ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂದಕಾಳೂರು ಹೇಗಿತ್ತು, ಹೇಗಾಯ್ತು ಗೊತ್ತಾ?

By Super
|
Google Oneindia Kannada News

ಕೆಂಪೇಗೌಡ ಕಟ್ಟಿದ ಬೆಂದಕಾಳೂರು, ಇಂದು ಎಲ್ಲಾ ಲೆಕ್ಕಾಚಾರಗಳನ್ನು ಮೀರಿ ಹೆಂಗೆಂಗೋ ಬೆಳೆದಿದೆ... 10ವರ್ಷದ ಹಿಂದೆ ಬೆಂಗಳೂರು ಬಿಟ್ಟವರು, ಮರಳಿ ಬಂದರೆ ಕಕ್ಕಾಬಿಕ್ಕಿಯಾಗುತ್ತಾರೆ! ರಾಜಧಾನಿ ನಗರದಲ್ಲಿ, ಈ ಲೇಖಕಿ ಕಂಡದ್ದು, ಒಂದೇ ಎರಡೇ... ಕೊನೆಗವರಿಗೆ; ಇದು ನಮ್ಮೂರೇ ಅನ್ನುವ ಅನುಮಾನ!

ಮೊನ್ನೆ ಬೆಂಗಳೂರಿನಿಂದ ಆಗಮಿಸಿದ್ದ ಪರಿಚಯಸ್ಥರೊಬ್ಬರನ್ನು ಭೇಟಿಯಾದಾಗ ಬೆಂಗಳೂರಿನಲ್ಲಿ ತುಂಬಾ ಚಳೀನಾ ಎಂಬ ನನ್ನ ಪ್ರಶ್ನೆಗೆ ‘ಬೆಂಗಳೂರಿನ ಚಳಿ ಮೈ ಕೊರಿತಾ ಇದೆ. ಆದ್ರೆ ಬೆಂಗಳೂರಂತೂ ಬೆಳೀತಾ ಇದೆ’ ಎಂದರು. ಈ ಮಾತು ಚಟ್ಟನೆ ಮನ ತಟ್ಟಿತು.

ಇತ್ತೀಚಿನ ಕೆಲವು ವರುಷಗಳಿಂದ ಪ್ರತಿಬಾರಿ ಬೆಂಗಳೂರಿಗೆ ಬಂದಾಗಲೆಲ್ಲಾ ‘‘ಓತಿಕ್ಯಾತನಂತೆ ಬಣ್ಣ ಬದಲಿಸುತ್ತಿದ್ದೆ ಬೆಂಗಳೂರು’’ ಎನಿಸುತ್ತದೆ. ಏರ್‌ಪೋರ್ಟಿನಿಂದ ಹೊರಬರುವುದೇ ತಡ ಇದು ಬೆಂಗಳೂರಾ, ನಮ್ಮೂರಾ? ಎನಿಸುತ್ತೆ. ಯಾವುದೇ ಹೊತ್ತಿನಲ್ಲೂ ಮುಂಬಯಿಯಂತೆ ಗಿಜಿ, ಗಿಜಿ ಜನ. ಎಲ್ಲರೂ ದಾಪುಗಾಲು ಹಾಕ್ತಿರ್ತಾರೆ.

Bangalore - Not My City!

ಸಾರಿಗೆ ಬಸ್ಸುಗಳಲ್ಲಿ ನೇತಾಡುತ್ತಾ, ತೂಗಾಡುತ್ತಾ, ಬೀಳುತ್ತಾ ನಿಂತ ಜನ. ಕೀ, ಪೀ, ಪೋಂ..ಪೋಂ ಎಂದು ಕಿವಿ ತೂತಾಗಿಸುವ ಹಾರ್ನ್‌ಗಳ ಅಬ್ಬರ. ಎರ್ರಾಬಿರ್ರಿ ಓಡುವ ರಿಕ್ಷಾಗಳು. ಅಂದೊಮ್ಮೆ ಜನರಿಗಾಗಿಯೇ ಮೀಸಲಾಗಿಟ್ಟ ಫುಟ್‌ಪಾತ್‌ ಈಗ ಸ್ಕೂಟರ್‌, ಬೈಕ್‌ಗಳ ರೈಡ್‌ಪಾಥ್‌. ಸಿಗ್ನಲ್‌ ಬಳಿ ಅಲ್ಲದೆ ಮಧ್ಯೆ ರಸ್ತೆ ದಾಟ ಬೇಕಾದರೆ ಜೀವ ಹೋಗುತ್ತೆ. ನಂಗಂತೂ ಊರಿಗೆ ಬಂದ ಒಂದೆರಡು ದಿನ ಸಿಗ್ನಲ್‌ ಇಲ್ಲದೆಡೆ ಕ್ರಾಸ್‌ ಮಾಡಲು ನಿಂತರೆ ಅತ್ತ ದರಿ, ಇತ್ತ ಪುಲಿ ಎಂಬಂತಾ ಸಂಧಿಗ್ಧ. ಸಿಂಗಪುರದ ರೂಲ್ಸ್‌ ಫಾಲೋ ವಿವೇಕ, ಬೆಂಗಳೂರಿನಲ್ಲಿ ಅಪ್ಪಟ ಅವಿವೇಕ.

