• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಮಾರಸ್ವಾಮಿ ಭಾಷಣದಲ್ಲಿ ಕನಸು, ಕವಿತೆ, ಕನವರಿಕೆ!

By Super
|

ಬೆಂಗಳೂರು, ಆಗಸ್ಟ್ 24 : ರಾಮನಗರ ಮತ್ತು ಚಿಕ್ಕಬಳ್ಳಾಪುರ, ಈ ಎರಡು ನೂತನ ಜಿಲ್ಲೆಗಳು ಆಗಸ್ಟ್‌ 23ರಂದು ವಿದ್ಯುಕ್ತವಾಗಿ ಜನ್ಮತಾಳಿವೆ. ರಾಮನಗರ ಜಿಲ್ಲೆಯ ಉದ್ಘಾಟನಾ ಸಮಾರಂಭದಲ್ಲಿ ಕ್ಷೇತ್ರದ ಶಾಸಕ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಡಿದ ಪೂರ್ಣ ಭಾಷಣ ಇಲ್ಲುಂಟು. ಓದಿ.

ಈ ಮಹತ್ವಪೂರ್ಣ ಸಮಾರಂಭದಲ್ಲಿ ಹಾಜರಿರುವ ಎಲ್ಲ ಮಹನೀಯರೆ, ನನ್ನ ಸಚಿವ ಸಹೋದ್ಯೋಗಿ ಮಿತ್ರರೆ, ರಾಮನಗರದ ನನ್ನ ಎಲ್ಲ ಸಹೋದರ ಸಹೋದರಿಯರೆ, ರಾಮನಗರದ ಎಲ್ಲ ನನ್ನ ಸಹೋದರ ಸಹೋದರಿಯರಿಗೆ ನನ್ನ ಅನಂತ ವಂದನೆಗಳು. ರಾಮನಗರದ ಮಣ್ಣಿನಿಂದ ಮೂಡಿಬಂದ ರಾಜಕಾರಣಿಯಾಗಿ, ನೀವು ನನ್ನಲ್ಲಿಟ್ಟ ವಿಶ್ವಾಸವನ್ನು ಇಂದು ಉಳಿಸಿಕೊಂಡಿದ್ದೇನೆ ಎಂಬ ಧನ್ಯಭಾವದೊಂದಿಗೆ ನಿಮ್ಮೆದುರು ನಿಂತಿದ್ದೇನೆ.

ಕಾಡಿನಲ್ಲಿ ನಡೆಯುತ್ತಿದ್ದೆ.

ನನ್ನ ಮುಂದೆ ಎರಡು ಹಾದಿ ತೆರೆದುಕೊಂಡಿತ್ತು.

ಒಂದು ಎಲ್ಲರೂ ತುಳಿದು ಸವೆದ ಹಾದಿ ಮತ್ತೊಂದು ಯಾರೂ ತುಳಿಯದ ಕಠಿಣ ಹಾದಿ

ಕಠಿಣವಾದ ಹಾದಿ ಹಿಡಿದು ನಡೆದೆ

ಬದುಕಿನ ಎಲ್ಲ ಭವ್ಯತೆಯನ್ನೂ ಕಂಡೆ

ಎಂದು ಅರ್ಥಬರುವ ಒಂದು ಕವಿತೆಯನ್ನು ಅಂದು ಓದಿದ್ದೆ. ನನ್ನದು ಕೂಡ ಬಹುಶ: ಯಾರೂ ತುಳಿಯದ ಹಾದಿ ಎಂದೆನಿಸುತ್ತದೆ. ಪುಣ್ಯಭೂಮಿ ಕರ್ನಾಟಕವನ್ನು ಮುನ್ನಡೆಸುವ ಜವಾಬ್ದಾರಿಗೆ ಹೆಗಲು ಕೊಟ್ಟಾಗ ನನ್ನ ಮುಂದಿದ್ದ ಆಯ್ಕೆಗಳು ವಿವಿಧ ರೀತಿಯವಾಗಿದ್ದವು.

