ಅಸೆಂಬ್ಲಿ ವಿಸರ್ಜನೆ ಭಯದ ಮಧ್ಯೆಯೇ ರಾಜ್ಯಪಾಲರಿಗೆ ಗಡುವು
(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಅ.30 : ವಿಧಾನಸಭೆ ವಿಸರ್ಜನೆಯ ಭೀತಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ಕಾಡುತ್ತಿದೆ. ಈ ಮಧ್ಯೆ ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ರಾಜ್ಯಪಾಲರಿಗೆ ನೀಡಲಾಗಿದ್ದ 24ಗಂಟೆಗಳ ಗಡುವು ತೀರುತ್ತಾ ಬಂದಿದೆ.
ಮಂಗಳವಾರ(ಅ.30) ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ, ರಾಜ್ಯಪಾಲರ ಬಗ್ಗೆ ನಮಗೆ ವಿಶ್ವಾಸವಿದೆ. ಅವರ ಸುತ್ತಲಿನ ಜನರು ಅಂದ್ರೆ ಕಾಂಗ್ರೆಸ್ಸಿಗರು, ವಿಧಾನ ಸಭೆ ವಿಸರ್ಜಿಸುವಂತೆ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನ ನೀಡದಿದ್ದರೇ, ಬುಧವಾರದಿಂದ ರಾಜ್ಯವ್ಯಾಪಿ ಪ್ರತಿಭಟನೆಯನ್ನು ನಡೆಸಲಿದ್ದೇವೆ ಎಂದರು.
ರಾಜ್ಯಪಾಲರು ನಮ್ಮ ಸಂಖ್ಯಾಬಲವನ್ನು ಗೌರವಿಸುತ್ತಾರೆ. ಒಂದು ವೇಳೆ ತಮ್ಮ ಮೌನವನ್ನು ಅವರು ಮುಂದುವರೆಸಿದರೇ, ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಪ್ರತಿಭಟನೆ ನಡೆಸಲಿದೆ. ಬುಧವಾರ ರಾಜಭವನ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು.
ಈ ಮಧ್ಯೆ ಇಂದು ಬೆಳಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೊತೆ ಬಿ.ಎಸ್.ಯಡ್ಡಿಯೂರಪ್ಪ, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದರು. ಸುದ್ದಿಗಾರರಿಗೆ ಭೇಟಿಯ ವಿವರ ನೀಡಲು ನಿರಾಕರಿಸಿದ ಯಡಿಯೂರಪ್ಪ, ಕಾಂಗ್ರೆಸ್ ಹಿಂಬಾಗಿಲ ರಾಜಕಾರಣ ಮಾಡಲು ಹೊರಟಿದೆ. ಇದು ಒಳ್ಳೆಯದಲ್ಲ, ಜನ ಎಂದಿಗೂ ಕ್ಷಮಿಸುವುದಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ಸರ್ಕಾರ ರಚನೆಯನ್ನು ತಪ್ಪಿಸಿದರೆ, ಕಾಂಗ್ರೆಸ್ ಸರ್ವನಾಶವಾಗುತ್ತದೆ ಎಂದರು.
ಸಿನಿಮಾ ನಟರ ಭೇಟಿ : ಯಡ್ಡಿಯೂರಪ್ಪ ನಿವಾಸಕ್ಕೆ ಚಿತ್ರನಟ ಸಾಯಿಕುಮಾರ್, ಟೆನ್ನಿಸ್ ಕೃಷ್ಣ, ಅಭಿಜಿತ್, ನಿರ್ದೇಶಕ ಸಾಯಿಪ್ರಕಾಶ್ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications