ದರು.

ನಗರದ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಜನಾಂದೋಲನ ಸಭೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ರಾಜ್ಯದಲ್ಲಿನ ರಾಜಕೀಯ ದೊಂಬರಾಟ ಕೊನೆಗಾಣಿಸಲು, ಕೂಡಲೇ ವಿಧಾನಸಭೆಯನ್ನು ವಿಸರ್ಜಿಸಬೇಕೆಂದು ಕಾಂಗ್ರೆಸ್ ಮುಖಂಡರು ಒಕ್ಕೊರಲಿನಿಂದ ರಾಜ್ಯಪಾಲರನ್ನು ಒತ್ತಾಯಿಸಿದರು.

ಬಿಜೆಪಿ ಮತ್ತು ಜೆಡಿಎಸ್ ಅವಕಾಶವಾದಿ ಮೈತ್ರಿ ಮಾಡಿಕೊಂಡು, ರಾಜಕೀಯ ವ್ಯಭಿಚಾರ ನಡೆಸಿದ್ದಾರೆ. ಇದನ್ನು ಸಹಿಸಲಾಗದು. ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸಿ, ಹೊಸ ಜನಾದೇಶ ಪಡೆಯುವುದೇ ಸೂಕ್ತ ಮಾರ್ಗ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿ ತಾಕತ್ತಿದ್ದರೇ, ಚುನಾವಣೆ ಎದುರಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದರು.

ಮುಸ್ಲಿಂರು, ಅಲ್ಪಸಂಖ್ಯಾತರು, ಬಡವರು, ದಲಿತರು ಸೇರಿದಂತೆ ಸಮಾಜದ ಎಲ್ಲಾ ವರ್ಗಕ್ಕೂ ಕಾಂಗ್ರೆಸ್ ಆಸರೆ ನೀಡುತ್ತದೆ. ಅವರ ಕೂಗಿಗೆ ದನಿಯಾಗುತ್ತದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಈ ವರ್ಗಗಳಲ್ಲಿ ಆತಂಕ ಮೂಡಿದೆ. ಈ ಜನಾಂದೋಲನ ಯಾತ್ರೆಯನ್ನು ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲೂ ಕಾಂಗ್ರೆಸ್ ಹಮ್ಮಿಕೊಳ್ಳಲಿದೆ ಎಂದು ಖರ್ಗೆ ಹೇಳಿದರು.

ಬೆಳಗ್ಗೆಯೊಂದು, ಸಂಜೆಯೊಂದು ಹೇಳಿಕೆ ನೀಡಿ ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಹೆಚ್.ಡಿ.ಕುಮಾರಸ್ವಾಮಿ, ಮಾಧ್ಯಮಗಳ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಜನರಿಗೆ ಸತ್ಯ ಗೊತ್ತಿದೆ. ಇನ್ನು ಮುಂದೆ ಯಾಮಾರಿಸಲು ಸಾಧ್ಯವಿಲ್ಲ ಎಂದರು.

ಮತ್ತೊಬ್ಬ ಕಾಂಗ್ರೆಸ್ ಮುಖಂಡ ಎನ್.ಧರ್ಮಸಿಂಗ್ ಮಾತನಾಡುತ್ತಾ, ಜೆಡಿಎಸ್ ಬಿಜೆಪಿಯ ಹಿಂದಿನ ಸರ್ಕಾರದಿಂದ ಜನ ಕಂಗೆಟ್ಟಿದ್ದಾರೆ. ಎಲ್ಲಾ ರಂಗಗಳಲ್ಲೂ ಸರ್ಕಾರದ ವೈಫಲ್ಯ ಎದ್ದುಕಾಣುತ್ತಿದೆ. ಹಣಕಾಸು ಇಲಾಖೆ ನಿರ್ವಹಿಸಲು ಸೂಕ್ತವಲ್ಲದ ಯಡಿಯೂರಪ್ಪ ಇಂದು, ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ ಎಂದು ದೂರಿದರು.

ಸೋನಿಯಾ ಮತ್ತು ರಾಹುಲ್ ಗಾಂಧಿ ವಿರುದ್ಧ ಅನಂತಕುಮಾರ್ ಟೀಕೆ ಮಾಡಿದ್ದಾರೆ. ಈ ವಿಚಾರವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಲಿದೆ. ಬೇಜವಾಬ್ದಾರಿಯಿಂದ ಇವರ ಬಗ್ಗೆ ಯಾರೂ ಮಾತಾಡಬಾರದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಕೇಂದ್ರ ಸರ್ಕಾರದ ರಾಜ್ಯ ಸಚಿವ ಕೆ.ಹೆಚ್.ಮುನಿಯಪ್ಪ, ಎಂ.ವಿ.ರಾಜಶೇಖರನ್, ಸಿದ್ದರಾಮಯ್ಯ, ಕೆ.ರೆಹಮಾನ್ ಖಾನ್, ಲೋಕಸಭಾ ಸದಸ್ಯ ಅಂಬರೀಷ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಪೃಥ್ವಿರಾಜ್ ಚೌಹಾಣ್ ಗೈರು ಹಾಜರಾಗಿದ್ದರು. ಆಸ್ಕರ್ ಫರ್ನಾಂಡಿಸ್ ಜನಾಂದೋಲನಕ್ಕೆ ಚಾಲನೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+