ತಮಿಳುನಾಡಿನಲ್ಲಿ ಟೀವಿ ರಾಜಕೀಯ ಈಗ ಇನ್ನಷ್ಟು ಮತ್ತಷ್ಟು
ಚೆನ್ನೈ, ಆಗಸ್ಟ್ 13 : ತಮಿಳುನಾಡಿನಲ್ಲಿ ಹೊಸದೊಂದು ಟೀವಿ ಚಾನೆಲ್ ಶುರುವಾಯಿತೆಂದರೆ, ಹೊಸದೊಂದು ರಾಜಕೀಯ ತಿರುವಿಗೆ ಕಾರಣವಾಗಲಿದೆ ಎಂದರ್ಥ. ಇಲ್ಲಿ ಟೀವಿ ಚಾನೆಲ್ ಶುರುವಾದರೆ ಮೊದಲು ಬರುವ ಪ್ರಶ್ನೆ; ಅದು ಯಾವ ಪಕ್ಷಕ್ಕೆ ಸೇರಿದ್ದು?
ತಮಿಳುನಾಡಿನ ಪ್ರತಿಯೊಂದು ಚಾನೆಲ್ ಕೂಡ ಒಂದೊಂದು ರಾಜಕೀಯ ಪಕ್ಷದ ಮುಖವಾಣಿಯಾಗಿ ಕೆಲಸ ಮಾಡುತ್ತಿದೆ. ಜನರಿಗೆ ತಮ್ಮ ಪಕ್ಷದ ಸಿದ್ಧಾಂತವನ್ನು ತಲುಪಿಸಲು, ಇತರ ಪಕ್ಷಗಳ ಅವಹೇಳನ ಮಾಡಲು ಟಿವಿ ಮಾಧ್ಯಮವನ್ನು ರಾಜಕಾರಣಿಗಳು ವೇದಿಕೆ ಮಾಡಿಕೊಂಡಿದ್ದಾರೆ. ಈಗ ಇನ್ನೂ 3ಚಾನೆಲ್ ಗಳು ತಮಿಳುನಾಡಲ್ಲಿ ಆರಂಭವಾಗಲಿವೆ.
ಆಗಸ್ಟ್ 20ಕ್ಕೆ ಈಗಿನ ಮುಖ್ಯಮಂತ್ರಿ ಕರುಣಾನಿಧಿ ಅವರ ಕಲೈಂಗರ್ ಹಾಗೂ ಕಾಂಗ್ರೆಸ್ ನಾಯಕ ಕೆ.ವಿ.ತಂಗ ಬಾಲುರವರ ಮೆಗಾ ಟಿವಿ ಆರಂಭವಾಗಲಿದೆ. ಸೆ. 15ಕ್ಕೆ ಕಾಂಗ್ರೆಸ್ ಶಾಸಕ ವಸಂತ್ ಕುಮಾರ್ ರವರ ವಸಂತ್ ಟಿವಿ ಶುರುವಾಗಲಿದೆ.
ಹೊಸ ಚಾನೆಲ್ ಗಳ ಜೊತೆಗೆ, ಈಗಾಗಲೇ ಇರುವ ಡಿಎಂಕೆ ಮುಖವಾಣಿ ಸನ್ ಟಿವಿ, ಎಐಎಡಿಎಂಕೆ ಪಕ್ಷದ ಜಯಾ ಟಿವಿ ಹಾಗೂ ರಾಜ್ ಟಿವಿ ಸಮೂಹಗಳು ಪಕ್ಷ ನಿಷ್ಠೆ ಪ್ರದರ್ಶಿಸುತ್ತಿವೆ.
ಕರ್ನಾಟಕದಲ್ಲಿ ಚಾಲೆನ್ ನ ಒಡೆತನವೆಲ್ಲಾ ಪರಕೀಯರ ಕೈಲಿ ಇರುವುದರಿಂದ ರಾಜಕೀಯ ದೊಂಬರಾಟಕ್ಕೆ ಆಸ್ಪದವಿಲ್ಲ. ಅಷ್ಟರಮಟ್ಟಿಗೆ ಕನ್ನಡಿಗರು ಸೇಫ್ ಎನ್ನಬಹುದು. ಈ ಮಧ್ಯೆ ಕುಮಾರಸ್ವಾಮಿ ಅವರ ಕಸ್ತೂರಿ ಚಾನೆಲ್ ಆಗಸ್ಟ್ 18ರಿಂದ ಆರಂಭಗೊಳ್ಳಲಿದೆ.
(ಏಜನ್ಸೀಸ್)












Click it and Unblock the Notifications