ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಲ್ಲಿ ಸಂಸ್ಕೃತಿ: ಸಿಲಿಕಾನ್‌ ಸಿಟಿಗೆ ಕುಖ್ಯಾತಿ

By Staff
|
Google Oneindia Kannada News

ಸಿಲ್ಲಿ ಸಂಸ್ಕೃತಿ: ಸಿಲಿಕಾನ್‌ ಸಿಟಿಗೆ ಕುಖ್ಯಾತಿ
ಸಿಲಿಕಾನ್‌ ಸಿಟಿಗೆ ಈಗ ‘ಸೆಕ್ಸ್‌ ಸಿಟಿ’ಯ ಅಭಿದಾನ! ಇವತ್ತು ಬೆಂಗಳೂರಿನ ವಿಟ ಪ್ರಪಂಚ ಮುನ್ನುಗ್ಗುತ್ತಿರುವ ರಭಸಕ್ಕೆ ಪೊಲೀಸರ ಉದಾಸೀನವೂ ಸೇರಿಕೊಂಡರೆ ಸಿಲಿಕಾನ್‌ ಸಿಟಿ ‘ಭಾರತದ ಬ್ಯಾಂಕಾಕ್‌’ ಆಗಿಯೇ ಬಿಡುವ ದಿನಗಳು ದೂರವಿಲ್ಲ! ರಾಜಧಾನಿ ನಗರದ ಮತ್ತೊಂದು ಕರಾಳ ಮುಖ!

  • ಟಿ.ಕೆ. ಪ್ರದೀಪ್‌ಕುಮಾರ್‌


ಐಟಿ ಕಾಲಿಟ್ಟ ನಂತರದ ವರ್ಷಗಳಲ್ಲಿ ಬೆಂಗಳೂರು ಕ್ರಮೇಣ ‘ಭಾರತದ ಬ್ಯಾಂಕಾಕ್‌’ ಆಗಿ ಪರಿವರ್ತಿತವಾಗತೊಡಗಿದೆ.

ಮುಕ್ತ ಹಾಗೂ ಸ್ವಚ್ಛಂದ ಕಾಮ ಕೇಂದ್ರವಾಗಿರುವ ಥಾಯ್ಲೆಂಡಿನ ಕುಖ್ಯಾತ ರಾಜಧಾನಿ ಬ್ಯಾಂಕಾಕ್‌ ರೀತಿಯಲ್ಲೇ ಈಗ ಬೆಂಗಳೂರಿನ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ಮತ್ತರು, ಲೋಲುಪರ ಬಾಯಲ್ಲಿ ನಲಿದಾಡತೊಡಗಿದೆ. ಇದಕ್ಕೆ ಬೆಂಗಳೂರಿನ ಸಮ್ಮಿಶ್ರ ಸಂಸ್ಕೃತಿ, ಇಂಟರ್‌ನೆಟ್‌ ಪ್ರಚಾರ, ಕಾನೂನು ವೈಫಲ್ಯ ಮೂರೂ ಕಾರಣ ‘ಬೆಂಗಳೂರು ಸೆಕ್ಸ್‌ ಸಿಟಿ ಆಗುತ್ತಿದೆ’ ಎಂದರೆ ಅದನ್ನು ಅತಿಶಯೋಕ್ತಿ ಎಂದು ಪೊಲೀಸರು ಹೀಯಾಳಿಸುತ್ತಾರೆ.

ಅವರು ಒಮ್ಮೆ ವರ್ಲ್ಡ್‌ ಸೆಕ್ಸ್‌ ಡಾಟ್‌ ಕಾಮ್‌ನಲ್ಲಿ ಸಿಗುವ ‘ಬೆಂಗಳೂರು ಎಸ್ಕಾರ್ಟ್‌ ಸರ್ವೀಸ್‌ ರಿವ್ಯೂ’ನಲ್ಲಿ ದೇಶವಿದೇಶಗಳ ಲಂಪಟರು ಬೆಂಗಳೂರಿನಲ್ಲಿ ತಮ್ಮ ಅನುಭವಗಳನ್ನು ದಾಖಲಿಸಿರುವ ಧಾಟಿಯನ್ನೊಮ್ಮೆ ನೋಡಬೇಕು.

