ಸಿದ್ದರಾಮಯ್ಯನ ಜಯದ ಗುಟ್ಟು : ಕುಮಾರಣ್ಣ ವಿಶ್ಲೇಷಣೆ
ಮೈಸೂರು : ಚುನಾವಣಾ ಆಯೋಗದ ಜೊತೆ, ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿತ್ತು. ಹೀಗಾಗಿ ಸಿದ್ದರಾಮಯ್ಯ ಅವರ ಗೆಲುವು ಸುಲಭವಾಯಿತು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಹುಣಸೂರು ಸಮೀಪ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕೇಂದ್ರ ಸರ್ಕಾರದ ನೆರವಿನೊಂದಿಗೆ ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ಒತ್ತಡ ಹೇರಿತ್ತು. ಹೀಗಾಗಿ ಚುನಾವಣೆ ಕಾಂಗ್ರೆಸ್ ಪರವಾಗಿತ್ತು ಎಂದರು.
ಸೋಲು-ಗೆಲುವು ರಾಜಕಾರಣದಲ್ಲಿ ಸರ್ವೇ ಸಾಮಾನ್ಯ. ಈ ಕಾರಣಕ್ಕಾಗಿ ಮುಖ್ಯಮಂತ್ರಿ ಸ್ಥಾನ ತ್ಯಜಿಸುವ ಪ್ರಶ್ನೆಯೇ ಅಪ್ರಸ್ತುತ. ಕೇವಲ 257ಮತಗಳ ಅಂತರದಿಂದಷ್ಟೇ ಕಾಂಗ್ರೆಸ್ ಗೆಲುವು ಸಾಧಿಸಿದೆ. ಆ ವಿಚಾರವನ್ನು ಬದಿಗಿಟ್ಟು, ಎಂದಿನಂತೆಯೇ ಸರ್ಕಾರ ಜನಪರ ಕೆಲಸಗಳನ್ನು ಮುಂದುವರೆಸಲಿದೆ ಎಂದು ಹೇಳಿದರು.
ನಿಗಮ ಮತ್ತು ಮಂಡಳಿಗಳ ನೇಮಕಾತಿ ಪ್ರಕ್ರಿಯೆ, ಸಂಪುಟ ವಿಸ್ತರಣೆಗಳು ಸಕಾಲದಲ್ಲಿ ನಡೆಯುತ್ತವೆ. ಸಮ್ಮಿಶ್ರ ಸರ್ಕಾರ ಪೂರ್ಣಾವಧಿ ಪೂರೈಸುವುದು ಖಚಿತ. ಸರ್ಕಾರ ಬಿದ್ದು ಹೋಗಲಿದೆ ಎಂಬ ಕಾಂಗ್ರೆಸ್ ಲೆಕ್ಕಾಚಾರ, ಕೇವಲ ಹಗಲುಗನಸು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
(ಯುಎನ್‌ಐ)












Click it and Unblock the Notifications