ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಾಮಿ ಸಂತ್ರಸ್ತರಿಗೆ ನೆರವು ನೀಡಿರಿ; ಉದಾರಿಗಳಾಗಿರಿ ಹುಷಾರಾಗೂ ಇರಿ

By Staff
|
Google Oneindia Kannada News

ಸುನಾಮಿ ಸಂತ್ರಸ್ತರಿಗೆ ನೆರವು ನೀಡಿರಿ; ಉದಾರಿಗಳಾಗಿರಿ ಹುಷಾರಾಗೂ ಇರಿ
ನೀವು ನೀಡುವ ನೆರವು ಸಲ್ಲಬೇಕಾದವರಿಗೆ ಸಲ್ಲುತ್ತದಾ ಎನ್ನುವುದನ್ನು ನೀಡುವ ಮುನ್ನ ಖಾತರಿಪಡಿಸಿಕೊಳ್ಳಿ.

  • ದಟ್ಸ್‌ಕನ್ನಡ ಬ್ಯೂರೊ
Check before you donateಸುನಾಮಿ ಸಂತ್ರಸ್ತರ ನಿಧಿಗೆ ಮೈಸೂರಿನ ಕೇಂದ್ರ ಕಾರಾಗೃಹದ 900 ಖೈದಿಗಳು ತಮ್ಮ ಒಂದು ತಿಂಗಳ ವೇತನವನ್ನು ನೀಡಿದ್ದಾರೆ.

ಮೈಸೂರಿನ ಜೈಲಿನಲ್ಲಿನ ಖೈದಿಗಳಷ್ಟೇ ಅಲ್ಲ - ಶಿಕ್ಷಕರು, ಸರ್ಕಾರಿ ನೌಕರರಿಂದ ಹಿಡಿದು ಒಪ್ಪೊತ್ತಿನ ಗಂಜಿ ನಿಶ್ಚಯವಿಲ್ಲದ ಕೂಲಿ ಕಾರ್ಮಿಕರವರೆಗಿನ ಎಲ್ಲ ವರ್ಗದ ಮಂದಿ ತಮ್ಮ ಶಕ್ತ್ಯಾನುಸಾರ ಸಂತ್ರಸ್ತರ ಕಣ್ಣೀರು ಒರೆಸಲು ನೆರವಿನ ಹಸ್ತ ಚಾಚುತ್ತಿದ್ದಾರೆ. ಶಾಲೆಗೆ ಹೋಗುವ ಮಗು ಅಪ್ಪ ಚಾಕಲೇಟು ಕೊಳ್ಳಲು ಕೊಟ್ಟ ರುಪಾಯಿ ಬಿಲ್ಲೆಯನ್ನು ಪರಿಹಾರ ನಿಧಿಯ ಹುಂಡಿಗೆ ಇಳಿಬಿಡುತ್ತಿದೆ. ಕಾಫಿ ತುಂಬಿದ ಫ್ಲಾಸ್ಕನ್ನು ಹಿಡಿದು ಆಸ್ಪತ್ರೆಯಲ್ಲಿನ ಮಗಳನ್ನು ನೋಡಲು ಓಡುವ ಅಮ್ಮನ ಹೆಜ್ಜೆ ಎದುರಿಗೆ ಬಂದ ಪರಿಹಾರ ನಿಧಿ ಸಂಗ್ರಹ ಮೆರವಣಿಗೆಯೆದುರು ನಿಧಾನವಾಗುತ್ತದೆ. ನಿಜ, ರಾಷ್ಟ್ರೀಯ ದುರಂತಗಳು ಸಂಭವಿಸಿದಾಗಲೆಲ್ಲ ಇಂಥ ದೃಶ್ಯಗಳು ಕಾಣುವುದು ಮಾಮೂಲು. ಅಂಥ ಚಿತ್ರಗಳು ಸುನಾಮಿ ತಾಂಡವದ ಹೊತ್ತಿನಲ್ಲೂ ಕಾಣಿಸುತ್ತಿವೆ. ಮನುಷ್ಯತ್ವ ಇನ್ನೂ ಉಳಿದಿದೆಯಲ್ಲ , ಸಂತೋಷಪಡೋಣ.