ಆದರೆ, ನಾನು ಆರಿಸಿಕೊಂಡದ್ದು ನನ್ನ ಜನರ ನಡುವೆ ಹಾದು ಹೋಗುವ ದಾರಿ. ಆಡಳಿತವನ್ನು ಜನರ ಹತ್ತಿರಕ್ಕೆ ತರಬೇಕು. ಸರ್ಕಾರ ಎಲ್ಲರ ದು:ಖ-ದುಮ್ಮಾನಗಳಿಗೆ ದನಿಕೊಡುವಂತೆ ಆಗಬೇಕು. ಜನಸೇವೆಯ ಮಹದುದ್ದೇಶದಿಂದಲೇ ರಾಜಕಾರಣಕ್ಕೆ ಬಂದ ನನ್ನಿಂದ ನನ್ನ ಜನರಿಗೆ ಕಿಂಚಿತ್ತಾದರೂ ಸುಖ ದೊರೆಯಬೇಕು. ಈ ಉದ್ದೇಶಗಳ ಸಾಧನೆಯ ದಾರಿ ತುಳಿಯಬೇಕು ಎನ್ನುವುದು ನನ್ನ ಹಂಬಲವಾಗಿತ್ತು. ನನ್ನ ತುಡಿತವಾಗಿತ್ತು. ಅದರಲ್ಲಿ ಕೆಲಮಟ್ಟಿಗಾದರೂ ಯಶ ಕಂಡಿದ್ದೇನೆ ಎಂದು ಭಾವಿಸಿದ್ದೇನೆ. ಜನರ ಮಧ್ಯದಲ್ಲಿ ನಿಂತು ಅವರ ದುಖ: ದುಮ್ಮಾನಗಳಿಗೆ ಕಿವಿಗೊಟ್ಟಿದ್ದೇನೆ. ಅವರೊಂದಿಗೆ ಕಲೆತು ಅವರ ಕಷ್ಟಗಳನ್ನು ಅರಿತಿದ್ದೇನೆ. ಸಾಧ್ಯವಾದಷ್ಟೂ ಅವರ ನೋವಿಗೆ ಸ್ಪಂಧಿಸಿದ್ದೇನೆ.

ರಾಮನಗರ ನನಗೆ ಎಂದಿಗೂ ಪವಿತ್ರಭೂಮಿ. ಇಲ್ಲಿನ ಮಣ್ಣು ನನಗೆ ಪರಮ ಪೂಜ್ಯವಾದದ್ದು. ಇಲ್ಲಿನ ಜನ ನನಗೆ ಸ್ವಂತದವರು ಎನ್ನುವ ಭಾವ ನನ್ನ ಮೈನ ಕಣಕಣದಲ್ಲೂ ತುಂಬಿಕೊಂಡಿರುವಂತಹದು.

ಇತಿಹಾಸ ಪ್ರಸಿದ್ದವಾದ ಈ ಭೂಮಿ, ರಾಜ್ಯದ ಬೆಳವಣಿಗೆಯಲ್ಲಿ ವಹಿಸಿರುವ ಪಾತ್ರ ಹಿರಿದಾದದ್ದು. ಆಧುನಿಕತೆಯ ಪ್ರತೀಕವಾದ ಬೆಂಗಳೂರು ಮತ್ತು ನಮ್ಮ ಶ್ರೇಷ್ಠವಾದೊಂದು ಪರಂಪರೆಯ ಸಂಕೇತವಾದ ಮೈಸೂರಿನ ನಡುವೆ ಸೇತುವನ್ನು ನಿರ್ಮಿಸಿದ ರಾಮನಗರ.

ಹೊಸ ಚಿಗುರು ಹಳೇ ಬೇರು

ಕೂಡಿರಲು ಮರ ಸೊಬಗು

ಹೊಸ ಯುಕ್ತಿ ಹಳೆ ತತ್ವಗೂಡೆ ಧರ್ಮ

ಎನ್ನುವ ಮಂಕುತಿಮ್ಮನ ಮಾತನ್ನು ನಿಜ ಮಾಡಿದ ಹೆಗ್ಗಳಿಕೆಯನ್ನು ಹೊಂದಿರುವಂತಹುದು.

