ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡಹುಡುಗಿ ದೀಪಾ ವೈದ್ಯಕೀಯ ಸೀಟು ಪಡೆದ ‘ವಿಮೋಚನಾ’ ಕಥೆ..

By Staff
|
Google Oneindia Kannada News

ಬಡಹುಡುಗಿ ದೀಪಾ ವೈದ್ಯಕೀಯ ಸೀಟು ಪಡೆದ ‘ವಿಮೋಚನಾ’ ಕಥೆ..
ಉಳ್ಳವರಿಗಷ್ಟೇ ಉನ್ನತ ಶಿಕ್ಷಣ ಎನ್ನುವ ಮಂತ್ರವನ್ನು ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಜಪಿಸುತ್ತಿರುವ ಹೊತ್ತಿನಲ್ಲಿ ಹಿಂದುಳಿದ ವರ್ಗದ ಬಡ ಗ್ರಾಮೀಣ ವಿದ್ಯಾರ್ಥಿಯಾಬ್ಬಳು ವೈದ್ಯಕೀಯ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡಿದ್ದಾಳೆ. ಇದು ಒಂದು ಸಮುದಾಯದ ಅರಿವಿನ ಆರಂಭದ ಹೆಜ್ಜೆಗುರುತು.

ಬೆಳಗಾವಿ : ವಿದ್ಯೆ ಸಾಧಕನ ಸೊತ್ತೇ ಹೊರತು ಸೋಮಾರಿಯ ಸೊತ್ತಲ್ಲ ! ಈ ಮಾತಿಗೆ ನಿದರ್ಶನವಾಗಿ ದೀಪಾ ಕಾಮತ್‌ ಎನ್ನುವ ಹೆಣ್ಣುಮಗಳು ನಮ್ಮ ಮುಂದೆ ನಿಂತಿದ್ದಾಳೆ.

ಹೆಸರುವಾಸಿಯಾದ ಶಿಕ್ಷಣ ಸಂಸ್ಥೆ, ಪ್ರತ್ಯೇಕ ಟ್ಯೂಶನ್‌ ವ್ಯವಸ್ಥೆ, ಕೇಳಿದ್ದನ್ನು ಕ್ಷಣದಲ್ಲಿ ಕೊಡಿಸುವುದು, ಹೀಗೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆತ್ತವರು ಪಡುವ ಕಷ್ಟ ಒಂದೆರಡಲ್ಲ . ಓದಿನ ಯಶಸ್ಸಿನಲ್ಲಿ ಮಕ್ಕಳ ಒಂದಾದರೆ, ಪೋಷಕರ ತಲೆನೋವು ಹತ್ತಾರು. ಇಂಥ ಪರಿಸರದಲ್ಲಿ ಮಕ್ಕಳು ಉತ್ತಮ ಸಾಧನೆ ತೋರಿದರೆ ಏನಾಶ್ಚರ್ಯ?

ದೀಪಾ ಕಾಮತ್‌ ಎನ್ನುವ ನಮ್ಮ ಕಥಾನಾಯಕಿಯ ಕಥೆಯೇ ಬೇರೆ. ಆಕೆ ಹೇಳಿಕೇಳಿ ಗ್ರಾಮೀಣ ಹುಡುಗಿ. ಬಡಕುಟುಂಬಕ್ಕೆ ಸೇರಿದವಳು ಬೇರೆ. ಇದರೊಂದಿಗೆ ಹಿಂದುಳಿದ ಜಾತಿಯ ಹಣೆಪಟ್ಟಿ ಬೇರೆ. ಇವೆಲ್ಲವನ್ನೂ ಮೀರಿ ದೀಪಾ ಸಿಇಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾಳೆ ; ಆಕೆಯೀಗ ವೈದ್ಯಕೀಯ ವಿದ್ಯಾರ್ಥಿನಿ.

ರಾಜ್ಯದ ಗಡಿಭಾಗದ ಮಲಬಾದ್‌ ಗ್ರಾಮದ ದೀಪಾ ಎಸ್‌ಸಿ ಕುಟುಂಬಕ್ಕೆ ಸೇರಿದವಳು. ಈಕೆಯ ತಂದೆಯ ಹೆಸರು ಗುರು. ಮನೆ ಕಟ್ಟುವ ಬಡ ಕಾರ್ಮಿಕ. ದೀಪಾಳ ಅಪ್ಪ-ಅಮ್ಮ ಇಬ್ಬರೂ ಸಹಾ ಅನಕ್ಷರಸ್ಥರು. ಆದರೆ ಅವರ ಕನಸುಗಳು ದೊಡ್ಡವು. ದೀಪಾ ಛಲ ದೊಡ್ಡದು. ಪರಿಣಾಮವಾಗಿ ಅಥಣಿಯ ವಿಮೋಚನಾ ಸಂಘ ನಡೆಸುತ್ತಿರುವ ವಿಮೋಚನಾ ವಸತಿ ಶಾಲೆಯಲ್ಲಿ ಕಲಿತ ದೀಪಾ ಈಗ ಮೆಡಿಕಲ್‌ ಕಾಲೇಜು ಮೆಟ್ಟಿಲು ಹತ್ತಿದ್ದಾಳೆ. ಎಸ್‌ಸಿ-ಎಸ್‌ಟಿ ಹಾಗೂ ದೇವದಾಸಿಯರ ಮಕ್ಕಳ ಭ್ಯುದಯಕ್ಕಾಗಿ ವಿಮೋಚನಾ ಶಾಲೆ ದುಡಿಯುತ್ತಿದೆ.

ಆಕೆ ಊರಿನ ದೀಪ !

ನಮಗಂತೂ ಓದು ಬರಹ ಗೊತ್ತಿಲ್ಲ. ಮಗಳಾದರೂ ಚೆನ್ನಾಗಿ ಕಲಿಯಲಿ ಎನ್ನುವ ಆಸೆಯಿತ್ತು . ಅದು ಈಗ ನನಸಾಗಿದೆ ಎಂದು ದೀಪಾ ಅಪ್ಪಅಮ್ಮ ಕಣ್ಣುಗಳಲ್ಲಿ ಆಸೆ ತುಂಬಿಕೊಂಡು ಹೇಳುತ್ತಾರೆ.

ಮಗಳು ಕನಿಷ್ಠ ಎಸ್‌ಎಸ್‌ಎಲ್‌ಸಿವರೆಗೆ ವಿದ್ಯಾಭ್ಯಾಸ ಮಾಡಲೆಂದು ದೀಪಾಳನ್ನು ಅವರ ತಂದೆ, ವಿಮೋಚನಾ ಶಾಲೆಗೆ ಸೇರಿಸಿದ್ದ. ಆದರೆ ಶಾಲೆಯ ಅಧ್ಯಕ್ಷ ಬಿ.ಎಲ್‌.ಪಾಟೀಲ್‌ ಈಕೆಯಲ್ಲಿ ದ್ದ ಪ್ರತಿಭೆಯನ್ನು ಹಾಗೂ ಬುದ್ದಿವಂತಿಕೆಯನ್ನು ಗುರ್ತಿಸಿದ್ದರು. ಈಕೆಯನ್ನು ಪ್ರೋತ್ಸಾಹಿಸಲು ಶಿಕ್ಷಕರಿಗೆ ಸಲಹೆ ನೀಡಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 87ರಷ್ಟು ಅಂಕಗಳು ದೀಪಾಳಿಗೆ ಬಂದಿದ್ದವು. ಅಲ್ಲದೇ ಅಥಣಿ ಪರೀಕ್ಷಾಕೇಂದ್ರದಲ್ಲಿ ಅತಿಹೆಚ್ಚಿನ ಅಂಕಗಳಿಸಿದ ಕೀರ್ತಿ ಈಕೆಗೆ ದಕ್ಕಿತ್ತು. ನಂತರ ಧಾರವಾಡದ ಕರ್ನಾಟಕ ಕಾಲೇಜಿಗೆ ಸೇರಿದ ದೀಪಾ, ಪಿ.ಯು.ಸಿಯಲ್ಲಿ ಶೇ 82 ರಷ್ಟು ಅಂಕ ಪಡೆದು ಸಾಧನೆಯ ಮೆಟ್ಟಲುಗಳ ಮೇಲೆ ನಿಂತಿದ್ದಳು. ಎಲ್ಲಕ್ಕೂ ಕೊರತೆ-ಬಡತನವಿದ್ದರೂ ಸಹಾ ಈಕೆಯ ಆತ್ಮವಿಶ್ವಾಸ ಹಾಗೂ ಮಹತ್ವಾಕಾಂಕ್ಷೆಗೆ ಬಡತನವಿರಲಿಲ್ಲ. ಹೀಗಾಗಿಯೇ ದೀಪಾ ಗುರಿಮುಟ್ಟುವ ಹಾದಿ ಹತ್ತಿರವಾಗುತ್ತಿತ್ತು.

