ವಾತಾವರಣ ವೈಪರೀತ್ಯ : ಮಾವಿನ ಇಳುವರಿಗೆ ಹೊಡೆತ
ಗುಲ್ಬರ್ಗ : ವಾತಾವರಣ ವೈಪರೀತ್ಯದಿಂದಾಗಿ ಪ್ರಸಕ್ತ ಸಾಲಿನಲ್ಲಿ ಮಾವಿನ ಇಳುವರಿಗೆ ಭಾರೀ ಹೊಡೆತ ಬೀಳುವ ಶಂಕೆ ವ್ಯಕ್ತವಾಗಿದೆ.
ತೋಟಗಾರಿಕೆ ಇಲಾಖೆ ನಿರ್ದೇಶಕ ಕೃಷ್ಣಮೂರ್ತಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಡಿಮೆ ಪ್ರಮಾಣದ ಮಳೆ, ಅಂತರ್ಜಲಮಟ್ಟ ಕುಸಿತದಿಂದಾಗಿ ಕೆಲವೆಡೆ ಭೂಮಿ ತೇವಾಂಶ ಕಡಿಮೆಯಾಗಿದೆ. ಇದಲ್ಲದೆ ವಾತಾವರಣದ ತೇವಾಂಶದಲ್ಲೂ ದೋಷ ಕಂಡುಬಂದಿರುವುದರಿಂದ ಹೂವುಗಳಿಗೆ ಹಾನಿಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 6,000 ಹೆಕ್ಟೇರು ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ವಾತಾವರಣದಲ್ಲಿ ಅಗತ್ಯ ತೇವಾಂಶವಿದ್ದರೆ ಬಹುತೇಕ ಹೂವು ಕಾಯಿಬಿಡುತ್ತದೆ. ತೇವಾಂಶ ಕಡಿಮೆಯಾದರೆ ಹೂವು ಉದುರುವಿಕೆ ಆರಂಭವಾಗುತ್ತದೆ. ತೇವಾಂಶ ಕಾಪಾಡುವುದರ ಕುರಿತು ಇಲಾಖೆ, ರೈತರಿಗೆ ಸಲಹೆಗಳನ್ನು ಕೂಡ ನೀಡಲಾಗಿದೆ ಎಂದು ಅವರು ವಿವರಿಸಿದರು.
ರೈತರ ಆಶಾಕಿರಣ : ಸಾಮಾನ್ಯವಾಗಿ ಏಪ್ರಿಲ್ ಕೊನೆಯ ವಾರದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಮಳೆಯಾಗುವ ಸಂಭವವಿರುತ್ತದೆ. ಒಂದು ವೇಳೆ ಅಂದುಕೊಂಡಂತೆ ಮಳೆಬಂದರೆ ಮಾವಿನ ಬೆಳೆ ಉಳಿಯುತ್ತದೆ ಎಂಬ ಆಶಾವಾದದಲ್ಲಿ ರೈತರು ಮುಗಿಲಿನ ಕಡೆಗೆ ನೋಡುವಂತಾಗಿದೆ.
(ಏಜನ್ಸೀಸ್)












Click it and Unblock the Notifications