ದಕ್ಷಿಣಪ್ರಸ್ತ ಭೂಮಿಯ ಎತ್ತರದ ಪ್ರದೇಶದಿಂದಾವೃತವಾದ ರಾಮನಗರ ಜಿಲ್ಲೆ ಹತ್ತು ಹಲವು ವೈಶಿಷ್ಟ್ಯಗಳ ತೊಟ್ಟಿಲು. ಅದೊಂದು ಪ್ರವಾಸಿಗನ ಸ್ವರ್ಗ. ಜಿಲ್ಲೆಯಾದ್ಯಾಂತ ಹರಡಿ ನಿಂತ ಬೆಟ್ಟ ಗುಡ್ಡ ಸಾಲು, ಅರಳಿ ನಿಂತ ಕಾಡು ಮೇಡಿನ ಗೂಡು, ಗಿರಿ-ಕಂದರ, ಕೋಟೆ-ಕೊತ್ತಲ, ದೇಗುಲ-ಇಮಾರುತುಗಳ ಈ ಸುಂದರ ಜಿಲ್ಲೆ ಪ್ರವಾಸಿಗನನ್ನು ಕೈಬೀಸಿ ಕರೆಯುತ್ತದೆ. ಹಳೆ ಬೇರು, ಹೊಸ ಚಿಗುರಿನೊಂದಿಗೆ ಸೊಬಗು ಸೂಸುವ ಫಲಭರಿತ ಮರದ ಚಿತ್ರ ಕಣ್ಣಮುಂದೆ ಬಂದುದಾದರೆ, ಅದರ ಕೊಂಬೆ ಟಿಸಿಲುಗಳು ಬೆಂಗಳೂರು. ಅದರ ಕಾಂಡ ಬೇರುಗಳು ನೂತನ ಜಿಲ್ಲೆಯಾಗಿ ರೂಪುಗೊಂಡ ರಾಮನಗರ.

ರಾಮನಗರ ಜಿಲ್ಲೆಯ ಸುತ್ತ ಬೆಟ್ಟಗಳ ಮೊರೆತ. ಬೆಟ್ಟಗಳ ತುದಿಯ ಮೇಲೆ ತಲೆಎತ್ತಿ ನಿಂತ ಕೋಟೆ-ದೇವಾಲಯಗಳ ರಮ್ಯತೆಯ ದಾಂಗುಡಿತ. ಭಕ್ತ ಭಾವಿಗೆ ಪುಣ್ಯಕ್ಷೇತ್ರಗಳ ಅಗಣಿತ ಮಡಿಲು. ನಿಸರ್ಗದಾರಾಧಕನಿಗೆ ಕನ್ಮಣ ತುಂಬುವ ಪ್ರಕೃತಿಯ ಒಡಲು.

ಇಲ್ಲಿ ರಾಜಪ್ರತಿನಿಧಿಯಾಗಿದ್ದ ಸರ್ ಬ್ಯಾರಿ ಕ್ಲೋಸ್‌ನ ಹೆಸರಿನಿಂದ ಕ್ಲೋಸ್ ಪೇಟೆ ಎಂದು ಕರೆಯಲಾಗುತ್ತಿದ್ದ ಈ ಊರು ಈಗ ರಾಮನಗರವಾಗಿದೆ. ಅನೇಕ ಮುಸ್ಲಿಂ ಮತ್ತು ಹಿಂದೂ ದೇವಾಲಯಗಳನ್ನು ಹೊಂದಿರುವ ಈ ಊರು ಈಗ ರೇಷ್ಮೆ ಮಾರುಕಟ್ಟೆಯಾಗಿ ಪ್ರಸಿದ್ಧವಾಗಿದೆ. ಇಲ್ಲಿನ ಐಜೂರು ಹಳ್ಳಿಯಲ್ಲಿರುವ ಅನೇಕ ಗುಹೆಗಳು ದೇವಾಲಯಗಳಾಗಿಯೂ ಪೂಜೆಗೊಂಡಿವೆ.

ದೂರದಿಂದ ಶಿವಲಿಂಗದ ಆಕಾರದಂತೆ ಕಾಣುವ ರಾಮನಗರದ ಜಲಸಿದ್ದೇಶ್ವರ ಬೆಟ್ಟ, ಆನೆಯಂತೆ ಕಾಣುವ ಇಲ್ಲಿನ ಕೋಣನಕಲ್ಲು ಬೆಟ್ಟ, ಸುಂದರ ಪರಿಸರದಲ್ಲಿ ಮೂಡಿದ ದೃಷ್ಯಕಾವ್ಯವಾದ ಜಲಸಿದ್ದೇಶ್ವರ ಬೆಟ್ಟದ ಆಕರ್ಷಣೆಗಳು ನನ್ನನ್ನು ಮಂತ್ರಮುಗ್ದನನ್ನಾಗಿಸಿವೆ.

