• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ದೀಪ ಹಚ್ಚಿದ ರಕ್ಷಣಾ ವೇದಿಕೆ ಜಾಗೃತಿ ಸಮಾವೇಶ

By Super
|

ಕನ್ನಡ ದೀಪ ಹಚ್ಚಿದ ರಕ್ಷಣಾ ವೇದಿಕೆ ಜಾಗೃತಿ ಸಮಾವೇಶ ಕನ್ನಡ ಪ್ರಜ್ಞೆ ಜಾಗೃತಗೊಳಿಸುವ ಉದ್ದೇಶದ ಕರ್ನಾಟಕ ರಕ್ಷಣಾ ವೇದಿಕೆ ಸಮಾವೇಶದಲ್ಲಿ ಉತ್ಸಾಹದೊಂದಿಗೆ ವಿಚಾರವೂ ಇದ್ದುದು ವಿಶೇಷ. ಸಮಾವೇಶದ ಕಿರು ವರದಿ ಇಲ್ಲಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ನಾಲ್ಕನೇ ಸ್ವಾಭಿಮಾನಿ ಕನ್ನಡಿಗರ ಜಾಗೃತಿ ಸಮಾವೇಶದ ಅಂಗವಾಗಿ ಬೃಹತ್‌ ಸಾಂಸ್ಕೃತಿಕ ಜಾಥಾವನ್ನು ಜನವರಿ 29ರಂದು ಬೆಳಗ್ಗೆ ಮಹಾತ್ಮ ಗಾಂಧಿ ರಸ್ತೆಯ ಮೇಯೋಹಾಲ್‌ ಬಳಿ ಇರುವ ಕಿಟೆಲ್‌(ಕನ್ನಡದ ಪದಕೋಶವನ್ನು ಕನ್ನಡಿಗರಿಗೆ ಕೊಡುಗೆ ನೀಡಿದ ಜರ್ಮನಿಯ ಮಹಾನ್‌ ಕನ್ನಡ ಪ್ರೇಮಿ) ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಬೆಂಗಳೂರು ಮಾಹಾನಗರದ ಮಹಾಪೌರರಾದ ನಾರಾಯಣಸ್ವಾಮಿ ಉದ್ಘಾಟಿಸಿದರು.

ನಂತರ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ವಿವಿದ ಜಾನಪದ ತಂಡಗಳ ಜೊತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಮತ್ತು ಬನವಾಸಿ ಬಳಗದ ಸದಸ್ಯರ ಬೃಹತ್‌ ಸಾಂಸ್ಕೃತಿಕ ಮೆರವಣಿಗೆಯು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣ ಗೌಡರ ನೇತೃತ್ವದಲ್ಲಿ ನಡೆಯಿತು.

ನಂದಿ ಕೋಲು ಕುಣಿತ, ಡೋಲು ಕುಣಿತ, ಕಂಸಾಳೆ ಕುಣಿತ, ವೀರಗಾಸೆ ಕುಣಿತ, ಯಕ್ಷಗಾನ ಕಲಾವಿದರು ಹೀಗೆ ಕರ್ನಾಟಕದ ಶ್ರೀಮಂತ ಜಾನಪದ ತಂಡಗಳು ಕರ್ನಾಟಕ ರಕ್ಷಣಾ ವೇದಿಕೆಯ ಮೆರವಣಿಗೆಗೆ ಮೆರಗನ್ನು ನೀಡಿದವು. ಮಹಾತ್ಮ ಗಾಂಧಿ ರಸ್ತೆಯಿಂದ ಶುರುವಾದ ಮೆರವಣಿಗೆ, ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ರಸ್ತೆ (ರೆಸಿಡೆನ್ಸಿ ರಸ್ತೆ), ಸಂಗೊಳ್ಳಿ ರಾಯಣ್ಣ ವೃತ್ತ (ರಿಚ್ಮಂಡ್‌ ವೃತ್ತ), ಕಂಠೀರವ ಕ್ರೀಡಾಂಗಣ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ (ಹಡ್ಸನ್‌ ವೃತ್ತ), ಕೆಂಪೇಗೌಡ ರಸ್ತೆ, ಮೈಸೂರ್‌ ಬ್ಯಾಂಕ್‌ ವೃತ್ತದ ಮೂಲಕ ತೆರಳಿ ಸಮಾವೇಶ ನಡೆಯುವ ಸರ್ಕಾರಿ ಕಲಾ ಕಾಲೇಜಿನ ಮೈದಾನದಲ್ಲಿ ಬಂದು ಸೇರಿತು. ಕಾರ್ಯಕರ್ತರು ಅತ್ಯಂತ ಶಿಸ್ತಿನಿಂದ ಈ ಬೃಹತ್‌ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ಸಾಗಿ ಬಂದ ದಾರಿಯುದ್ದಕ್ಕೂ ಕಾರ್ಯಕರ್ತರ ಕನ್ನಡದ ಜಯಘೋಷ ಮುಗಿಲು ಮುಟ್ಟಿತ್ತು. ಎಲ್ಲೆಲ್ಲೂ ಕನ್ನಡದ ಬಾವುಟ ಹಾರಾಡುತ್ತಿತ್ತು. ಇಡೀ ವಾತಾವರಣ ಕನ್ನಡಮಯವಾಗಿತ್ತು.

ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಕು.ಮೀರಾ ನಾರಾಯಣ ಗಣೇಶನನ್ನು ಸ್ತುತಿಸುವುದರ ಮೂಲಕ ಕರ್ನಾಟಕ ರಕ್ಷಣಾ ವೇದಿಕೆಯ ನಾಲ್ಕನೇ ಸ್ವಾಭಿಮಾನಿ ಕನ್ನಡಿಗರ ಜಾಗೃತಿ ಸಮಾವೇಶದ ಉದ್ಘಾಟನಾ ಸಮಾರಂಭಕ್ಕೆ ಜಾಲನೆ ನೀಡಿದರು. ಪ್ರಾರ್ಥನೆಯ ನಂತರ ಕರ್ನಾಟಕ ರಕ್ಷಣಾ ವೇದಿಕೆಯ ಸಮಾವೇಶದ ಉದ್ಘಾಟನೆಯನ್ನು ಹಿರಿಯ ಗಾಂಧಿವಾದಿಗಳೂ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಜಿ.ನಾರಾಯಣ ಅವರೂ, ಕನ್ನಡದ ಹಿರಿಯ ಸಾಹಿತಿಗಳಾದ ಎಲ್‌. ಎಸ್‌. ಶೇಷಗಿರಿರಾಯರೂ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲರು ದೀಪ ಬೆಳಗಿಸುವ ಮುಖಾಂತರ ನೆರವೇರಿಸಿದರು.

ಬನವಾಸಿ ಬಳಗದ ಗುರುಪ್ರಸಾದ್‌ ಸ್ವಾಗತಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಅಣಛ/ಕ್ಷರಾದ ನಾರಾಯಣಗೌಡರು ಪ್ರಾಸ್ತವಿಕ ಭಾಷಣ ಮಾಡಿದರು.

ಚಂದ್ರಶೇಖರ ಪಾಟೀಲರು ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆಯ ಬೃಹತ್‌ ಜಾಥಾವನ್ನು ಮಹಾತ್ಮ ಗಾಂಧಿ ರಸ್ತೆಯಲ್ಲಿ ತೆರಳಲು ಪೋಲಿಸರು ಅವಕಾಶ ನಿರಾಕರಿಸಿದ್ದಕ್ಕೆ ಕಟುವಾಗಿ ಟೀಕಿಸಿದರು. ಮುಂದಿನ ಕನ್ನಡ ಪರ ಹೋರಾಟಗಳು ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯಿಂದಲೆ ಆರಂಭವಾಗಲಿ ಎಂದು ಕನ್ನಡ ಹೋರಾಟಗಾರರಿಗೆ ಚಂಪಾ ಕರೆ ನೀಡಿದರು.