ಬೆಂದಕಾಳೂರು ಇದೀಗ ಭಾರತದ ಸಿಲಿಕಾನ್‌ ವ್ಯಾಲಿ. ಇಲ್ಲಿ ನಡೆದಿದೆ ಭಾವೈಕ್ಯಗಳ, ವಿವಿಧ ಸಂಸ್ಕೃತಿಗಳ ರ್ಯಾಲಿ. ಕಣ್ಣು ಹಾಯಿಸಿದತ್ತ ಕಾಣುವುದು ದರ್ಶಿನಿಗಳು, ಝಗಝಗಿಸುವ ಶಾಪಿಂಗ್‌ ಮಾಲ್‌ಗಳು, ತೃಷೆ ನೀಗಲು ಸಿದ್ಧವಾದ ಜ್ಯೂಸ್‌ ಸೆಂಟರ್ಗಳು, ನಿಶೆಯೋಡಿಸಲು ಸಾಲು, ಸಾಲು ಬಿಯರ್‌ ಬಾರ್‌ಗಳು, ಮನ ರಂಜಿಸಲು ಸಿನಿಮಾ ಮಂದಿರಗಳು, ದಾರಿಯುದ್ದಕ್ಕೂ ಸಾಲು ಬಂಡಿಗಳಲಿ ತುಂಬಿಟ್ಟ ವಿಚಿತ್ರ ಭಕ್ಷ್ಯಗಳು, ಪಾರ್ಕಿಂಗ್‌ ಜಾಗದಲ್ಲಿ ನಿಂತ ವಿವಿಧ ಮಾಡೆಲ್‌ ಕಾರುಗಳು, ಕಾಲಿಗೊಂದು ಕೊಸರಿಗೆರಡು ದೇಗುಲಗಳು. ಅಂದೊಮ್ಮೆ ಹಸಿರು ಉದ್ಯಾನಗಳಿಂದ ಕಂಗೊಳಿಸುತ್ತಿದ್ದ ಉದ್ಯಾನ ನಗರಿ ಆಗುತ್ತಿದೆ ಜನ ಜಂಗುಳಿಯ ಅಧ್ವಾನ ನಗರಿ. ಬೆಂಗಳೂರು ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪಾ!

21ನೆಯ ಶತಮಾನದ ಈ ಐಟಿ-ಬಿಟಿ ಕಾಲದಲ್ಲಿ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆಯುತ್ತಿದೆ. ಜೊತೆಗೆ ಬೆಂಗಳೂರು ಬೆಳೆಯುತ್ತಿದೆ. ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಅವಕಾಶ ಹೆಚ್ಚಿದಂತೆಲ್ಲಾ ದೇಶದ ಎಲ್ಲಾ ಭಾಗಗಳಿಂದ ಜನರನ್ನು ಬೆಂಗಳೂರು ಆಕರ್ಷಿಸುತ್ತಿದೆ. ಸೆಂಟ್ರಲ್‌ ಏರಿಯಾ ಮೆಜೆಸ್ಟಿಕ್‌ನಿಂದ ಹತ್ತಿಪ್ಪತ್ತು ಮೈಲಿ ಇದ್ದ ಬೆಂಗಳೂರು ಇದೀಗ ಕಬಂಧ ಬಾಹುಗಳನ್ನು ಬೀರಿ ನೂರು ಮೈಲಿಗಳಷ್ಟು ಬೆಳೆಯುತ್ತಿದೆ. ಊರು ಬೆಳೆದಂತೆ ಹೊಸ, ಹೊಸ ದಂಧೆ, ದಾಂಧಲೆಗಳು ತಲೆ ಎತ್ತಿವೆ. ವಲಸೆ ಬಂದ ಕುಶಲ ಕರ್ಮಿಗಳು, ಕೃಷಿ, ಕೂಲಿ ಮಾಡುವವರು ನಗರದಲ್ಲಿ ತುಂಬಿ, ಇದ್ದ ಬದ್ದ ಭೂಮಿಯನ್ನೆಲ್ಲಾ ಕಬಳಿಸುವಂತೆ ಆಗುತ್ತಿದೆ.

80ರ ದಶಕದಲ್ಲಿ ಬೆಂಗಳೂರಿನಲ್ಲಿ ಹೆಚ್ಚಾಗಿ ಶಿಕ್ಷಣ ಕ್ಷೇತ್ರದಲ್ಲಿ, ಡೊನೇಷನ್‌, ಡೊನೇಷನ್‌ ಜೊತೆಗೆ ಮನೆ ಬಾಡಿಗೆ ಗಗನಕ್ಕೇರಿತ್ತು. ಈಗ ಕೂಡ ಅದೇ ಸ್ಥಿತಿ ಒಂದು ರೂಮಿನ ಐಟಿ ಕಂಪೆನಿ ಹತ್ತಿರ ಇರುವ ಮನೆಗೆ ಹತ್ತು ಸಾವಿರ. ಎಂಜಿನಿಯರ್‌ ಅಥವಾ ಡಾಕ್ಟರ್ಗಳಾದ್ರೆ ಸರ್ವೈವರ್ಸ್‌ ಮಿಕ್ಕವರೆಲ್ಲಾ ಫೇಲಿಯರ್ಸ್‌. ಎಲ್ಲರಿಗೂ ಬೇಕು ಎಂಜಿನಿಯರ್‌ ಹೆಣ್ಣು, ಗಂಡು. ಅಯ್ಯಂಗಾರ್‌ ಬೇಕರಿ ತುಂಬಿರುವ ಬೆಂಗಳೂರಲ್ಲಿ ಇದೀಗ ಎಲ್ಲವೂ ಬೇಕ್ರಿ ಆಗಿದೆ. ಮನೆ ಬೇಕ್ರಿ, ಜನ ಬೇಕ್ರಿ, ಜಾಗ ಬೇಕ್ರಿ, ವಧು-ವರ ಬೇಕ್ರೀ. ಒಂದೆಡೆ ಎಲ್ಲವೂ ಬೇಕ್ರಿ ಬೇಕ್ರೀ ಮತ್ತೊಂದೆದೆ ಎಲ್ಲವೂ ಬಿಕರಿ, ಬಿಕರಿ. ಯಾವುದೂ ನಿಖರಿ ಇಲ್ಲದೆ ನೆಲೆಸುವಂತಾಗಿದೆ ನಮ್ಮೂರಿನ ವೈಖರಿ.

25 ವರುಷಗಳ ಹಿಂದೆ ನಂಗೆ ಗೊತ್ತಿದ್ದು ಮೆಜೆಸ್ಟಿಕ್‌, ಶೇಷಾದ್ರಿಪುರಂ, ಶ್ರೀರಾಂಪುರಂ, ಮಲ್ಲೇಶ್ವರ, ಕಂಟೋನ್ಮೆಂಟ್‌, ಜಯನಗರ, ರಾಜಾಜಿನಗರ. ಈ ಏರಿಯಾ ಬಿಟ್ಟು ಎಂದಾದರೂ ಅಪರೂಪಕ್ಕೊಮ್ಮೆ ಫ್ರೆಂಡ್‌ ಮನೆಗೋ, ಮದುವೆಗೋ ಹೋದರೆ ಮನೆಗೆ ಬರುವತನಕ ಅಮ್ಮ ಬಾಗಿಲಲ್ಲಿ ಠಳಾಯಿಸ್ತಾ ಇದ್ದಳು. ಇತ್ತೀಚಿನ 25 ವರುಷಗಳಲ್ಲಿ ಬೆಂಗಳೂರಿನಲ್ಲೇ ಹುಟ್ಟಿಕೊಂಡಿವೆ 250ಕ್ಕಿಂತ ಹೆಚ್ಚು ಬಡಾವಣೆಗಳು.

English summary
Bangalore City is not the city I knew for years. Everytime I visit my native place Bangalore, I see vast changes. I dont think that this type of development is not advised for any city anywhere in the world. Impressions of a Karnataka citizen Vani Ramdas, settled in Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X