ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನೀತಾ, ನೀನು ಸುರಕ್ಷಿತವಾಗಿ ತವರಿಗೆ ಬಾರಮ್ಮಾ...

By Staff
|
Google Oneindia Kannada News

ಪ್ರತಿಕೂಲ ಹವಾಮಾನದಿಂದಾಗಿ ಅಟ್ಲಾಂಟಿಸ್ ಬಾಹ್ಯಾಕಾಶ ನೌಕೆಯ ಭೂಸ್ಪರ್ಶ ತಡವಾಗುತ್ತಿದೆ. ಭಾರತೀಯ ಸಂಜಾತೆ ಅಮೆರಿಕಾದ ಸುನೀತಾ ವಿಲಿಯಂಸ್ ಸೇರಿದಂತೆ 7ಮಂದಿ ಗಗನಯಾತ್ರಿಗಳು ಭೂಸ್ಪರ್ಶಕ್ಕೆ ಕಾತುರರಾಗಿದ್ದಾರೆ.

ಕಲ್ಪನಾ ಚಾವ್ಲಾರ ದುರಂತದಿಂದ ನೊಂದಿರುವ ಭಾರತೀಯರು, ಸುನೀತಾ ಕ್ಷೇಮವಾಗಿ ಭೂಮಿಗೆ ಬರಲಿ ಎಂದು ಆಶಿಸುತ್ತಿದ್ದಾರೆ. ಅನೇಕರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಭೂಸ್ಪರ್ಶ ಭಾನುವಾರದ ವರೆಗೆ ತಡವಾದರೂ ಆತಂಕ ಪಡುವ ಅಗತ್ಯವಿಲ್ಲ. ಬಹುಶಃ ಶುಕ್ರವಾರ ಮಧ್ಯರಾತ್ರಿ ನಂತರ ಸುನೀತಾ ಮತ್ತಿತರರ ತಂಡ ಭೂಸ್ಪರ್ಶ ಮಾಡುವ ಸಾಧ್ಯತೆಗಳಿವೆ

***
ಮಳೆರಾಯನ ದರ್ಬಾರಿಗೆ ರಸ್ತೆ ಸಂಚಾರ ಸ್ಥಗಿತ

ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳೂರು-ಉಡುಪಿ ನಡುವಿನ ಹೈವೆಯನ್ನು ಸಂಪೂರ್ಣ ಮುಚ್ಚಿಹಾಕಿದೆ.

ಉಡುಪಿ ತಾಲೂಕಿನ ಅಲೆವೂರಿನಲ್ಲಿ ನಾಲ್ಕು ಮನೆಗಳು ಭಾಗಶಃ ಹಾನಿಗೀಡಾಗಿವೆ. ಇಂದು ಬೆಳಗಿನ 8 ಗಂಟೆಯವರೆಗೆ ಉಡುಪಿಯಲ್ಲಿ 15 ಸೆಂ.ಮೀ.ಮಳೆಯಾಗಿದೆ.

ಕಾರ್ಕಳ ಮತ್ತು ಕುಂದಾಪುರದಲ್ಲಿ ತಲಾ 11 ಮತ್ತು 8 ಸೆಂ.ಮೀ. ಮಳೆಯಾಗಿದೆ. ಮಂಗಳೂರಿನಲ್ಲಿಯೂ ಕೊಟ್ಟಾರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 17ರ ಮೇಲೆ ಸಂಚಾರ ಸ್ಥಗಿತಗೊಂಡಿತ್ತು. ಬಂಟ್ವಾಳ ಜಿಲ್ಲೆಯಲ್ಲಿಯೂ 8 ಸೆಂ.ಮೀ.ಮಳೆಯಾಗಿದೆ.

***
ಬೆಂಗಳೂರು ನಗರ ಜಿಲ್ಲಾ ಪಂಚಾಯತಿಯ ಸಾಮಾನ್ಯ ಸಭೆಯನ್ನು ಜೂನ್ ೨೩ ರಂದು ಶನಿವಾರ ಪೂರ್ವಾಹ್ನ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣ, ಕೃಷಿಭವನ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಬೆಂಗಳೂರು ಇಲ್ಲಿ ಕರೆಯಲಾಗಿದೆ.
***
ಕೆರೆ ಸಂರಕ್ಷಣೆಗೆ ಸಚಿವ ಈಶ್ವರಪ್ಪ ಕರೆ

ಸ್ವಯಂ ಸೇವಾ ಸಂಸ್ಥೆಗಳು, ಸಮುದಾಯವನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ದುಸ್ಥಿತಿಯಲ್ಲಿರುವ ಕೆರೆಗಳ ಪುನರುಜ್ಜೀವನದೊಂದಿಗೆ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಜಲ ಸಂಪನ್ಮೂಲ ಸಚಿವ ಶ್ರೀ ಕೆ. ಎಸ್. ಈಶ್ವರಪ್ಪ ಅವರು ಇಲಾಖೆಯ ಅಧಿಕಾರಿಗಳಿಗೆ ಕರೆ ನೀಡಿದರು.

