ಅನಂತಮೂರ್ತಿ ಮತ್ತು ಕಾರ್ನಾಡ್ ವಿರುದ್ಧ ಯಡ್ಡಿಯೂರಪ್ಪ ಕಿಡಿ
ಬೆಂಗಳೂರು, ಅ.30 : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಸೇರಿದಂತೆ ಸಾಹಿತ್ಯವಲಯದ ಅನೇಕರು ವಿಧಾನಸಭೆ ವಿಸರ್ಜನೆ ಮಾಡುವಂತೆ ರಾಜ್ಯಪಾಲರನ್ನು ಮಂಗಳವಾರ(ಅ.30) ಒತ್ತಾಯಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅನಂತಮೂರ್ತಿ, ಸದ್ಯದ ಪರಿಸ್ಥಿತಿಯಲ್ಲಿ ಮಧ್ಯಂತರ ಚುನಾವಣೆಯೊಂದೇ ಉಳಿದಿರುವ ಮಾರ್ಗ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಯಾವುದೇ ಕಾರಣಕ್ಕೂ ಆಹ್ವಾನ ನೀಡಬಾರದು ಎಂದರು.
ಸಾಹಿತ್ಯವಲಯದ ಮಿತ್ರರು ಸದ್ಯದ ರಾಜಕೀಯ ಸನ್ನಿವೇಶವನ್ನು ಚರ್ಚೆ ನಡೆಸಿದ್ದೇವೆ. ಚುನಾವಣೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಿದ್ದೇವೆ ಎಂದು ಹೇಳಿದರು. ಪತ್ರಕ್ಕೆ ದೇವನೂರು ಮಹದೇವ, ಡಾ.ಮರುಳಸಿದ್ದಪ್ಪ ಮತ್ತಿತರ ಲೇಖಕರು ಸಹಿ ಹಾಕಿದ್ದಾರೆ.
ಸರ್ಕಾರ ರಚನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಅನಂತಮೂರ್ತಿ ಮತ್ತಿತರ ಸಾಹಿತಿಗಳ ನಿಲುವನ್ನು ಮಾಜಿ ಉಪಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪ ಖಂಡಿಸಿದ್ದು, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಹಿತಿಗಳು ರಾಜಕಾರಣ ಮಾಡಬಾರದು ಎಂದು ಯಾರದೇ ಹೆಸರು ಹೇಳದೇ ದೂರಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications