ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧನಂಜಯನೆಂಬ ಬಡ ಭಾಗ್ಯಹೀನನೂ.. ನಮ್ಮ ಪ್ರಜಾಪ್ರಭುತ್ವವೂ....

By Super
|
Google Oneindia Kannada News

ಧನಂಜಯನೆಂಬ ಬಡ ಭಾಗ್ಯಹೀನನೂ.. ನಮ್ಮ ಪ್ರಜಾಪ್ರಭುತ್ವವೂ....ಅತ್ಯಾಚಾರ ಪ್ರಕರಣದಲ್ಲಿ ಬಡಪಾಯಿ ಧನಂಜಯ ಚಟರ್ಜಿಯನ್ನು ಗಲ್ಲಿಗೇರಿಸಲಾಯಿತು. ಆದರೆ ನಮ್ಮ ರಾಜಕೀಯದಲ್ಲಿ ಭ್ರಷ್ಟರದೇ ಮೇಲುಗೈ. ಸಂಪುಟದಲ್ಲಿ ಅಧಿಕಾರದ ಅಮಲೇರಿರುವ ಪುಢಾರಿಗಳೇನು ಕಡಿಮೆ ಅಪರಾಧಿಗಳೇ? ಅಂಥವರಿಗೇಕೆ ಕಾನೂನು ಕಠಿಣವಾಗಿಲ್ಲ ?

ಕಳೆದ ಶನಿವಾರ ಆಗಸ್ಟ್‌ 14 ರಂದು ಕಲಕತ್ತೆಯಲ್ಲಿ ಧನಂಜಯ್‌ ಚಟರ್ಜಿ ಎಂಬ ನತದೃಷ್ಟನನ್ನು ಬೆಳಗಿನ ಜಾವ 4.30ಕ್ಕೆ ಗಲ್ಲಿಗೇರಿಸಲಾಯಿತು. ಅಂದೇ ಆ ಅಭಾಗ್ಯನ ಹುಟ್ಟಿದ ಹಬ್ಬವೂ ಇತ್ತು. ಸಾವಿನ ದಿನ ಮೊದಲೇ ನಿಶ್ಚಯವಾಗಿತ್ತು.

ಮಾಡಿದ ಅಪರಾಧ : 14 ವರ್ಷಗಳ ಹಿಂದೆ ( ಮಾರ್ಚ್‌ 5 , 1990) ಭೋವಾನಿಪೊರದಲ್ಲಿ ಹೇತಲ್‌ ಪಾರೀಖ ಎಂಬ 14 ವರ್ಷದ ಬಾಲಿಕೆಯನ್ನು ಬಲಾತ್ಕರಿಸಿ, ಕೊಲೆಗೈದದ್ದು. ಆತನ ವೃತ್ತಿ ; ಸೆಕ್ಯೂರಿಟಿ ಗಾರ್ಡ್‌.

ಇಲ್ಲಿ ಅಪರಾಧಿ ನಿಜವಾಗಲೂ ಅಪರಾಧ ಮಾಡಿದ್ದಾನೋ ಇಲ್ಲವೊ ಅದು ಮುಖ್ಯವಿಲ್ಲ . ಅವನಿಗೆ ಗಲ್ಲು ಶಿಕ್ಷೆ ವಿಧಿಸುವ ಮೊದಲಿಂದ ಶುರುವಾಗಿ, ಶಿಕ್ಷೆ ನಿಖರವಾಗಿ ವಿಧಿಸಿದಂದಿನಿಂದಲೂ ನಾನಾ ಪತ್ರಿಕೆಗಳು, ಮೀಡಿಯಾ ಬಣ್ಣ ಬಳಿದು, ನಾನಾ ಬಣ್ಣಗಳಿಂದ ಪ್ರತಿಯಾಂದು ಸುದ್ದಿಯನ್ನು ಮಸಾಲೆ ಹಾಕಿ ಒಗ್ಗರಿಸಿ ಒಂದು ಕುತೂಹಲಕಾರಿ ಪತ್ತೆದಾರಿ ಕಾದಂಬರಿಯನ್ನು ಕಂತು ಕಂತಾಗಿ ಓದಲು ಪ್ರಕಟಿಸಿದವಲ್ಲ - ಧನಂಜಯನ ಕೊರಳಿಗೆ ಹಗ್ಗ ಬಿಗಿದು ನೇಣುಗಂಬವೇರಿ ಸಾವನಪ್ಪಿದ ಮೇಲೆ ಅವುಗಳೆಲ್ಲ ತಣ್ಣಗಾಗಿವೆ. ಒಂದೇ ಒಂದು ಚಿಕ್ಕ ಸುದ್ದಿಯೂ ಇಲ್ಲ.