ಪಿಯೂಸಿ ನಂತರ ದೀಪಾ ಬರೆದಿದ್ದ ಸಿಇಟಿ ಫಲಿತಾಂಶಕ್ಕೆ ಹಿಡೀ ಮಲಬಾದ್‌ ಹಳ್ಳಿಯೇ ಕಾತರಿಸಿತ್ತು. ಕನಸು ನನಸಾಗಿತ್ತು. ಧಾರವಾಡದ ಎಸ್‌ಡಿಎಂ ಕಾಲೇಜಿನಲ್ಲಿ ಈಕೆಗೆ ವೈದ್ಯಕೀಯ ವ್ಯಾಸಂಗ(ಎಂಬಿಬಿಎಸ್‌)ಕ್ಕೆ ಪ್ರವೇಶ ದೊರೆತಿದೆ.

ವಿಮೋಚನೆ : ಮನುಷ್ಯನ ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತದೆ ಎಂದು ತನಗೆ ವೈದ್ಯಕೀಯ ಸೀಟು ದೊರೆತ ಬಗೆಗೆ ದೀಪಾ ಪ್ರತಿಕ್ರಿಯಿಸುತ್ತಾಳೆ. ವಿಮೋಚನಾ ವಿದ್ಯಾಲಯಕ್ಕೆ ಧನ್ಯವಾದ ಅರ್ಪಿಸಲು ಆಕೆ ಮರೆಯುವುದಿಲ್ಲ .

ಒಂದು ವೇಳೆ ಅಥಣಿಯಲ್ಲಿ ವಿಮೋಚನಾ ಇಲ್ಲದಿದ್ದರೆ, ಎಲ್ಲಾ ಬಡ ಹುಡುಗಿಯರಂತೆ ನನ್ನ ಬದುಕು ಕೂಡ ಕತ್ತಲನ್ನು ಸೇರುತ್ತಿತ್ತು ಎನ್ನುವ ದೀಪಾ- ಶಿಕ್ಷಣ ಪೂರ್ಣವಾದ ನಂತರ ಅತಿ ಹಿಂದುಳಿದ, ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದ ತನ್ನ ಹಳ್ಳಿಗೆ ಬಂದು ಜನರಿಗೆ ವೈದ್ಯಕೀಯ ಸೇವೆ ಕೈಗೊಳ್ಳಲು ನಿರ್ಧರಿಸಿದ್ದಾಳೆ. ಅದು ನನ್ನ ಕರ್ತವ್ಯ ಎನ್ನುತ್ತಾಳಾಕೆ.

ಮಲಬಾದ್‌ ಗ್ರಾಮದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಸಾಮಾಜಿಕ ಪರಿವರ್ತನೆಗೆ ವಿಮೋಚನಾ ಸಂಘಟನೆ ಮುಂದಾಗಿದೆ. 1991ರಲ್ಲಿ ದೇವದಾಸಿಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ವಿಮೋಚನಾ ಮಲಬಾದ್‌ನಲ್ಲಿ ಶಾಲೆ ಆರಂಭಿಸಿತು. ದೀಪಾಳ ಸಾಧನೆ ನಮ್ಮ ಪ್ರಯತ್ನಕ್ಕೆ ಹುರುಪು ನೀಡಿದಂತಾಗಿದೆ ಎಂದು ವಿಮೋಚನಾದ ಉಪಾಧ್ಯಕ್ಷ ಬಿ.ಎಲ್‌.ಪಾಟೀಲ್‌ ಖುಷಿಯಿಂದ ಹೇಳುತ್ತಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X