ಕನ್ನಡದ ಸಮಸ್ಯೆಗಳನ್ನು ಪರಿಹರಿಸಲು ಕರ್ನಾಟಕದ ರಾಜಕೀಯ ಮುಖಂಡರಿಗೆ ಇಚ್ಛಾಶಕ್ತಿಯಿಲ್ಲದಿರುವುದು ಬಹಳ ಖೇದದ ಸಂಗತಿ ಎಂದು ಜಿ.ನಾರಾಯಣ ಹೇಳಿದರು. ಕೇಂದ್ರ ಸರ್ಕಾರದ ಮಂತ್ರಿಮಂಡಲದಲ್ಲಿ ಒಬ್ಬ ಕನ್ನಡಿಗನಿಗೂ ಸ್ಥಾನವಿಲ್ಲದಿರುವುದು ನಮ್ಮ ಕನ್ನಡಿಗರ ದೌರ್ಭಾಗ್ಯವೋ, ಇಲ್ಲ ನಮ್ಮ ರಾಜಕೀಯ ನಾಯಕರ ನಿರ್ಲಕ್ಷ್ಯವೋ ತಿಳಿಯದು ಎಂದು ಮರುಗಿದರು.

ಹಿರಿಯ ಸಾಹಿತಿಗಳಾದ ಎಲ್‌.ಎಸ್‌.ಶೇಷಗಿರಿರಾಯರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದ ಡಿ.ಐ.ಜಿ.ಗಳಾದ ಅಬ್ಬಾಯಿಯವರನ್ನೂ ಹಾಗೂ ಬೆಂಗಳೂರು ಕೇಂದ್ರ ಕಾರಾಗೃಹದ ಹಿರಿಯ ಅಧೀಕ್ಷಕರಾದ ವಿ.ಎಸ್‌.ರಾಜಾ ರವರನ್ನೂ ನಾರಾಯಣಗೌಡರು ಸನ್ಮಾನಿಸಿದರು.

ಸಂಭ್ರಮದೊಂದಿಗೆ ವಿಚಾರದ ಬೆಸುಗೆ

ಮಧ್ಯಾಹ್ನದ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ।। ಸಿದ್ಧಲಿಂಗಯ್ಯ ವಹಿಸಿದ್ದರು.

ಕನ್ನಡ ನಾಡಿನ ರೈತರ ಸಮಸ್ಯೆಗಳನ್ನು ಹಾಗೂ ಸರ್ಕಾರದ ಪಾತ್ರದ ಬಗ್ಗೆ ನೆರೆದಿದ್ದ ಸಭಿಕರ ಮುಂದೆ ತಮ್ಮ ವಿಜಾರವನ್ನು ಮಂಡಿಸಿದರು. ನಾಡಿನಲ್ಲಿ ರೈತರೇ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ವಿಶ್ಲೇಷಿಸಿದರು. ರೈತರ ಸಮಸ್ಯೆಗಳ ಪರಿಹಾರದ ಬಗ್ಗೆ ಸದನದಲ್ಲಿ ಚರ್ಚಿಸದೆ, ಸಾಮಾನ್ಯ ಜನರಿಗೆ ಉಪಯೋಗವಿಲ್ಲದ ವಿಷಯಗಳ ಬಗ್ಗೆ ವಿಧಾನಸಭೆಯಲ್ಲಿ ಕಿತ್ತಾಡುವ ರಾಜಕೀಯ ಪಕ್ಷಗಳ ಮುಖಂಡರ ನಡವಳಿಕೆಯನ್ನು ಕಟುವಾಗಿ ಟೀಕಿಸಿದರು.