ಮಗನ ಉಳಿಸಿಕೊಳ್ಳಲು ತಾಯಿ ತಂದೆ, ಪತಿಗಾಗಿ ಧನಂಜಯ್‌ನ ಪತ್ನಿ ಪೂರ್ಣಿಮಾ ಉಪವಾಸ ಸತ್ಯಾಗ್ರಹಗೈದದ್ದೂ, ಮಗ ಹೋದರೆ ತಾವೂ ಆತ್ಮಸಮರ್ಪಣೆಮಾಡುತ್ತೇವೆ ಎನ್ನುತ್ತಿದ್ದ ಆ ಅಭಾಗ್ಯ ಮಾತಾಪಿತರು ಇದ್ದಾರೊ ಇಲ್ಲ ಸತ್ತೇ ಹೋದರೋ? ಅವನ ಕುಟುಂಬವೇನಾುತು? ಈ ಬಗ್ಗೆ ಯಾಕೆ ಯಾರೂ ಬರೆಯುತ್ತಿಲ್ಲ ? ಅವನ ಹಳ್ಳಿಯಲ್ಲಿ ಸಾವಿನಷ್ಟೇ ಭೀಕರ ಮೌನ ಆವರಿಸಿದೆ. ಧನಂಜಯನನ್ನು ಉಳಿಸಿಕೊಳ್ಳಲು ಆ ಕುಟುಂಬ ತಮಗೆ ಇದ್ದಬದ್ದ ಜಮೀನು, ಆಸ್ತಿಯೆಲ್ಲಾ ಮಾರಿ ಬರಿಗೈಯಾಗಿತ್ತು. ಆ ಬಡ ಕುಟುಂಬಕ್ಕೆ 14 ವರ್ಷದ ಹಿಂದೆಯೆ ಮನೆಗೆ ಅನ್ನಹಾಕುವ ಒಂದು ಆಸರೆ, ಅಲೀಪುರದ ಜೇಲಿನ ಕತ್ತಲು ಕೋಣೆಗೆ ಸೇರಿಯಾಗಿತ್ತು. ಆಗ ಊರಿನ ಜನವೆಲ್ಲಾ ಆ ಕುಟುಂಬಕ್ಕೆ ಬೆನ್ನಿಗೆ ಆಸರೆಯಾಗಿ ನಿಂತದ್ದಷ್ಟೇ ಹೊರತು- ಯಾವ ಪತ್ರಿಕೆಗಳು, ನಮ್ಮ ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವವೆಂದು ಡಿಂಡಿಮ ಬಾರಿಸುವ ದೇಶದ ಯಾವ ಪ್ರಭುಗಳೂ ಬಡ ಕುಟುಂಬದ ವ್ಯಥೆ ಕೇಳಲಿಲ್ಲ. ಕಿವಿಯಿದ್ದರಲ್ಲವೆ ಕೇಳುವದು?

ನಾವು ಸ್ವತಂತ್ರ ದೇಶದ ಅತಂತ್ರ ಪ್ರಜೆಗಳು. ಕುರಿಗಳಂತೆ ಓಟುಹಾಕಿ ಸಮರ್ಥರಲ್ಲದ ಸ್ವಾರ್ಥಿಗಳಿಗೆ ಕುರ್ಚಿ ಹಾಕಿ ಕೂಡಿಸುತ್ತೇವೆ. ಆಮೇಲೆ ಅವರು ಮಾಡುವದು ತಮ್ಮ ಹಿತ, ತಮ್ಮ ಕುಟುಂಬದ ಹಿತವನ್ನೇ. ದೇಶ- ದೇಶಸೇವೆ, ದೇಶಸೇವೆಯೇ ಜನಾರ್ಧನ ಸೇವೆಯೆಂದು ಬಡಬಡಿಸುವದು, ಮಂತ್ರ ಪಠಿಸುವದು ಚುನಾವಣೆಯ ಕಾಲದಲ್ಲಿ ಮಾತ್ರ. ನಂತರ ನಾವ್ಯಾರೋ ಅವರ್ಯಾರೋ, ಸಂಬಂಧವೇ ಇರುವದಿಲ್ಲ. ನಮ್ಮ ದೇಶದ ಕಾನೂನುದೇವಿಯಂತೂ ಮೊದಲೇ ಕಣ್ಣಿಗೆ ಬಟ್ಟೆಕಟ್ಟಿಕೊಂಡಿದ್ದಾಳೆ, ಕಿವುಡಿಯೂ ಆಗಿದ್ದಾಳೆ. ಇನ್ನು ಕೇಳಬೇಕೆ ಈ ದೇಶದ ಕಥೆ?

ನಮ್ಮ ರಾಜಕೀಯದಲ್ಲೂ ಭ್ರಷ್ಟರದೇ ಮೇಲುಗೈ. ಸಂಪುಟದಲ್ಲಿ ಅಧಿಕಾರದ ಅಮಲೇರಿರುವ ಪುಢಾರಿಗಳೇನು ಕಡಿಮೆ ಅಪರಾಧಿಗಳೇ? ಅವರು ಮಾಡಿದ್ದೆಲ್ಲಾ ಹೊಲಸು. ಆ ಹೊಲಸಿನ ರಾಡಿಯನ್ನೆಲ್ಲ ಹೆಂಡದಿಂದ ತೊಳೆದು ಮತ್ತೆ ನಾಚಿಕೆಯಿಲ್ಲದೇ ಎದೆಯುಬ್ಬಿಸಿ, ತಲೆಯೆತ್ತಿ ನಡೆಯುವವರಿಗೆ ಯಾವ ನಿಯತ್ತಿದೆ? ಮರ್ಯಾದೆಯಿದೆ? ಪ್ರಾಮಾಣಿಕತೆಯಂತೂ ಸತ್ತುಹೋಗಿದೆ. ಅಂಥವರಿಗೇಕೆ ಕಾನೂನು ಕಠಿಣವಾಗಿಲ್ಲ ? ಶಿಫಾರಸ್ಸು, ವಶೀಲಿ, ಧೋಕಾಧಡಿ, ಜನತೆಗೆ ಕಣ್ಣೊರೆಸುವ ನಾಟಕ ಅಷ್ಟೇ.

ಈ ಮಾತು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿದ್ದ ಅಮರಮಣೀ ತ್ರಿಪಾಠಿಯ ಕುರಿತು ಹೇಳುತ್ತಿದ್ದೇನೆ. ಮಧುಮಿತಾ ಶುಕ್ಲಾಳ ಜತೆ ಚಕ್ಕಂದವಾಡಿ , ಅವಳು ಬಸುರಿಯೆಂದು ತಿಳಿದು, ಕೊಲೆಮಾಡಿಸಿದ ಸುದ್ದಿ, ನಾವೆಲ್ಲಾ ಓದಿದೆವು. ಕೊಲೆಮಾಡಿಸಿದ್ದು ಅಮರ್‌ ಮಣಿಯೋ ಇಲ್ಲಾ ಅವನ ಪತ್ನಿ ಮಧುಮಣಿಯೋ? ಅವರಿಗೇ ಗೊತ್ತು. ಯಾರೇ ಆಗಲಿ, ಆ ಪ್ರಕರಣವೇಕೆ ಘೋರ ಅಪರಾಧವಾಗಲಿಲ್ಲ ? ಅವರು ಆಜೀವನ ಶಿಕ್ಷೆಗೆ ತಕ್ಕವರಲ್ಲವೇ? ಅಂಥವರನ್ನು ಶಿಕ್ಷಿಸಲು ಯಾವ ಕಾನೂನು ನಮ್ಮ ಸಂವಿಧಾನದ ಸಂಪುಟಗಳಲ್ಲಿ ಇಲ್ಲವೆ ಇಲ್ಲವೋ?

ಇನ್ನೊಂದು ಉದಾಹರಣೆ. ಸುಮಾರು 2003 ರಲ್ಲಿ ದೆಹಲಿಯ ಕನಾಟಪ್ಲೇಸ್‌ನ ಒಂದು ರೆಸ್ಟುರಾಂಟ್‌ನಲ್ಲಿ ಹಾಡಾಹಗಲು ದೆಹಲಿಯ ಯುವ ಕಾಂಗ್ರೆಸ್‌ ಲೀಡರ್‌, ಸುಶೀಲ ಶರ್ಮಾತನ್ನ ಪತ್ನಿ ನೈನಾ ಸಾಹನಿಯನ್ನು ಗುಂಡಿಕ್ಕಿ ಕೊಂದದ್ದಲ್ಲದೇ ಅವಳನ್ನು ಆ ರೇಸ್ಟುರಾಂಟಿನ ತಂದೂರಿ ಒಲೆಯಲ್ಲಿ ಹಾಕಿ ಅವಳ ದೇಹವನ್ನೂ ಸುಟ್ಟೆಬಿಟ್ಟ ಧೀರ. ಯಾರಿಗೂ ಆ ಕೇಸಿನ ನೆನಪೂ ಇರಲಿಕ್ಕಿಲ್ಲ. ಈಗ ಅದೇ ಸುಶೀಲ ಶರ್ಮಾ ತುಂಬಾ ಮರ್ಯಾದಸ್ಥನಂತೆ ಎದೆಸೆಟೆಸಿ ನಡೆಯುತ್ತಾನೆ. ಆಗೆಲ್ಲಾ ಬಿಸಿಬಿಸಿಯಾಗಿದ್ದ ಸುದ್ದಿಗೆ- ಸುಪ್ರೀಂ ಕೋರ್ಟ್‌ ಎದುರು ಮಹಿಳಾ ಸಂಘಟನೆಗಳು, ಬಿ.ಜೆ.ಪಿ. ಚೀಫ್‌ ಮದನಲಾಲ್‌ ಖುರಾನಾ ಎಲ್ಲರೂ ಇದನ್ನು ಖಂಡಿಸಿ, ಪ್ರತಿಭಟನಾ ಮೋರ್ಚಾ ನಡೆಸಿದರು. ಕಾಂಗ್ರೆಸ್ಸನ್ನು 'ತಂದೂರಿ ಕಾಂಗ್ರೆಸ್‌' ಅಂತಾ ಪುನಃ ಹೆಸರಿಡಬೇಕೂ... ಹಾಗೆ ಹೀಗೆ ಅಂತೆಲ್ಲ ಜರೆದವರು, ಅಂದವರೂ ಈಗ ಎಲ್ಲ ತಣ್ಣಗಾಗಿ ಅದೇ ಸುಶೀಲ ಶರ್ಮಾ ಜತೆ ಬಿಯರ್‌ ಕುಡಿಯುತ್ತಿರಕಬಹುದು.

ಒಂದಂತೂ ನಿಜ. ಅಧಿಕಾರ, ಹಣ, ದರ್ಪ, ವಶೀಲಿಯಿದ್ದರೆ ಮಾಡಿದ ಪಾಪಗಳೆಲ್ಲವನ್ನೂ ತೊಳೆಯಬಹುದು. 1999ರಲ್ಲಿ ದೆಹಲಿಯ ಜರ್ನಲಿಸ್ಟ್‌ ಶಿವಾನಿ ಭಟ್ನಾಗರ್‌ ಕೊಲೆ ಒಬ್ಬ ಐ.ಪಿ.ಎಸ್‌. ಅಧಿಕಾರಿಯಿಂದ ನಡೆಯಿತು. ಅದು ಏನೋ ಒಂದು ಪ್ರೇಮಗಾಥೆ. ಕಥೆ ಹಾಳಾಗಲಿ, ಅದಕ್ಕೂ ಇನ್ನೂ ಮೋಕ್ಷಸಿಗದೇ ಹಾಗೇ ಮುಂದೂಡುತ್ತ, ಕುಂಟುತ್ತ ಸಾಗಿದೆ ಕೇಸು. ಎಲ್ಲ ಗೊತ್ತಿದ್ದೂ ಅಪರಾಧಿಗೆ ಶಿಕ್ಷಿಸಲು ಯಾಕೆ ಆಗುತ್ತಿಲ್ಲ? ಅವನೊಬ್ಬ ಅಧಿಕಾರಿಯೆಂದೇ, ಅವನೊಬ್ಬ ಪ್ರತಿಷ್ಟಿತನೆಂದೇ? ಹಣವಂತನೆಂದೇ? ರಾಜಕೀಯ ಪುಢಾರಿಗಳ ಅಭಯ ಹಸ್ತವಿದ್ದುದಕ್ಕೆಯೆ? ಇಂಥವು ಹುಡುಕಿದರೆ ಹೇರಳವಾಗಿ ಸಿಗುತ್ತವೆ. ಅದಕ್ಕೆ ಒತ್ತಾಸೆಯಾಗಿ ಈ ಮೀಡಿಯಾ ಇದೆ, ಪತ್ರಿಕೆಗಳಿವೆ. ರಾಜಕೀಯ ಅಧಿಕಾರದ ಆಶ್ರಯವಿದೆ. ಇನ್ನು ಪತ್ರಿಕೆಗಳ ವಿಷಯ- ಅವುಗಳ ಮೂಲಮಂತ್ರ ಪತ್ರಿಕೆಗಳ ಮಾರಾಟ, ಬಿಕರಿ. ಪತ್ರಿಕೆಗಳು ಮಾರಾಟವಾಗಬೇಕು, ಇದೂ ಒಂದು ಬಿಸಿನೆಸ್ಸ್‌ ನೀತಿ. ಪತ್ರಿಕೆ ಜನಪ್ರಿಯವಾಗಲು ಇಂಥ ಸುದ್ದಿಗಳು ಬೇಕು. ವ್ಯಾಪಾರದ ಪೈಪೋಟಿಯಲ್ಲಿ ಯಾರು ಹೆಚ್ಚು ಯಾರು ಕಡಿಮೆ ? ಸುದ್ದಿ ಬಂತು, ಸುದ್ದಿ ಹೋಯಿತು. ನಂತರದ ತಲೆಬಿಸಿ ಅವರಿಗಿಲ್ಲ. ಸ್ವಲ್ಪ ಸಂವೇದನೆಯುಳ್ಳ ಓದುಗರಾದರೆ ಪ್ರಶ್ನೆಗಳು ಮನಸ್ಸನ್ನು ಮುಕ್ಕುತ್ತವೆ. ಪಾಪ ಧನಂಜಯನ ಕುಟುಂಬಕ್ಕೆ ಏನಾಯಿತು? ಅವನ ತಂದೆತಾಯಿಗಳು ಆತ್ಮಹತ್ಯೆಗೈದರಾ? ಯಾಕೆ ಮಧುಮಿತಾಳನ್ನು ಕೊಲ್ಲಿಸಿದ ಅಮರ್‌ಮಣಿಗೆ / ಅಥವಾ ಅವನ ಹೆಂಡತಿಗೆ ಗಲ್ಲು ಶಿಕ್ಷೆಯೋ , ಆಜೀವನ ಕಾರಾಗೃಹವೋ ಆಗಲಿಲ್ಲ ?ಯಾಕೆ ಸುಶೀಲ ಶರ್ಮಾ ರಾಜಾರೋಷವಾಗಿ ಓಡಾಡಿಕೊಂಡಿದ್ದಾನೆ? ಹೀಗೆ ಪ್ರಶ್ನೆಗಳು ಉತ್ತರಕ್ಕಾಗಿ ತಡಕಾಡುತ್ತವೆ.

ಇನ್ನೂ ಬೇಕಾದಷ್ಟು ಅಧರ್ಮಿಗಳು, ನೀಚರೂ ಇರಬಹುದು ಬೇರೆ ಬೇರೆಡೆ. ಅವರಿಗೇಕೆ ಕಾನೂನು ಕಣ್ಣುಮುಚ್ಚಿಕೊಂಡಿದೆ. ನ್ಯಾಯವೂ ಮಾರಾಟದ ವಸ್ತುವಾಗಿ ಹೋಗಿದೆ. ದುಡ್ಡಿದ್ದವರು ನ್ಯಾಯವನ್ನೂ ಖರೀದಿಸುತ್ತಾರೆ, ಇಲ್ಲದವರು ಹೆಣಗಿ ಹೆಣಗಿ, ಕೊನೆಗೆ ಧನಂಜಯನಂತೆ ನಿಸ್ಸಹಾಯಕರಾಗಿ ನೇಣುಗಂಬಕ್ಕೆ ತಲೆನೀಡುತ್ತಾರೆ. ಈ ದೇಶದ ಗತಿ ಇಷ್ಟೆಯೆ !! ಬಡವನಿಗೆ ಕೊಡಲು, ಮಾಡಲು ಬೇಕಾದಷ್ಟು ಕಾನೂನುಗಳಿವೆ, ಆದ್ರೆ ಅದೇ ಒಬ್ಬ ಅಧಿಕಾರವುಳ್ಳ ರಾಜಕೀಯ ಪುಢಾರಿ ಇದೇ ಕೆಲಸವನ್ನು ಮಾಡಿದ್ದರೆ, ಅವನು ಜನತೆಗೆ ಗೊತ್ತೇ ಆಗದಂತೆ ಕಾನೂನನ್ನೇ ಸಡಿಲಮಾಡಿ ಪರಾರಿಯಾಗುತ್ತಿದ್ದ. ಅಕ್ಕಿ ಹಗರಣ, ಮೇವಿನ ಹಗರಣ, ನೂರಾರು ಘೂಟಾಳೆಗಳ ರಿಂಗಣದಲ್ಲಿನ ಪುಢಾರಿಗಳು, ಗೋಮುಖವ್ಯಾಘ್ರರಂಥಾ ಮಹಾ ಕ್ರಿಮಿನಲ್‌ಗಳು ದೇಶವನ್ನಾಳಲು ತೊಡಗಿದರೆ ನಾಳೆ ರಕ್ಷಕರಿಲ್ಲದೇ ಈ ನರಭಕ್ಷಕರೂ ಯಾವ ಬೆದರಿಕೆಯಿಲ್ಲದೇ ಓಡಾಡತೊಡಗುತ್ತಾರೆ. ಇಲ್ಲಿ ನ್ಯಾಯದೇವತೆಯನ್ನು ದೀಪಹಿಡಿದು ಹುಡುಕುವ ಕಾಲಬಂದಿದೆ.

ಧನಂಜಯನನ್ನು ಗಲ್ಲಿಗೇರಿಸಿದ ನಾಟಾ ಮಲ್ಲಿಕ್‌ನೂ ತನ್ನ 24 ವರ್ಷದ ಕಸುಬಿನಲ್ಲಿ ಕಣ್ಣೀರುಗರೆದಿದ್ದಾನೆ. ಕೈ-ಕಾಲುಗಳನ್ನು ಕಟ್ಟಿಸಿಕೊಂಡ ಧನಂಜಯನ ಬಾಯಲ್ಲಿ ಕೊನೆಮಾತು- ನಾನು ನಿರಪರಾಧಿ, ದೇವರು ನಿಮ್ಮನ್ನು ರಕ್ಷಿಸಲಿ ಎಂದದ್ದನ್ನು ಕೇಳಿ ನಾಟಾನ ಹೃದಯವೂ ರೋದಿಸಿದೆ, ಆದರೆ ಅವನದೂ ಒಂದು ಕರ್ತವ್ಯಪಾಲನೆ. ಮಾಡದೇ ವಿಧಿಯಿರದ ಸ್ಥಿತಿ. ಸುದ್ದಿ ಓದಿದ ಓದುಗರ ಹೃದಯವೂ ನೊಂದಿರಬಹುದು. 14 ವರ್ಷದ ಆಜೀವನ ಜೈಲುವಾಸದಲ್ಲಿ ಕಳೆದ ಧನ್‌ಂಜಯನಿಗೆ ಉಳಿದಿತ್ತಾದರೂ ಏನು ? ಕೇವಲ ನ್ಯಾಯ ದೊರಕಲು 14 ವರ್ಷಗಳ ಅವಧಿ ಅತೀ ದೀರ್ಘವಲ್ಲವೇ? ನಮ್ಮ ಸ್ವತಂತ್ರ ಭಾರತದಲ್ಲಿ ಇನ್ನು ಮುಂದೆ ಇಂಥ ಅನ್ಯಾಯವಾಗದಿರಲಿ. ಆ ಬಡ ಕುಟುಂಬ ಮಾಡಿದ ಅಪೀಲುಗಳನ್ನು ರಾಷ್ಟ್ರಪತಿಯವರಾದರೂ ಕೇಳಿದ್ದರೆ, ಅವನಿಗೆ ಜೈಲಿನಲ್ಲೇ ಇದ್ದುಸಾಯಲು ಬಿಡಬಹುದಿತ್ತು. ಜೈಲಿನ ಕಂಬಿಗಳ ಹೊರಗಿನ ಕ್ರೂರ ಬದುಕು ಅವನ ಕುಟುಂಬ ಈ 14 ವರ್ಷಗಳನುಭವಿಸಿದ್ದು, ಸಹಿಸಿದ್ದು ಕಡಿಮೆಯೇ? ಕೊನೆಗೆ ಏನು ದಕ್ಕಿತು ಆ ಬಡ ಕುಟುಂಬಕ್ಕೆ? ಇದ್ದ ಆಸ್ತಿ, ಹಣ ಎಲ್ಲ ಪಣಕ್ಕಿಟ್ಟರೂ, ಎಲ್ಲ ಹೋಯಿತು, ಪ್ರಾಣವೂ ಹೋಯಿತು.

