ಇಂದಾದರೂ ಸೋಲಿನ ಕೊಂಡಿ ಮುರಿವುದೇ ಧೋನಿ ಪಡೆ?
ಮುಂಬಯಿ, ಅ.17 : ಇಂದು(ಅ.17) ಭಾರತ ಮತ್ತು ಆಸ್ಟ್ರ್ಲೇಲಿಯಾ ನಡುವಿನ ಫ್ಯೂಚರ್ ಕಪ್ ಸರಣಿಯ ಅಂತಿಮ ಪಂದ್ಯ. ಕ್ರಿಕೆಟ್ ಎಂದರೆ ಹುಚ್ಚೆದ್ದು ಕುಣಿಯುವ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ, ಒಂದಿಷ್ಟು ಸಹಾ ಕಾತರವಿಲ್ಲ.
ನಗರದ ವಾಂಖೇಡೆ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2.15ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಈ ಸರಣಿಯಲ್ಲಿ ನಾಲ್ಕು ಪಂದ್ಯಗಳನ್ನು ಈಗಾಗಲೇ ಆಸ್ಟ್ರೇಲಿಯಾ ಗೆದ್ದು ಫ್ಯೂಚರ್ ಕಪ್ ಮಡಿಲಿಗೆ ಹಾಕಿಕೊಂಡಿದೆ. ಕೇವಲ ಒಂದು ಪಂದ್ಯವನ್ನಷ್ಟೇ ಭಾರತ ಗೆದ್ದಿದೆ. ಇಂದಿನ ಈ ಏಳನೇ ಪಂದ್ಯದಲ್ಲಾದರೂ ಗೆದ್ದು, ಸೋಲಿನ ಸರಪಣಿಯನ್ನು ಟೀಮ್ ಇಂಡಿಯಾ ಮುರಿಯುವುದೇ ಎಂಬುದು ಕೊನೆಯ ನಿರೀಕ್ಷೆ.
ಈ ಸರಣಿ ಮುಖಾಂತರ ಕಾಂಗರೂ ಪಡೆ ಶಕ್ತಿ ಮತ್ತೊಮ್ಮೆ ಸಾಬೀತಾಗಿದೆ. ಟ್ವಿಂಟಿ20 ವಿಶ್ವಕಪ್ ಗೆದ್ದು ಬೀಗುತ್ತಿದ್ದ ನಾಯಕ ಧೋನಿಗೆ ಇಂದಿನ ಪಂದ್ಯ ಸತ್ವ ಪರೀಕ್ಷೆ.
ಇಂದಿನ ಪಂದ್ಯದಲ್ಲಿ ಸೌರವ್ ಗಂಗೂಲಿ ಒಂದು ವಿಕೆಟ್ ಪಡೆದರೆ ಸಾಕು, ಅವರು ತಮ್ಮ ವೃತ್ತಿ ಬದುಕಿನಲ್ಲಿ 100 ವಿಕೆಟ್ ಗಳ ಸರ್ದಾರ ಆಗಲಿದ್ದಾರೆ. 100 ವಿಕೆಟ್ ಪಡೆದ ಭಾರತದ 12ನೇ ಮತ್ತು ವಿಶ್ವದ 88ನೇ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.
(ದಟ್ಸ್ ಕ್ರಿಕೆಟ್ ವಾರ್ತೆ)












Click it and Unblock the Notifications