• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಕಿನ ಹಬ್ಬದ ದಿವ್ಸ ನೀವೇನು ಮಾಡುವಿರಿ?

By Staff
|


ದೀಪಾವಳಿ ಹಬ್ಬದ ಪೌರಾಣಿಕ ಮಹತ್ವವನ್ನು ಸ್ವಲ್ಪ ಬದಿಗಿಡಿ. ದೀಪಾವಳಿ ನೆಪದಲ್ಲಿ ಶಾಪಿಂಗು, ಸಿಹಿ ಊಟ, ತಿರುಗಾಟ, ಪ್ರವಾಸದಲ್ಲಿ ಸಂತೋಷ , ಅಲ್ಲಲ್ಲಿ ಹನಿಮೂನು ಕಾಣುವ ರಜಾದಿನಗಳಿವು!

  • ಗೌರೀಶ್‌ಬಾಬು
ಅನೇಕರು ಇವತ್ತು ಭಾರತದಲ್ಲಿ ರಜಾಕಾಲದ ಅನುಭವ ಪಡೆದುಕೊಳ್ಳುತ್ತಿದ್ದರೆ, ನಾನು ಮಾತ್ರ ಕಚೇರಿಯಲ್ಲಿ ಬಂದು ಕುಕ್ಕರುಬಡಿದಿದ್ದೇನೆ. ಒಂದು ದಿವಸದ ರಜೆ ಆಗಿದ್ದರೆ ಪರವಾಗಿರಲಿಲ್ಲ. ಮೂರು ದಿವಸದ ನರಕ ಚತುರ್ದಶಿ, ಬಲಿಪಾಡ್ಯಮಿ ಮತ್ತು ಭಾನುವಾರದ ರಜೆಗೆ ಸೋಮವಾರ ಇನ್ನೊಂದು ರಜೆಯನ್ನು ಲಗತ್ತು ಮಾಡುವವರಿಗೆ ನಾಲಕ್ಕು ದಿವಸದ ದೀರ್ಘ ವಾರಾಂತ್ಯದ ರಜೆ. ಆಗಬಹುದು, ಆಗಬಹುದು. ನಮಗೇನೂ ಹೊಟ್ಟೆಕಿಚ್ಚು ಏನಿಲ್ಲ.

ಬೆಂಗಳೂರು ರಸ್ತೆಗಳು ಚೆನ್ನಾಗಿವೆ. ಇದನ್ನು ಹಬ್ಬದ ಬಂದ್‌ ಎಂದು ಕರೆಯೋಣವೇ? ನಮ್ಮ ಕಚೇರಿಯಲ್ಲೂ ಇವತ್ತು ಜನಸಂಖ್ಯೆ ಕಡಿಮೆ. ತಂತ್ರಜ್ಞರು, ತಂತ್ರಜ್ಞಾನಿಗಳು, ಲೆಕ್ಕಪತ್ರ ಇಲಾಖೆಯವರು, ಮಾರುಕಟ್ಟೆ , ಮಂತ್ರಾಲೋಚನೆ ವಿಭಾಗದವರಿಗೆ ರಜ ಇರುತ್ತದೆ. ಬಾಗಿಲು ಕಾಯುವ ಸೆಕ್ಯೂರಿಟಿ ಗಾರ್ಡ್‌ ಬಿಟ್ಟರೆ ನಾವಿಲ್ಲಿರುವವರು ನಾಕಾರು ಜನ ಚಿತ್ರಗುಪ್ತರು ಮಾತ್ರ.

ನಾವೂ ಕೂಡ ರಜೆ ಅಂತ ಮನೆಯಲ್ಲಿ ಇದ್ದುಬಿಟ್ಟರೆ ಜಗತ್ತನ್ನು ನೋಡಿಕೊಳ್ಳುವವರು ಯಾರು ? ಹಬ್ಬದ ಸಂಭ್ರಮದ ಹೆಸರಲ್ಲಿ, ಪ್ರಜಾಪ್ರಭುತ್ವದ ಹೆಸರಲ್ಲಿ ಈ ದೇಶದಲ್ಲಿ ನಡೆಯುವ ಪಾಪ-ಪುಣ್ಯಗಳನ್ನು ವರದಿ ಮಾಡುವವರು ಯಾರು?

ಹೇಗಿದ್ದರೂ ಮನೆಯಲ್ಲಿ ಅಂಥದೇನೂ ಕೆಲಸ ಇಲ್ಲ. ನೀರು ತುಂಬುವ ಹಬ್ಬ ಮಾಡುವುದು ನಿಲ್ಲಿಸಿ 25 ವರ್ಷ ತುಂಬಿದೆ. ಸ್ವಿಚ್‌ ಹಾಕಿದರೆ ಸಂಪ್‌ ಟ್ಯಾಂಕಿನಿಂದ ಓವರ್‌ಹೆಡ್‌ ಟ್ಯಾಂಕಿಗೆ ನೀರು ಹತ್ತುತ್ತದೆ. ಮಡಿ ಮೈಲಿಗೆ, ಸಂಪ್ರದಾಯ ಹಾಗೆಹೀಗೆ ಅಂತ ತಿಳಿಯ ಹೇಳುವುದಕ್ಕೆ ಹಿರಿಯರಿಲ್ಲ. ಗೀಸರ್‌ ನೀರು ಕಾಯಿಸುತ್ತದೆ. ಸ್ನಾನ ಮಾಡುವುದೊಂದೆ ಬಾಕಿ. ಕೆಲವು ಬಾರಿ ಅದಕ್ಕೂ ಮನಸ್ಸಿರುವುದಿಲ್ಲ. ಸ್ವಲ್ಪ ಸೆಂಟ್‌ ಹಾಕಿಕೊಂಡರೆ ಹಬ್ಬ ಮುಗೀತು.

ನಿನ್ನೆ ಗಾಂಧೀಬಜಾರಿನ ಸುಬ್ಬಮ್ಮನ ಅಂಗಡಿಯಿಂದ ಕೋಡುಬಳೆ ಚಕ್ಕುಲಿ ಮುಂತಾದ ಕರಕರ ತಿಂಡಿಗಳು ಬಂದು ಡಬ್ಬದಲ್ಲಿ ಮಲಗಿವೆ. ಡೈನಿಂಗ್‌ ಟೇಬಲ್‌ ತುಂಬ ಅವು ಇವು ಸಿಹಿತಿಂಡಿಗಳ ಪೊಟ್ಟಣ ಕುಳಿತಿವೆ. ಒಂದು ಅನ್ನ ಸಾರು ಕಾಯಿಪಲ್ಯೆ ಮಾಡಿದರೆ ಹಬ್ಬ ಮುಗಿಯಿತು. ಮಕ್ಕಳು ಫೋರಂ, ಪಿವಿಆರ್‌ ಸಿನಿಮಾ, ಫ್ರೆಂಡ್‌ ಮನೆ ಅಂತ ಸಬೂಬು ಹೇಳಿ ಹೊರಗೆ ಹೋಗಿದ್ದಾರೆ.

ಭಾರತದಲ್ಲಿ ಹಬ್ಬ ಹರಿದಿನಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಆದರೆ ದೀಪಾವಳಿ ಹಬ್ಬದ ಸಂಭ್ರಮ ಆಸೇತು ಹಿಮಾಚಲ ಗೋಚರವಾಗುತ್ತದೆ. ಈ ಹಬ್ಬದ ಪೌರಾಣಿಕ ಮಹತ್ವವನ್ನು ಸ್ವಲ್ಪ ಬದಿಗಿಡಿ. ಮುಖ್ಯವಾಗಿ ಶಾಪಿಂಗು, ಸಿಹಿ ಊಟ ತಿರುಗಾಟ, ಪ್ರವಾಸದಲ್ಲಿ ಸಂತೋಷ , ಅಲ್ಲಲ್ಲಿ ಹನಿಮೂನು ಕಾಣುವ ರಜಾದಿನಗಳಿವು. ಮತ್ತೆ ದೀಪಾವಳಿಗೇಂತ ಅಳಿಯ ಮಾವನ ಮನೆಗೆ ಹೋಗುವ ಸಂಪ್ರದಾಯ ಇತ್ತು ಈಗೆಲ್ಲ ಯಾರು ಕೇರ್‌ ಮಾಡ್ತಾರೀ ಅಂಥ ಭಾವನೆಗಳಿಗೆ? ವರದಕ್ಷಿಣೆ ಇಸ್ಕೊಂಡು ಮದುವೆ ಆದವರಿಗಂತೂ ಮಾವನ ಮನೆಗೆ ಹೋಗುವುದಕ್ಕೆ ಮುಖಾನೇ ಇರುವುದಿಲ್ಲ.