‘ಬೆಂಗಳೂರಿನಲ್ಲಿ ನನ್ನ ಜೀವನದ ಅತ್ಯಂತ ಸುಖಮಯ ಘಳಿಗೆ ಗಳನ್ನು ಸವಿದೆ’ ಎಂದು ವಿದೇಶಿಯ ನೊಬ್ಬ ಹೇಳಿದರೆ, ‘ಭಾರತೀಯ ನಗರಗಳಲ್ಲಿ ವೇಶ್ಯಾವಾಟಿಕೆ ಕುರಿತು ಒಂದೊಂದು ನಗರಗಳಲ್ಲಿ ಒಂದೊಂದು ರೀತಿಯ ವಾತಾ ವರಣವಿದೆ. ಇವುಗಳಲ್ಲೆಲ್ಲ ಬೆಂಗಳೂರು ಅತ್ಯಂತ ಮುಕ್ತ ವಾತಾವರಣ ಹೊಂದಿದೆ’ ಎಂದು ಇನ್ನೊಬ್ಬ ಹೇಳುತ್ತಾನೆ.

‘ಕಮ್ಮಿ ಖರ್ಚಿನಲ್ಲಿ ಮಜಾ ಮಾಡಲು ಈ ಊರೇ ಸರಿ’ ಎಂದೊಬ್ಬ ಹೇಳಿದರೆ, ‘ಪಿಕ್‌ ಅಪ್‌ ಮಾಡಲು ನಿಮಗೆ ಯಾವ ಸಮಸ್ಯೆಯೂ ಇಲ್ಲ, ಯಾಕೆಂದರೆ ಬೆಂಗಳೂರಿನಲ್ಲಿ ಎಲ್ಲ ಪೊಲೀಸರು ದುಡ್ಡುಕೊಟ್ಟರೆ ಸುಮ್ಮನಾಗುತ್ತಾರೆ ಎಂದು ಇನ್ನೊಬ್ಬ ಬರೆದುಕೊಂಡಿದ್ದಾನೆ. ವಿಶ್ವದ ಯಾವುದೇ ಒಂದು ನಗರಕ್ಕೆ ‘ ಸೆಕ್ಸ್‌ ಸಿಟಿ’ ಎಂಬ ಇಮೇಜ್‌ ಬರುವುದೇ ಹೀಗೆ. ಇತರ ರಾಜ್ಯಗಳು, ದೇಶಗಳಿಂದ ಲೋಲುಪರು ಸುಮ್ಮನೇ ಇರುವುದಿಲ್ಲ. ತಾವು ಭೇಟಿ ಕೊಟ್ಟ ಊರಿನಲ್ಲಿ ಪರಿಸ್ಥಿತಿ ಹೇಗಿದೆ, ಎಲ್ಲೆಲ್ಲಿ ತಮ್ಮ ದಾಹ ತಣಿಸಿಕೊಳ್ಳಬಹುದು, ಎಷ್ಟು ಹಣ ತೆರಬೇಕು? ಮಾಹಿತಿಯನ್ನು ಅವರು ಇಂಟರ್‌ನೆಟ್‌ ಮೂಲಕ ಇದಕ್ಕೆಂದೆ ಇರುವ ವೆಬ್‌ಸೈಟ್‌ಗಳಿಗೆ ಹಂಚುತ್ತಾರೆ. Vidhana Soudha

ಇತ್ತೀಚೆಗೆ ಮಾಧ್ಯಮವಾಗಿ ರೂಪುಗೊಳ್ಳುತ್ತಿರುವ ಬ್ಲಾಗ್‌ ಮೂಲಕವೂ ಇಂಥ ಮಾಹಿತಿ ಹರಡತೊಡಗುತ್ತದೆ. ಕ್ಷಣಾರ್ಧದಲ್ಲಿ ವಿಶ್ವಾದ್ಯಂತ ರವಾನೆಯಾಗುತ್ತದೆ. ಇಂಥ ಪ್ರವಾಸಿಗಳ ಹೊಳೆಯನ್ನೇ ಹರಿಸಲು ಸಿದ್ಧ್ದರಿರುವುದರಿಂದ ವೇಶ್ಯಾವಾಟಿಕೆಗೆ ಅಪಾರ ಬೇಡಿಕೆ ಉಂಟಾಗಿ ಅದನ್ನು ಪೂರೈಸುವ ಮಾರ್ಗಗಳೂ ತೆರೆದುಕೊಂಡು ಬಿಡುತ್ತವೆ. ಹೀಗೆ ಕೊನೆಯಿಲ್ಲದ ಒಂದು ವಿಷವರ್ತುಲವೇ ನಿರ್ಮಾಣವಾಗುತ್ತದೆ.