ಕನ್ನಡಿಗರ ಸಮಗ್ರತೆ ಮತ್ತು ರಾಷ್ಟ್ರೀಯತೆ ಬಗ್ಗೆ ಡಾ. ಪಿ.ವಿ.ನಾರಾಯಣ ತಮ್ಮ ವಿಜಾರ ಮಂಡಿಸಿದರು. ಕನ್ನಡಿಗರ ಏಕತೆ, ಸಮಗ್ರತೆ, ಪ್ರಗತಿಯೇ ರಾಷ್ಟ್ರೀಯತೆಗೆ ಪೂರಕವಾಗುತ್ತದೆ ಎಂದರು. ಪರಭಾಷಿಕರ ದಾಳಿಯಿಂದ ಕನ್ನಡಿಗರ ಸಮಗ್ರತೆಗೆ ಧಕ್ಕೆ ಬಂದಿದೆ. ಪರಭಾಷಿಕರು ಕನ್ನಡ ನಾಡಿಗೆ ವಲಸೆ ಬಂದರೆ ಅವರು ಕನ್ನಡ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಬೇಕು, ಇಲ್ಲಿನ ಭಾಷೆ ಹಾಗು ಸಂಸ್ಕೃತಿಯನ್ನು ಗೌರವಿಸಬೇಕು. ಇದರ ಬಗ್ಗೆ ಕನ್ನಡಿಗರು ಜಾಗೃತರಾಗಿರಬೇಕು ಎಂದು ಪಿ.ವಿ.ನಾರಾಯಣ ಹೇಳಿದರು.

ವಲಸೆಯಿಂದ ಕನ್ನಡದ ಸಂಸ್ಕೃತಿಯ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಪ್ರೊ।। ಡಿ. ಲಿಂಗಯ್ಯನವರು ಸಭೆಯಲ್ಲಿ ತಮ್ಮ ವಿಜಾರ ಮಂಡಿಸಿದರು.

ಕನ್ನಡ ಚಿತ್ರರಂಗದ ಹಿಂದಿನ ಹಾಗೂ ಇಂದಿನ ಸ್ಥಿತಿಗತಿಗಳ ಬಗ್ಗೆ ಡಾ।। ಡಿ.ಬಿ.ಬಸವೇಗೌಡರು ಮಾತನಾಡಿದರು.

ಅನಿವಾಸಿ ಕನ್ನಡಿಗರಾಗಿ ಕನ್ನಡಕ್ಕೆ ಅವಿರತ ಸೇವೆ ಸಲ್ಲಿಸುತ್ತಿರುವ ಡಾ।। ಪಿ. ರಾಘವರೆಡ್ಡಿಯವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಾರಾಯಣಗೌಡರು, ಕನ್ನಡ ದಾಸ ಬಿರುದು ನೀಡಿ ಸನ್ಮಾನಿಸಿದರು.