ಖ್ಯಾತ ಲೇಖಕ ಹೆಚ್.ಎಲ್.ನಾಗೇಗೌಡ ಅವರ ಕನಸಿನ ಕೂಸಾದ ಜಾನಪದ ಲೋಕ ಮನವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನನ್ನ ಅನೇಕ ಕೆಲಸಗಳಿಗೆ ಸ್ಪೂರ್ತಿಯಾಗಿದೆ.

ಇತಿಹಾಸವನ್ನು ತೆರೆದಿಡುವ ಜಾಲಮಂಗಲ, ಹೊಯ್ಸಳರ ಕಾಲದ ದೊಡ್ಡಗಂಗವಾಡಿ, ರಮ್ಯವಾದ ರಾಮಗಿರಿ, ಸುಪ್ರಸಿದ್ಧ ರೇವಣಸಿದ್ದೇಶ್ವರ ಬೆಟ್ಟ ಇರುವ ರಾಮನಗರದಂತೆಯೇ ಇದರ ಇತರ ಮೂರು ತಾಲ್ಲೂಕುಗಳಾದ ಚೆನ್ನಪಟ್ಟಣ, ಕನಕಪುರ, ಮಾಗಡಿಗಳಿಗೂ ತನ್ನದೇ ಆದ ಸೊಗಸು-ಸೊಗಡುಗಳು ನನ್ನನ್ನು ಸದಾ ಆಕರ್ಷಿಸಿವೆ.

ಮಾಗಡಿ, ಕಲ್ಯ, ಕುದೂರು, ಸಂಕೀಘಟ್ಟ, ಸಾತನೂರು, ಸಾವನದುರ್ಗ, ಕನಕಪುರ, ಕಬ್ಬಾಳು, ಅಚ್ಚಲು, ಅರಲಾಳು, ಬನವಾಸಿ, ಬಿಳಿಕಲ್ಲು ಬೆಟ್ಟ, ಹಲಸೂರು, ಹಾರೋಹಳ್ಳಿ, ಮೇಕೆದಾಟು, ಚೆನ್ನಪಟ್ಟಣ, ಅಬ್ಬೂರು, ಬೇವೂರು, ಹೊಂಗನೂರು, ಇಗ್ಗಲೂರು, ಕೆಂಗಲ್, ಕುಡ್ಲೂರು, ಮಳೂರು ಮತ್ತು ಸೊಗಲ ಎಷ್ಟೊಂದು ಪ್ರಸಿದ್ಧ ಊರುಗಳು! ಏನೆಲ್ಲಾ ವೈಭವ ! ರಾಮನಗರ ಜಿಲ್ಲೆ ನಿಜವಾಗಿಯೂ ಪ್ರವಾಸಿಗರ ಸ್ವರ್ಗವಾಗುವ ಎಲ್ಲ ಸಾಧ್ಯತೆಗಳನ್ನು ಹೊಂದಿರುವ ಒಂದು ಅದ್ಭುತ ಜಿಲ್ಲೆ.

ಈ ಭಾಗದ ಜನರ ಬಹುದಿನದ ಕನಸು ಇಂದು ನನಸಾಗುತ್ತಿದೆ. ಜಿಲ್ಲೆಯೊಂದು ರೂಪುಗೊಳ್ಳುವುದು ಆ ಜನರ ಮನದ ಕಲ್ಪನೆಯ, ಆಸೆ-ಅಕಾಂಕ್ಷೆಗಳ, ನಿರೀಕ್ಷೆ-ಕಾತರಗಳ, ಬೆಳವಣಿಗೆಯ ಕುರಿತಿರುವ ತುಡಿತದ ಕಾರಣವಾಗಿ, ಅಭಿವೃದ್ಧಿ ಎನ್ನುವುದು ಮಾನವ ಸಹಜವಾದ ಒಂದು ಗುರಿ. ಸಮುದಾಯವೊಂದು ಪ್ರಗತಿಗೆ ಹಂಬಲಿಸುವಾಗ ಈ ಹಂಬಲಿಕೆ ಕನಸಿನ ರೂಪ ತಳೆಯುತ್ತದೆ. ನಮ್ಮದೇ ಜಿಲ್ಲೆಯೊಂದಿದ್ದರೆ ನಮ್ಮ ಕನಸುಗಳಿಗೆ ರೆಕ್ಕೆ ಮೂಡಿಸಬಹುದು ಎನ್ನುವ ಆಲೋಚನೆ ಆ ಸಮುದಾಯದ್ದಾಗಿರುತ್ತದೆ.

ಜಿಲ್ಲೆ ಕೇವಲ ಭೌಗೋಳಿಕ ಗಡಿ ರೇಖೆಗಳನ್ನು ಗುರುತಿಸುವುದರಿಂದಾಗುವ ಒಂದು ಸಂಗತಿ ಅಲ್ಲ. ಅದು ಜನರ ಮನಗಳನ್ನು ಭಾವನಾತ್ಮಕವಾಗಿ ಬೆಸೆಯುವ ಒಂದು ಬಂಧ. ಅದು ಸದಾ ಪ್ರಗತಿಮುಖಿ. ಇಂದು ರಾಮನಗರ ಜಿಲ್ಲೆ ರೂಪುಗೊಳ್ಳುತ್ತಿದೆ. ನಿಮ್ಮ ಆಸೆ ಆಕಾಂಕ್ಷೆಗಳು ಇಂದು ಗರಿಗೆದರಿವೆ. ಅಸಾಮಾನ್ಯವಾದದ್ದನ್ನು ನಾವು ಸಾಧಿಸಬಹುದು ಎನ್ನುವ ಧನ್ಯ ಭಾವ ನಿಮ್ಮ ಮನದಲ್ಲಿ ತುಂಬಿದೆ ಎಂದು ನಾನು ಬಲ್ಲೆ.

ಜಿಲ್ಲೆಯೊಂದು ರೂಪುಗೊಂಡಾಗ ಅದರಿಂದಾಗುವ ಪ್ರಯೋಜನವನ್ನು ಪಡೆಯುವವರು ಜಿಲ್ಲಾ ಕೇಂದ್ರದಲ್ಲಿರುವವರಲ್ಲ, ಬದಲಿಗೆ ಸುತ್ತಮುತ್ತಲ ಗ್ರಾಮೀಣ ಜನ. ಅವರು ತಮ್ಮ ಎಲ್ಲ ಕೆಲಸಗಳಿಗಾಗಿ ಇನ್ನು ಮುಂದೆ ದೂರದ ಬೆಂಗಳೂರೋ ಅಥವಾ ಇನ್ನಾವುದೋ ಊರನ್ನು ಅರಸಿ ಹೋಗುವಂತಿಲ್ಲ. ಅಭಿವೃದ್ಧಿಯ ಯೋಜನೆಗಳು ನಾಡಿನ ಯೋವುದೋ ಮೂಲೆಯಿಂದ ನಿಮ್ಮತ್ತ ಹರಿದುಬರುವಂತಿಲ್ಲ. ನಿಮ್ಮದೇ ಆದ ಯೋಜನೆಗಳು, ನಿಮಗೇ ಸಲ್ಲುವ ಪ್ರಯೋಜನಗಳು, ನಿಮ್ಮ ಅಭಿವೃದ್ಧಿಗಾಗಿ ಹೆಚ್ಚಿನ ಹಣಕಾಸಿನ ನೆರವು, ಸಾಂಘಿಕ ಅಭಿವೃದ್ಧಿಗೆ ಸುಗಮವಾದ ಹಾದಿ ಇವೆಲ್ಲವೂ ಸಾಧಿತವಾಗುವುದು ಜಿಲ್ಲೆಯೊಂದು ರೂಪುಗೊಂಡಾಗ.

ಆಡಳಿತ ಕೇಂದ್ರದ ವ್ಯಾಪ್ತಿ ಚಿಕ್ಕ ಪ್ರದೇಶಕ್ಕೆ ಸೀಮಿತಗೊಂಡಾಗ ಸಹಜವಾಗಿಯೇ ಅಭಿವೃದ್ಧಿಯನ್ನು ಬೇಗನೆ ಸಾಧಿಸಬಹುದು. ಆಡಳಿತ ಯಂತ್ರ ಪ್ರತಿ ಜನರ ಬಾಗಿಲಿಗೆ ಬರಲು ಸಾಧ್ಯವಾಗಬಹುದು. ಜಿಲ್ಲೆಯ ವಿಶೇಷಣಗಳು ರಾಜ್ಯದ, ರಾಷ್ಟ್ರದ ಮನಸೆಳೆದು ಜಿಲ್ಲೆಗೆ ತನ್ನದೇ ಆದ ಒಂದು ಹೊಸ ಅಸ್ತಿತ್ವ ಮೂಡಿಬರಬಹುದು.

ರಾಮನಗರ ಬರುವ ದಿನಗಳಲ್ಲಿ ಚಟುವಟಿಕೆಗಳ ಕೇಂದ್ರವಾಗಲಿದೆ. ಅನೇಕ ಪ್ರಯೋಗಗಳ ನೆಲೆಬೀಡಾದ ರಾಮನಗರ ಈಗಾಗಲೇ ಇ-ಗವರ್ನೆನ್ಸ್‌ನ ಪ್ರಾರಂಭಕ್ಕೆ ಸಾಕ್ಷಿಯಾಗಿದೆ. ರಾಮನಗರದಲ್ಲಿ ನ್ಯಾನೋ ತಂತ್ರಜ್ಞಾನ ತರಬೇತಿಕೇಂದ್ರವೊಂದು ತಲೆಯೆತ್ತಲಿದೆ. ಈಗಾಗಲೇ 26,420 ಲಕ್ಷ ರೂ.ಗಳ ವಿವಿಧ ಕಾಮಗಾರಿಗಳನ್ನು ರಾಮನಗರದಲ್ಲಿ ಪ್ರಾರಂಭಿಸಲಾಗಿದೆ. ಒಟ್ಟು 1172 ಕೋಟಿ ರೂ.ಗಳ ವೆಚ್ಚ ಮಾಡಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಇವುಗಳಲ್ಲಿ ಲೋಕೋಪಯೋಗಿ, ಬೆಸ್ಕಾಂ, ನಗರಸಭೆ, ರೇಷ್ಮೆ, ಕೃಷಿ, ರೆವಿನ್ಯೂ, ಪಶುಸಂಗೋಪನೆ, ಜಲಾನಯನ ಅಭಿವೃದ್ಧಿ ಮೊದಲಾದ ಇಲಾಖೆಗಳ ಅನೇಕ ಕಾಮಗಾರಿಗಳು ಕಾರ್ಯಗತವಾಗಿವೆ.

ಅಂಕಿ - ಅಂಶಗಳ ಜಾಲವನ್ನು ನಿಮ್ಮ ಮುಂದಿಟ್ಟು ನಿಮ್ಮನ್ನು ಮರಳುಮಾಡುವ ಮನಸ್ಸು ನನ್ನದಲ್ಲ. ನಿಮ್ಮ ರಾಮನಗರ ಇಂದು ಎಂತಹ ಬೆಳವಣಿಗೆಯನ್ನು ಕಾಣುತ್ತಿದೆ ಎನ್ನುವ ವಿಚಾರ ನಿಮಗೇ ತಿಳಿದಿದೆ. ರಾಮನಗರವೊಂದನ್ನೇ ಕೇಂದ್ರವಾಗಿರಿಸಿಕೊಂಡ ಬೆಳವಣಿಗೆ ಇದು ಎಂದು ನೀವು ಭಾವಿಸಬೇಕಿಲ್ಲ. ರಾಮನಗರ ಜಿಲ್ಲೆ ಹೊಸದಾಗಿ ಮೈತಳೆದ ಇತರ ಜಿಲ್ಲೆಗಳೊಂದಿಗೆ ಸ್ಪರ್ಧಿಸಿ ಗೆಲ್ಲಬೇಕು ಎನ್ನುವುದು ನನ್ನ ಮನದಾಸೆ.

ನನ್ನ ಕ್ಷೇತ್ರವನ್ನು ಇಡೀ ರಾಷ್ಟ್ರದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವ ವಚನವನ್ನು ನಾನು ನೀಡಿದ್ದೆ. ಆ ವಚನವನ್ನು ಈಗ ಇನ್ನಷ್ಟು ವಿಸ್ತರಿಸಿ, ರಾಮನಗರ ಜಿಲ್ಲೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗಿಂತ ಅತ್ಯುತ್ಕೃಷ್ಟ ಜಿಲ್ಲೆ ಎಂದಾಗಿಸುವ ವಚನವನ್ನು ನಾನು ನಿಮ್ಮ ಮುಂದೆ ಇಂದು ನೀಡುತ್ತಿದ್ದೇನೆ.

ನನ್ನ ಬಂಧುಗಳೇ, ನಿಮ್ಮ ಸಹಕಾರವಿಲ್ಲದೆ ಯಾವ ರಾಜಕಾರಣಿಯ ವಚನವೂ ಪೂರ್ಣಗೊಳ್ಳದು ಎನ್ನುವ ಸತ್ಯವನ್ನು ನಾನು ಬಲ್ಲೆ. ರಾಮನಗರ ಇಂದು ಪ್ರಗತಿ ಚಕ್ರದ ಮೊದಲ ಉರುಳನ್ನು ಕಾಣುವಂತಾಗಿದ್ದರೆ, ಅದು ನಿಮ್ಮಲ್ಲಿನ ಅನನ್ಯ ಕಳಕಳಿ ಮತ್ತು ರಾಮನಗರದ ಕುರಿತು ನಿಮಗಿರುವ ಪ್ರೀತಿಯ ಸಾಕ್ಷಿ. ನಿಮ್ಮೊಂದಿಗೆ ನಿಮ್ಮ ಜಿಲ್ಲೆಯ ಅಭ್ಯುದಯಕ್ಕೆ ಕಂಕಣತೊಡಲು ನನಗೆ ನೆರವಾಗಿ ಎನ್ನುವುದಷ್ಟೇ ನಾನು ನಿಮ್ಮಲ್ಲಿ ಮಾಡಿಕೊಳ್ಳುವ ಮನವಿ.

ಆಗ ಬಾ ಈಗ ಬಾ ಹೋಗಿ ಬಾ ಎನ್ನದಲೆ

ಆಗಲೇ ಕರೆದು ಕೊಡುವವನ ಧರ್ಮ

ಹೊನ್ನಾಗದೇ ಬಿಡದು ಸರ್ವಜ್ಞ

ರಾಮನಗರದ ವಿಷಯಕ್ಕೆ ಬಂದಾಗ ನನ್ನದು ಸರ್ವಜ್ಞನ ಈ ವಚನದಮತೆ ನಡೆವ ಮನಸ್ಸು. ರಾಮನಗರದಲ್ಲಿ ಅಭ್ಯುದಯದ ಕಾರಣಕ್ಕೆ ಎಂದಿಗೂ ನಾನು ಹಿಂದೆ ಮುಂದೆ ನೋಡಿಲ್ಲ. ನನ್ನ ಧರ್ಮ ಹೊನ್ನಾಗಲಿ ಎನ್ನುವ ಸ್ವಾರ್ಥ ನನ್ನದಲ್ಲ. ಆದರೆ, ರಾಮನಗರದ ನೆಲ ಹೊನ್ನು ಸುರಿವ, ಹೊನ್ನು ಬೆಳೆವ ಪುಣ್ಯಭೂಮಿಯಾಗಬೇಕು ಎನ್ನುವ ಹಿರಿಯಾಸೆ ನನ್ನದು.