ನನಗಂತೂ ಈ ಹಬ್ಬ ಚೆನ್ನಾಗಿದೆ. ಪ್ರಪಂಚದ ಮೂಲೆಮೂಲೆಗಳಿಂದ ನನ್ನನ್ನು ಜ್ಞಾಪಿಸಿಕೊಂಡು ಶುಭಾಶಯ ಪತ್ರಗಳನ್ನು ಕಳಿಸುತ್ತಿದ್ದಾರೆ. ನನ್ನ ಮಿತ್ರರನೇಕರು ಮೈಸೂರು, ಗೋವಾ, ಬಾಬಾಬುಡನ್‌ಗಿರಿ, ನಂದಿಬೆಟ್ಟ ಅಂತ ಹೇಳ್ಕೊಂಡು ಓಡಿಹೋಗಿದ್ದಾರೆ. ಭಾರತದಲ್ಲಿ ಮೊಬೈಲ್‌ ಫೋನ್‌ ಕ್ರಾಂತಿ ಉಂಟಾದ ಮೇಲಂತೂ ಎಲ್ಲೇ ಇದ್ದರು ಮಿತ್ರರು ಕಳೆದು ಹೋದರು ಎಂದೆನಿಸುವುದಿಲ್ಲ. ಜಗತ್ತು ಎಲ್ಲೆಲ್ಲೋ ಹೋಗಿದೆ ಅಂತ ಕ್ಷಣಕಾಲ ಭಾಸವಾಗತ್ತೆ . ಆದರೆ ನಮ್ಮ ನಮ್ಮ ನಮ್ಮ ಪ್ರಪಂಚಗಳು ಇಲ್ಲೇ ಇರುತ್ತದೆ. ಎಲ್ಲೂ ಹೋಗುವುದಿಲ್ಲ. ಭಾವನೆಗಳ ಮೂಲಕವೇ ಒಮ್ಮೆ ಮುಟ್ಟಿ, ಇನ್ನೊಮ್ಮೆ ತಬ್ಬಿಕೊಂಡರೆ ಎಲ್ಲರೂ ಒಟ್ಟಿಗೇ ಇದೀವಿ ಎಂಬಂತಹ ಸಂತೋಷ ತಂತಾನೆ ಬರತ್ತೆ.

ಧಾರವಾಡಕ್ಕೆ ಹೋಗಿರುವ ನಮ್ಮ ಮಿತ್ರ ಸಂಪುಟ ಅಲ್ಲಿಂದಲೇ ನನ್ನನ್ನು ಛೇಡಿಸುತ್ತಿದ್ದಾರೆ. ಇವತ್ತೂ ಕೂಡ ನೀನು ಆಫೀಸು ಆಫೀಸು ಅಂತ ಸಾಯ್ತಾ ಇದ್ದೀಯಾ. ನಾವೆಲ್ಲ ಇಲ್ಲಿ ಮಜಾ ಮಾಡ್ತೀದೀವಿ, ನೀನು ಅಲ್ಲೇ ಇದ್ಕೊ ಅಂತ ರೇಗಿಸುತ್ತಿದ್ದಾರೆ. ಚೆನ್ನಾಗಿದೆ.

ಇಲ್ಲಿದ್ದಾಗ ಅಲ್ಲಿಯ ನೆನಪಾಗತ್ತೆ. ಅಲ್ಲಿದ್ದಾಗ ಇಲ್ಲಿಯದು ಕಾಡತ್ತೆ. ಅದಕ್ಕೋಸ್ಕರ ಅಲ್ಲಿ ಇಲ್ಲಿ ಎಂಬ ಹಂಗು ತೊರೆದು ನನ್ನ ಪಾಡಿಗೆ ನಾನು ಸುಮ್ಮನೆ ಇರುವುದು ಹೇಗೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತೇನೆ. ನನಗೆ ನಿಮ್ಮ ಶುಭಾಶಯಗಳು ಇನ್ನಷ್ಟು ಬೇಕು. ನಾನು ಅಲ್ಪತೃಪ್ತನಲ್ಲ.

ಹೀಗಿರುವಾಗ ಲಕ್ಷ್ಮೇಶ್ವರದಿಂದ ಸ್ನೇಹಿತರು ಎಸ್‌ಎಂಎಸ್‌ ಮೂಲಕ ಜೋಕುಗಳನ್ನು ಕಳಿಸುತ್ತಲೇ ಇದ್ದಾರೆ. ನನಗೆ ಇಷ್ಟವಾದ ಒಂದು ಜೋಕನ್ನು ನಿಮಗೂ ಹೇಳಿ ಮಾತು ಬೈ ಹೇಳುತ್ತೇನೆ. ನಿಮಗೆಲ್ಲ ಅಕ್ಟೋಬರ್‌ ಶುಭಾಶಯಗಳು..

  • ಒಬ್ಬ ಹುಡುಗ ಎಸ್‌ಎಸ್‌ಎಲ್‌ಸಿನಲ್ಲಿ ರ್ಯಾಂಕ್‌ ತೊಗೊಂಡ. ಕಾರಣ ಅವನು ಪ್ರತಿಭಾವಂತ. ಆದರೆ, ಪಿಯೂಸಿನಲ್ಲಿ ಅವನು ಫೇಲ್‌ ಆದ. ಕಾರಣ ಅವಳು ಯಾರೋ ಪ್ರತಿಭಾ ಅಂತ...!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more