ಅವರು ಶುಕ್ರವಾರ ನೀರಾವರಿ ಕೆರೆಗಳ ಪುನರುಜ್ಜೀವನ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪರಿಸರವಾದಿ ಎ.ಎನ್.ಯಲ್ಲಪ್ಪ ರೆಡ್ಡಿ ಅವರು, ಕೆರೆ ಕೇವಲ ನೀರಿನ ಸಂಗ್ರಹವಲ್ಲ, ಒಂದು ಜೈವಿಕ ವ್ಯವಸ್ಥೆ. ನಮ್ಮ ಪೂರ್ವಜರು ನೀರಿನ ಸಮಸ್ಯೆ ಎದುರಾಗಬಾರದೆಂಬ ದೂರದೃಷ್ಟಿಯಿಂದ ಸ್ವಂತ ಹಣದಿಂದ ಕೆರೆ ಕಟ್ಟಿದರು. ಆದರೆ ಇಂದು ಅಂತಹ ಕೆರೆಗಳು ನಿರ್ಲಕ್ಷ್ಯಕ್ಕೊಳಗಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಕೆರೆಗಳಿಗೆ ಮತ್ತೆ ಜೀವ ತುಂಬುವ ಯತ್ನದಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಅವರು ಹೇಳಿದರು.

ಈ ಕಾರ್ಯಾಗಾರದಲ್ಲಿ ಗಾಂಧಿ ಶಾಂತಿ ಪ್ರತಿಷ್ಠಾನದ ಅನುಪಮ್ ಮಿಶ್ರ ಮತ್ತು ಫರ್‍ಹಾದ್ ಕಂಟ್ರಾಕ್ಟರ್, ಮದುರೈನ ಧಾನ್ ಪ್ರತಿಷ್ಠಾನದ ತಜ್ಞರು, ಜಲ ಪತ್ರಕರ್ತ ಪಡ್ರೆ, ಶಿವಾನಂದ ಕಳವೆ, ಡಾ. ಯೋಗೇಂದ್ರ, ಮೈಸೂರಿನ ಶ್ರೀ ರವಿಕುಮಾರ್, ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದ ಚನ್ನಬಸಪ್ಪ ಕೊಂಬಳಿ ಮೊದಲಾದವರು ಜಲ ಸಂರಕ್ಷಣೆ, ಕೆರೆಗಳ ಪುನರುಜ್ಜೀವನದ ಸಾಂಪ್ರದಾಯಿಕ ತಂತ್ರಜ್ಞಾನ ಮುಂತಾದ ವಿಷಯಗಳ ಬಗ್ಗೆ ವಿಚಾರ ಮಂಡಿಸಿದರು.
***
ಹೈನುಗಾರಿಕೆ ಹಾಗೂ ಮೇವು ಉತ್ಪಾದನೆ ತರಬೇತಿ

ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ (ಇಂಡೋ- ಡ್ಯಾನಿಷ್ ಫಾರಂ) ಹೆಸರಘಟ್ಟ, ಬೆಂಗಳೂರು ಆಶ್ರಯದಲ್ಲಿ ಜುಲೈ 2 ರಿಂದ 11 ರವರೆಗೆ ಹೈನುಗಾರಿಕೆ ಪ್ರಾರಂಭಿಸುವ ರೈತರಿಗೆ, ರೈತ ಮಕ್ಕಳಿಗೆ ಹಾಗೂ ರೈತ ಮಹಿಳೆಯರಿಗೆ 10 ದಿನಗಳ ಹೈನುಗಾರಿಕೆ ಹಾಗೂ ಮೇವು ಉತ್ಪಾದನೆ ಬಗ್ಗೆ ತರಬೇತಿಯನ್ನು ಏರ್ಪಡಿಸಲಾಗಿದೆ

ತರಬೇತಿ ಪಡೆಯಲು ಇಚ್ಫಿಸುವವರು ಎರಡು ಇತ್ತೀಚಿನ ಭಾವಚಿತ್ರದೊಂದಿಗೆ ಅಂದು ನೇರವಾಗಿ ತರಬೇತಿಗೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಉಪ ನಿರ್ದೇಶಕರು (ತರಬೇತಿ) ಇವರನ್ನು ನೇರವಾಗಿ ಅಥವಾ ದೂರವಾಣಿ ಸಂಖ್ಯೆ 080 - 28466397 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಪ್ರಕಟಣೆ ತಿಳಿಸಿದೆ.
***
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಚನ್ನಪಟ್ಟಣ/ರಾಮನಗರ ಮತ್ತು ಮಾಗಡಿ ತಾಲ್ಲೂಕುಗಳಲ್ಲಿ 2007 ರ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ.
***
ಜಿಲ್ಲಾ ಯುವ ಮತ್ತು ಯುವ ಸಂಘ ಪ್ರಶಸ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಯುವ ಚಟುವಟಿಕೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಯುವ ಸಂಘ ಹಾಗೂ ಒಬ್ಬ ಯುವಕ ಮತ್ತು ಒಬ್ಬ ಯುವತಿಗೆ ಜಿಲ್ಲಾ ಮಟ್ಟದ ಯುವ ಪ್ರಶಸ್ತಿಯನ್ನು ನೆಹರೂ ಯುವ ಕೇಂದ್ರ ಸಂಘಟನೆ ನೀಡಲಿದ್ದು, ಅರ್ಜಿಯನ್ನು ಆಹ್ವಾನಿಸಿದೆ.

ಅರ್ಜಿ ನಮೂನೆಯನ್ನು ನೆಹರೂ ಯುವ ಕೇಂದ್ರ, 2ನೇ ಮಹಡಿ, ಜಿ.ಇ.ಎಫ್. ಬ್ಲಾಕ್, ಇಂಡಸ್ಟ್ರಿಯಲ್ ಟೌನ್, ಪಶ್ಚಿಮ ಕಾರ್ಡ್ ರಸ್ತೆ, ರಾಜಾಜಿನಗರ, ಬೆಂಗಳೂರು ಇಲ್ಲಿ ಪಡೆದುಕೊಳ್ಳಬಹುದು. ಅರ್ಜಿಯನ್ನು ಜುಲೈ 2,2007 ರೊಳಗೆ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ

080-23201937,9448427263ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X