ಶಾಸ್ತ್ರೀಯ ಭಾಷೆ ಪಟ್ಟಕ್ಕಾಗಿ ದೆಹಲಿಗೆ ನಿಯೋಗ

ಕರ್ನಾಟಕ ರಕ್ಷಣಾ ವೇದಿಕೆಯ ನಾಲ್ಕನೇ ಸ್ವಾಭಿಮಾನಿ ಕನ್ನಡಿಗರ ಜಾಗೃತಿ ಸಮಾವೇಶದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಮಾನ್ಯತೆ ನೀಡುವಂತೆ ಕೋರಲು ವಾರದೊಳಗೆ ಕನ್ನಡ ಪರ ಸಂಘಟನೆಗಳು ಹಾಗೂ ಹಿರಿಯ ಬುದ್ಧಿಜೀವಿಗಳೊಂದಿಗೆ ಚರ್ಚಿಸಿ ಕೇಂದ್ರಕ್ಕೆ ನಿಯೋಗ ಕಳುಹಿಸಿಕೊಡುವುದಾಗಿ ಮಾನ್ಯ ಮುಖ್ಯಮಂತ್ರಿಗಳಾದ ಧರ್ಮಸಿಂಗ್‌ ತಿಳಿಸಿದರು. ಕರ್ನಾಟಕದ ಐತಿಹಾಸಿಕ ಸಂಸ್ಕೃತಿ ಹಾಗೂ ಭಾಷೆಯನ್ನು ಉಳಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ಕನಕಪುರ ಕ್ಷೇತ್ರದ ಲೋಕಸಭಾ ಸದಸ್ಯೆಯಾದ ಶ್ರೀಮತಿ ತೇಜಸ್ವಿನಿ ರಮೇಶ್‌ ಮಾತನಾಡಿ, ಕನ್ನಡ ಹೋರಾಟಗಾರರ ಮೇಲೆ ಕೊಲೆ ಮೊಕದ್ದಮೆಗಳನ್ನು ಹೂಡುತ್ತಿರುವ ಪೋಲಿಸರ ಕ್ರಮವನ್ನು ಖಂಡಿಸಿದರು. ಕನ್ನಡ ಹೋರಾಟಗಾರರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ಕೂಡಲೆ ಹಿಂತೆಗೆದು ಕೊಳ್ಳಬೇಕೆಂದು ಸಂಸದೆ ತೇಜಸ್ವಿನಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಬೆಂಗಳೂರಿನ ಪಂಚತಾರಾ ಹೋಟೆಲ್‌ಗಳಲ್ಲಿ ರಾಜ್ಯದ ಸಂಸ್ಕೃತಿ ಹಾಗೂ ಪ್ರೇಕ್ಷಣೀಯ ಸ್ಥಳಗಳ ವಿವರಗಳನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಬೈಲುಕುಪ್ಪೆಯ ಬೌದ್ಧ ಧರ್ಮ ಗುರು ಪೆಮಾ ನೂರಬು ರಿಂಪೂಜೆಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾುತು. ಕಮರ್ಶಿಯಲ್‌ ರಸ್ತೆಯ ವೃತ್ತ ನಿರೀಕ್ಷಕರಾದ ಬಾಬು ನರೋನ್ಹ ಅವರನ್ನೂ ಸಮಾರಂಭದಲ್ಲಿ ಸನ್ಮಾನಿಸಲಾುತು.

ಆದಿಚುಂಚನಗಿರಿ ಮಠಾಧೀಶರಾದ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ವಿಧಾನ ಪರಿಷತ್ತಿನ ಸದಸ್ಯರಾದ ಡಾ. ಎಲ್‌. ಹನುಮಂತಯ್ಯ, ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಮಾಜಿ ಸಚಿವ ಡಿ.ಕೆ.ಶಿವಕುಮಾರ್‌, ರೋಷನ್‌ ಬೇಗ್‌ ಹಾಗೂ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಾದ ಟಿ.ಎಸ್‌.ನಾಗಾಭರಣ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬನವಾಸಿ ಬಳಗದ ವೆಂಕಟೆಶ್‌ ಶಾಸ್ತ್ರಿ ಹಾಗೂ ಜನಾರ್ಧನ ಸೊಗಸಾಗಿ ನಿರೂಪಿಸಿದರು. ವಂದನಾರ್ಪಣೆಯನ್ನು ಬನವಾಸಿ ಬಳಗದ ವಿಜಯ ಬಿ.ಎನ್‌ ನೆರವೇರಿಸಿದರು.

ಕರ್ನಾಟಕ ರಕ್ಷಾಣಾ ವೇದಿಕೆಯ ಪಾಂಡವಪುರ ಹಾಗೂ ಶ್ರೀರಂಗಪಟ್ಟಣದ ಸಾಂಸ್ಕೃತಿಕ ಘಟಕದ ಗೆಳೆಯರು ಕನ್ನಡದ ಕ್ರಾಂತಿ ಗೀತೆಗಳನ್ನು ಸೊಗಸಾಗಿ ಹಾಡಿ ನೆರೆದಿದ್ದ ಕಾರ್ಯಕರ್ತರಲ್ಲಿ ಅಭಿಮಾನವನ್ನು ತುಂಬಿದರು. ಕರ್ನಾಟಕದ ವಿವಿದ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರು, ಅಕ್ಕ-ತಂಗಿಯರು ಕರ್ನಾಟಕ ರಕ್ಷಣಾ ವೇದಿಕೆಯ ಸಮಾವೇಶದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Rakshana Vedikes Jan 05 conference in Bangalore has something to chew about..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more