ಇಲ್ಲಿ ಏನಿಲ್ಲ ಎನ್ನುವಂತಿಲ್ಲ. ಎಲ್ಲವೂ ಇಲ್ಲಿದೆ. ರೇಷ್ಮೆಯ ಸಮೃದ್ಧಿಯಿದೆ. ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆವ ಆಕರ್ಷಣೆಗಳಿವೆ, ದೇಗುಲಗಳು, ಕೋಟೆ ಕೊತ್ತಲಗಳ ದೊಡ್ಡದೊಂದು ಭಂಡಾರವೇ ಇದೆ. ಹೊಸ ಹೊಸ ಉದ್ದಿಮೆಗಳ ಮಹಾಪೂರ ರಾಮನಗರದತ್ತ ಹರಿದುಬರುತ್ತಿದೆ. ಜಿಲ್ಲೆ ನಮ್ಮ ಪಶ್ಚಿಮ ಕರಾವಳಿಯ ಪ್ರವಾಸಿ ಆಕರ್ಷಣೆಯನ್ನೂ ಮೀರಿ ಬೆಳೆವ ಎಲ್ಲ ಸಾಧ್ಯತೆಗಳನ್ನೂ ಹೊಂದಿದೆ. ಎಲ್ಲಕ್ಕಿಂತ ಮಿಗಿಲಾಗಿ ಅತ್ಯಂತ ಸಂಪನ್ನ ಜನರ ಬಹುದೊಡ್ಡ ಸಂಸ್ಕೃತಿಯೇ ಇಲ್ಲಿದೆ. ಸಾಮರಸ್ಯಕ್ಕೆ, ಸಹಬಾಳ್ವೆಗೆ ರಾಮನಗರವೇ ಬಹುದೊಡ್ಡ ಉದಾಹರಣೆಯಾಗಿದೆ. ಅದ್ಭುತ ಎನಿಸುವ ಮಾನವ ಸಂಪನ್ಮೂಲವಿದೆ. ಸಾಹಸಕ್ರೀಡೆಗೆ, ಉದ್ದಿಮೆಗಳ ಸ್ಥಾಪನೆಗೆ, ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ, ಕೃಷಿಯ ಅಭ್ಯುದಯಕ್ಕೆ, ಪರಿಸರದ ಸಿರಿಯನ್ನು ಹೆಚ್ಚಿಸಲಿಕ್ಕೆ ಬೇಕಾದ ಎಲ್ಲ ಅವಕಾಶಗಳೂ ರಾಮನಗರದ ಮಡಿಲಿನಲ್ಲಿ ತುಂಬಿಕೊಂಡಿವೆ. ಇವನ್ನೆಲ್ಲ ಸಮರ್ಥವಾಗಿ ದುಡಿಸಿಕೊಳ್ಳಬಲ್ಲ ಒಂದು ಜಿಲ್ಲಾ ವ್ಯವಸ್ಥೆಗೆ ಇಂದು ನಾಂದಿಹಾಡಲಾಗುತ್ತಿದೆ. ರಾಮನಗರ, ಅತ್ಯಂತ ಸುಶಿಕ್ಷಿತವಾದ, ಸಂಪನ್ನವಾದ, ಸುಭಿಕ್ಷವಾದ ಮತ್ತು ಶ್ರೀಮಂತವಾದ ಜಿಲ್ಲೆಯಾಗಿ ರೂಪುಗೊಳ್ಳುವ ಎಲ್ಲ ಲಕ್ಷಣಗಳನ್ನೂ ತೋರಿದೆ.

ಇಂದಿನ ಈ ಐತಿಹಾಸಿಕ ಸಮಾರಂಭ ರಾಮನಗರದ ಜನರ ಕನಸಿಗೆ ಕಟ್ಟಿದ ಬಹುದೊಡ್ಡ ರೆಕ್ಕೆ. ಗೋಪಾಲಕೃಷ್ಣ ಅಡಿಗರು ಹೇಳಿದಂತೆ, ಹೊಸದಾದ ನಾಡನ್ನು ರಸದ ಬೀಡನ್ನು ಕಟ್ಟುವ ಒಂದು ಪರ್ವಕಾಲದಲ್ಲಿ ನಿಂತಿದ್ದೇವೆ. ಭವಿಷ್ಯದ ಭಾಗಿಲಿಗೆ ತೋರಣ ಕಟ್ಟಿ ಹೊಸ ಯುಗಕ್ಕೆ ಪ್ರವೇಶಿಸುವ ಅಮೃತ ಘಳಿಗೆಯನ್ನು ನಮ್ಮದಾಗಿಸಿಕೊಂಡಿದ್ದೇವೆ. ನಮ್ಮ ನಾಡನ್ನು, ನಮ್ಮ ಈ ಹೊಸ ಜಿಲ್ಲೆಯನ್ನು ಸುಭದ್ರವಾಗಿ ಕಟ್ಟೋಣ. ಈ ಕಟ್ಟುವ ಕಾಯಕದಲ್ಲಿ ನಾನು - ನೀನು, ಆನು - ತಾನು ಎನ್ನುವ ಭೇದವೆಣಿಸದೇ ಒಟ್ಟಾಗಿ ದುಡಿದು ರಾಮನಗರದ ಕನಸನ್ನು ಸಾಕಾರಗೊಳಿಸೋಣ.

ನಮಸ್ಕಾರ

English summary
Ramanagara and Chikkaballapura : Two New districts Declared open by Chief Minister H.D. Kumarasmay on 23 Aug 2007. A vision statement for Ramanagara by HDK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X