ಬೀದಿಬೀದಿಗಳಲ್ಲಿ : ಮುಂಬಯಿಯ ಕಾಮಾಟಿಪುರ, ಕೋಲ್ಕತಾದ ಸೋನಾಕಾಚಿ ದಿಲ್ಲಿಯ ಸೀಮಾಪುರಿಯಂತೆ ಬೆಂಗಳೂರಿಗೆ ನಿರ್ದಿಷ್ಟವಾದ ಕೆಂಪುದೀಪದ ಪ್ರದೇಶ ಇಲ್ಲ. ಆದರೆ, ‘ಸ್ಟ್ರೀಟ್‌ ವಾಕರ್ಸ್‌ ಏರಿಯಾ’ ಎಂದು ಕರೆಯಲಾಗುವ ಪಿಕ್‌ಅಪ್‌ ಸ್ಪಾಟ್‌ಗಳಿವೆ.

ಮೆಜೆಸ್ಟಿಕ್‌, ಕಲಾಸಿಪಾಳ್ಯಗಳಲ್ಲಿ ನಡೆಯುವ ಹೊಟ್ಟೆಪಾಡಿನ ದಂಧೆ ಒಂದೆಡೆಯಾದರೆ, ಸಿಎಂಎಚ್‌ ರಸ್ತೆ, ಮ್ಯೂಸಿಯಂ ರಸ್ತೆ, ರೆಸಿಡೆನ್ಸಿ ರಸ್ತೆ ಹಾಗೂ ಬ್ರಿಗೇಡ್‌ ರಸ್ತೆ, ರೆಸಿಡೆನ್ಸಿ ಹಾಗೂ ಸೇಂಟ್‌ ಮಾರ್ಕ್‌ ರಸ್ತೆಯ ಜಂಕ್ಷನ್‌ (ಇದು ಈಗ ವಿಠ್ಠಲ್‌ ಕಡೆಗೆ ಬದಲಾಗತೊಡಗಿದೆ) ಗಳಲ್ಲಿ ಬೀದಿ ಬೀದಿಯಲ್ಲಿ ಹೈಟೆಕ್‌ ವೇಶ್ಯಾವೃತ್ತಿ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಇರುತ್ತಾರೆ. ಈ ರಸ್ತೆಗಳಲ್ಲಿ ವೇಶ್ಯಾವೃತ್ತಿ ನಡೆಸುವವರಲ್ಲಿ ವೇಶ್ಯೆಯರಿಂದ ಹಿಡಿದು, ಗೃಹಿಣಿಯರು, ಬಹುರಾಷ್ಟ್ರೀಯ ಕಂಪನಿ ಉದ್ಯೋಗಿಗಳು, ಸೆಕ್ರೆಟರಿ, ರಿಸೆಪ್ಷ ನಿಸ್ಟ್‌ಗಳು, ವಿದ್ಯಾರ್ಥಿನಿಯರೂ ಇದ್ದಾರೆ. ಇಂಥವರು ಸಿಟಿಬಸ್‌ ಸ್ಟ್ಯಾಂಡ್‌ಗಳಲ್ಲಿ ನಿಂತಿರುತ್ತಾರೆ.

ಕೆಲವರು ನಿರ್ದಿಷ್ಟ ಹೋಟೆಲ್‌, ರೆಸ್ಟುರಾಂಟ್‌ಗಳಲ್ಲಿ, ಅಥವಾ ಡಿಸ್ಕೋಥೆಕ್‌ಗಳಲ್ಲಿ ಇರುತ್ತಾರೆ. ಹೊಸಬರನ್ನು ಇಂಥವರ ಬಳಿಗೆ ಕರೆದೊಯ್ಯಲು ಕೆಲವು ಆಟೊ ಚಾಲಕರು ಸಹಾಯ ಮಾಡುತ್ತಾರೆ. ಇನ್ನು ಫ್ರೇಜರ್‌ ಟೌನಿನ ಹೈಸ್ಕೂಲ್‌ ಒಂದರ ಮುಂದೆ ಆಂಗ್ಲೋ-ಇಂಡಿಯನ್‌ ಯುವತಿಯರೂ ದಂಧೆಯಲ್ಲಿ ನಿರತರಾಗಿದ್ದಾರೆ. ಕುಕ್ಸ್‌ ಟೌನ್‌, ಬೆನ್ಸನ್‌ಟೌನ್‌ ಮತ್ತು ಫ್ರೇಜರ್‌ ಟೌನ್‌ಗಳಲ್ಲಿ ಬೀದಿ ಪಕ್ಕದಲ್ಲೇ ದಂಧೆ ಕುರಿತು ಮಾಹಿತಿ, ದೂರವಾಣಿ ಸಂಖ್ಯೆಗಳು ಇರುವ ಕರಪತ್ರಗಳನ್ನು ಅಂಟಿಸಲಾಗಿದೆ.