ಸಂತ್ರಸ್ತರ ಕಣ್ಣೀರೊರೆಸಲು ದೇಶದ ಉದ್ದಗಲ್ಲಕ್ಕೂ ನಿಧಿ ಸಂಗ್ರಹ ಕಾರ್ಯಕ್ರಮಗಳು ನಡೆಯುತ್ತಿವೆ. ನಿಧಿಯಷ್ಟೇ ಅಲ್ಲ , ಊಟ, ಹೊದಿಕೆ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಸಂಗ್ರಹ ಕಾರ್ಯವೂ ನಡೆಯುತ್ತಿದೆ. ರಕ್ತದಾನ ಕ್ಯಾಂಪುಗಳು ಕೇರಿಗೊಂದರಂತೆ ನಡೆಯುವುದು ಇಂಥ ಹೊತ್ತಿನಲ್ಲೇ. ರಟ್ಟೆಯಲ್ಲಿ ಬಲ, ಮನೋಬಲವುಳ್ಳವರು ದುರಂತ ಸ್ಥಳಗಳಿಗೆ ತೆರಳಿ ಪರಿಹಾರ ಕಾರ್ಯಗಳಲ್ಲಿ ತೊಡಗುವುದೂ ಇದೆ. ಹೌದು, ನೀಡುವ ಕೈಗಳಿಗೆ ಈ ನೆಲದಲ್ಲಿ ಬರವಿಲ್ಲ . ಆ ಕೈಗಳನ್ನು ಮನಸ್ಸುಗಳನ್ನು ಅಭಿನಂದಿಸೋಣ. ಆದರೆ ನಾವು ನೀಡುವ ನೆರವು ಸಲ್ಲಬೇಕಾದವರಿಗೆ ಸಲ್ಲುತ್ತದಾ? ಇಂಥದೊಂದು ಪ್ರಶ್ನೆಯನ್ನು ನೀಡುವವರೆಲ್ಲ ಕೇಳಿಕೊಳ್ಳಬೇಕಾಗಿದೆ.

ಸುನಾಮಿ ಕೋಲಾಹಲ ಕೆಲವರಿಗೆ ಶಾಪವಾಗಿದ್ದರೆ, ಮತ್ತೆ ಕೆಲವರ ಪಾಲಿಗೆ ವರವೂ ಹೌದು. ಪರಿಹಾರದ ನೆಪದಲ್ಲಿ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳುವವರ ಉದಾಹರಣೆಯನ್ನು ಈ ಹಿಂದೆ ನಾವು ನೋಡಿದ್ದೇವೆ. ಕ್ಯಾಂಪುಗಳಲ್ಲಿ ದಾನ ಮಾಡಿದ ರಕ್ತ ಚರಂಡಿಗಳಲ್ಲಿ ಹರಿದುದನ್ನೂ ಕಂಡಿದ್ದೇವೆ. ಪ್ರಚಾರದ ತೆವಲಿಗಾಗಿ, ಸ್ವಕಲ್ಯಾಣಕ್ಕಾಗಿ ಪರಿಹಾರದ ನಾಟಕ ಆಡುವವರ ಕುರಿತು ಎಚ್ಚರ ಎಚ್ಚರ!

ಈಗಾಗಲೇ ವಿವಿಧ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು ಸುನಾಮಿ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿದ್ದು , ನಿಧಿ ಸಂಗ್ರಹಣೆಗಾಗಿ ಪೈಪೋಟಿಯೇ ನಡೆದಿದೆ. ಮಾನವೀಯ ದೃಷ್ಟಿಕೋನ ಒಳ್ಳೆಯದಾದರೂ ಒಂದಷ್ಟು ಎಚ್ಚರಿಕೆಗಳು ಅತ್ಯಗತ್ಯ. ನೆರವು ನೀಡುವ ಮುನ್ನ ಸ್ವಲ್ಪ ಯೋಚಿಸಿ ನೋಡಿ. ‘ದೇವರು ಕೊಟ್ಟರೂ ಪೂಜಾರಿ ಕೊಡ’ ಎಂಬಂತೆ ಸಹಾಯ ಸಂತ್ರಸ್ತರ ತಲುಪದೇ ಖದೀಮರ ಪಾಲಾಗುವ ಸಾಧ್ಯತೆಗಳಿವೆ.

ಸಂತ್ರಸ್ತರಿಗೆ ನೆರವನ್ನು ಹೇಗೆ ಮತ್ತು ಯಾರಿಗೆ ನೀಡಬೇಕು ಎನ್ನುವ ಪ್ರಶ್ನೆಗಳು ಬಹು ಮುಖ್ಯ. ನೆರವು ನೀಡಲು ಅಥವಾ ಕಾಣಿಕೆ ಸಂಗ್ರಹಿಸಲು, ಸರಕಾರ ಯಾವುದೇ ಕಾನೂನು ಬದ್ಧ ನಿಯಮಗಳನ್ನು ರೂಪಿಸಿಲ್ಲ. ಪಾರದರ್ಶಕತೆ ಕಡ್ಡಾಯವಿಲ್ಲದ ಕಾರಣ ಯಾರು ಬೇಕಾದರೂ ಪ್ರಕೃತಿ ವಿಕೋಪಗಳ ಹೆಸರಲ್ಲಿ, ಸಾರ್ವಜನಿಕ ಹಣವನ್ನು ಲೂಟಿ ಮಾಡ ಬಹುದು! ನಿಧಿ ಸಂಗ್ರಹಿಸುವ ಸಂಘಟನೆಗಳ ಪ್ರಾಮಾಣಿಕತೆ ಹಾಗೂ ವಿಶ್ವಾಸಾರ್ಹತೆಯನ್ನು ಸಾರ್ವಜನಿಕರೇ ನಿರ್ಧರಿಸಬೇಕಾಗಿದೆ.

ದುರ್ಬಳಕೆ : ದಿಢೀರನೆ ಹುಟ್ಟಿಕೊಳ್ಳುವ ಹಾಗೂ ಪುನಶ್ಚೇತನ ಹೊಂದುವ ಕೆಲವು ಸಂಸ್ಥೆಗಳು, ಧಾರ್ಮಿಕ ಟ್ರಸ್ಟ್‌ಗಳು, ಸಂಘಟನೆಗಳು ಸಂದರ್ಭದ ಲಾಭ ಪಡೆದು ಜನರನ್ನು ವಂಚಿಸುತ್ತವೆ. ಸಂಗ್ರಹಿಸಿದ ನಿಧಿ ಹಾಗೂ ಪರಿಹಾರ ಸಾಮಗ್ರಿಗಳ ವಿತರಣೆಯಲ್ಲಿ ಸೋರಿಕೆ ಸಾಮಾನ್ಯ ಸಂಗತಿಯಾಗಿದೆ.

ಗುಜರಾತ್‌ನಲ್ಲಿ ಭೂಕಂಪವಾದಾಗ, ಒರಿಸ್ಸಾದಲ್ಲಿ ಚಂಡಮಾರುತ ಅಬ್ಬರಿಸಿದಾಗ ಈ ಪ್ರದೇಶಗಳಿಗೆ ಭೇಟಿ ನೀಡಿದ್ದ ಅಧಿಕಾರಿಯಾಬ್ಬರ ಪ್ರಕಾರ, ಎನ್‌ಜಿಓಗಳದು ಪ್ರಚಾರದ ಸೇವೆ. ಕೇವಲ ಮೀಡಿಯಾಗಳ ಮುಂದೆ ಮಿಂಚುವುದಷ್ಟೇ ಮುಖ್ಯ. ಸಂತ್ರಸ್ತರಿಗೆ ಚಿಕ್ಕಾಸಿನ ಪ್ರಯೋಜನವೂ ಇಲ್ಲ . ಗುಜರಾತ್‌ನಲ್ಲಿ ಸಂತ್ರಸ್ತರ ಹಳ್ಳಿಯಾಂದನ್ನು ದತ್ತು ಪಡೆಯುವುದಾಗಿ ಹೇಳಿ ಪ್ರಚಾರ ಗಿಟ್ಟಿಸಿದ ಸಂಸ್ಥೆಯಾಂದು ಅಪಾರ ವಂಚನೆ ನಡೆಸಿದ ಉದಾಹರಣೆಯೂ ಇದೆ. ಸಂತ್ರಸ್ತರಿಗಾಗಿ ಸಂಗ್ರಹಿಸಿದ್ದ ಬಟ್ಟೆ ಬರೆಗಳು ನಗರದ ಬೀದಿಗಳಲ್ಲಿ ಮಾರಾಟವಾದ ವಿಚಾರ ಇನ್ನು ಹಸಿಯಾಗಿಯೇ ಇದೆ.

ಹಾಗೆಂದು ಎಲ್ಲ ಸಂಸ್ಥೆಗಳನ್ನೂ ವಂಚಕರ ಸಾಲಿಗೆ ಸೇರಿಸುವುದು ಸಾಧ್ಯವಿಲ್ಲ . ಕೆಲವು ಪ್ರಾಮಾಣಿಕ ಸಂಸ್ಥೆಗಳೂ ಇವೆ. ಅವುಗಳನ್ನು ಗುರ್ತಿಸುವುದು ನೀಡುವವರ ಕೆಲಸ.

ಸರ್ಕಾರ ನೀತಿ ರೂಪಿಸಬೇಕು : ಸುನಾಮಿ ದುರಂತದಲ್ಲಿ ಬದುಕಿ ಬಂದವರಿಗೆ ಬದುಕು ಕಟ್ಟಿಕೊಡುವ ಕೆಲಸ ಅತಿ ಮುಖ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಮಹತ್ವವಾದುದು. ನಿರ್ದಿಷ್ಟ ಕಚೇರಿಯಲ್ಲಿ ನಿಧಿ ಸಂಗ್ರಹಕ್ಕೆ ನೊಂದಾವಣೆ, ಲೆಕ್ಕ ಪತ್ರ ಸಲ್ಲಿಕೆ ಮತ್ತಿತರ ಕಾರ್ಯಸೂಚಿಯನ್ನು ಸರಕಾರ ರೂಪಿಸಿ, ದುರ್ಬಳಕೆಗೆ ಕಡಿವಾಣ ಹಾಕಬೇಕು.

ನೀವು ಹೀಗೆ ಮಾಡಿ : ಸಂತ್ರಸ್ತರ ಕಣ್ಣೀರು ಹೊರೆಸುವ ಬಯಕೆ ನಿಮ್ಮದಾದರೆ, ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೇರವಾಗಿ ಹಣ ಮತ್ತಿತರ ಸಾಮಗ್ರಿಗಳ ತಲುಪಿಸಿ.

ಸಂತ್ರಪ್ತರನ್ನು ತಲುಪಲು ಒಂದಷ್ಟು ಮಾರ್ಗಗಳು ಇಲ್ಲಿವೆ-

ನೀಡುವ ಕೈಗಳು ದಣಿಯದಿರಲಿ.

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X