ಕೆಲ ವರ್ಷಗಳ ಹಿಂದೆ ಸರ್ಕ್ಯುಲೇಟ್‌ ಆಗುತ್ತಿದ್ದ ‘ಸೋನಮ್‌ ಕೆ ಪ್ಯಾರ್‌’ ಎಂಬ ಕಿರುಪುಸ್ತಕವೊಂದರಲ್ಲಿಯೂ ಇಂಥ ಮಾಹಿತಿಗಳು ಬೇಕಾದಷ್ಟಿದ್ದವು. ಈಗ ಕೆಲವು ಪತ್ರಿಕೆಗಳೇ ಇಂಥ ಜಾಹೀರಾತು ನೀಡಲು ಶುರು ಮಾಡಿರುವುದರಿಂದ ಪ್ರಾಯಶಃ ಈ ಪುಸ್ತಕ ಮುಚ್ಚಿಹೋಗಿದೆ ಎನಿಸುತ್ತದೆ. ಇದೆಲ್ಲ ಪೊಲೀಸರಿಗೆ ಚೆನ್ನಾಗಿ ಗೊತ್ತಿದ್ದರೂ ‘ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಹೇಳಿಕೊಳ್ಳುತ್ತ, ಪರಿಸ್ಥಿತಿ ಕೈಮೀರಲು ಕಾರಣರಾಗಿದ್ದಾರೆ.

ಇಂಟರ್‌ನೆಟ್‌, ಮೊಬೈಲ್‌, ಬ್ಲಾಗ್‌ ಮೂಲಕ ವೇಶ್ಯಾವಾಟಿಕೆ ಹರಡದಂತೆ ತಡೆಗಟ್ಟುವ ಕೆಲಸ ಮಾಡಿದರೆ ಹೈಟೆಕ್‌ ವೇಶ್ಯಾವಾಟಿಕೆಯ ಬೆನ್ನುಮುರಿದಂತೆ ಆಗುತ್ತದೆ. ಇ-ಮೇಲ್‌, ಮೊಬೈಲ್‌ ಅಥವಾ ವೆಬ್‌ಸೈಟ್‌ ಮೂಲಕ ವ್ಯವಹರಿಸುವ ಪಿಂಪ್‌ಗಳನ್ನು ಹುಡುಕಿ ಸದೆಬಡಿದರೆ ಪಿಡುಗು ಅಂತಾರಾಷ್ಟ್ರೀಯ ಸ್ವರೂಪ ಪಡೆಯದಂತೆ ಹಾಕಬಹುದು.

ಇವತ್ತು ಬೆಂಗಳೂರಿನ ವಿಟಪ್ರಪಂಚ ಮುನ್ನುಗ್ಗುತ್ತಿರುವ ರಭಸಕ್ಕೆ ಪೊಲೀಸರ ಉದಾಸೀನವೂ ಸೇರಿಕೊಂಡರೆ ಸಿಲಿಕಾನ್‌ ಸಿಟಿ ‘ಭಾರತದ ಬ್ಯಾಂಕಾಕ್‌’ ಆಗಿಯೇ ಬಿಡುವ ದಿನಗಳು ದೂರವಿಲ್ಲ.

(ಸ್ನೇಹ ಸೇತು : ವಿಜಯಕರ್ನಾಟಕ)

ಪೂರಕ ಓದಿಗೆ :

ಬೆಂಗಳೂರಿಗೆ ಬೇಡವೇ ‘ಕೆಂಪುದೀಪ’?!


ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X