ಈಗ ಇರಾಕಿನಲ್ಲಿನ ಬಂಧಿತ ಭಾರತೀಯರ ಗತಿಯೆನಾಗಿದೆ ? 50 ಕೋಟಿ ಕೊಟ್ಟು ಅವರ ಜೀವ ಉಳಿಸುವ ಶಕ್ತಿ ಇದೆಯೇ ನಮ್ಮ ದೇಶಕ್ಕೆ? ಗುಜರಾತಿನ ಗೋಧ್ರಾ ಕಾಂಡದಲ್ಲಿ ಜೀವ ತೆತ್ತವರಿಗೆ ಲೆಕ್ಕವಿದೆಯೇ? ಈ ಹೇಯ ಕೃತ್ಯವೆಸಗಿದವರಿಗೆ ನ್ಯಾಯವಾಗಿ ಶಿಕ್ಷೆಯಾಗಲೇಬೇಕು, ಇನ್ನೂ ಯಾಕೆ ತಡವಾಗುತ್ತಿದೆ? ಭವ್ಯಭಾರತದ ಒಬ್ಬ ಬಡ ಪ್ರಜೆಗೆ ಈ ರೀತಿ ಶಿಕ್ಷೆಯೇ? ದೆಹಲಿಯಲ್ಲಿ ವಾರ್ತೆ ಅಂಕೆಸಂಖ್ಯೆಗಳ ಪ್ರಕಾರ ಈ ವರ್ಷ ಒಟ್ಟು 237 ಬಲಾತ್ಕಾರದ ಅಪರಾಧಗಳಾಗಿವೆ. ಮುಂಬೈ ಹಾಗೂ ಇತರ ಮಹಾನಗರಗಳಿಗೆ ಹೋಲಿಸಿದರೆ ಹೆಚ್ಚೆನಿಸುತ್ತದೆ. ದೆಹಲಿ ಹೆಣ್ಣುಮಕ್ಕಳಿಗೆ ಸುರಕ್ಷಿತವಲ್ಲ ಎಂಬ ಕೂಗು ಕೇಳುತ್ತದೆ. ಕೊಲೆ, ಸುಲಿಗೆಗಳು ಸಾಮಾನ್ಯ. ಈಗ 2-3 ದಿನದಿಂದ ಇನ್ನೊಂದು ಹೊಸ ಕೊಲೆಯ ಕಥೆಗೆ ಬಣ್ಣ ಬಳಿಯುತ್ತಿದೆ ಪತ್ರಿಕೆ. ಪುಶ್ಕಿನ ಚಂದ್ರಾ ಎಂಬ ಪಾಶ್‌ ಕಾಲೋನಿಯ ನಿವಾಸಿ. ಅವನೊಬ್ಬ ಸಲಿಂಗಕಾಮಿ. ಮಹಾನಗರದಲ್ಲೀಗ ಎಲ್ಲ ಸಲಿಂಗಕಾಮಿಗಳ ಸಮಾಜವನ್ನೂ ಸೇರಿಸಿ ರಂಗು ರಂಗಿನ ಕಥೆ ಬರುತ್ತಿವೆ. ಸತ್ತವರು ಕಥೆಯಾಗುತ್ತಾರೆ. ಧನಂಜಯನಿಗೆ ವಿದಾಯ ಹೇಳಿದ ಪತ್ರಿಕೆಗಳಿಗೀಗ ಪುಶ್ಕಿನ ಚಂದ್ರಾ ಸುದ್ದಿಯಾಗುತ್ತಿದ್ದಾನೆ. ಅಪರಾಧಿಗಳು ಮಾತ್ರ ಯಾವುದೋ ಅಧಿಕಾರಿಗಳ, ಹೆಸರಾಂತ ವ್ಯಕ್ತಿಗಳ, ಪುಢಾರಿಗಳ ನಾಮವನ್ನು ಪಠಿಸಿ ಮುಕ್ತರಾಗುತ್ತಾರೆ. ಇಲ್ಲ ದೆಹಲಿ ಪೋಲಿಸರಿಗೆ ಕೆಲಕಾಲ ನಾಮಹಾಕುತ್ತಾರೆ. ಧಿಕ್ಕಾರವಿದೆ ಇಂಥ ಅಭದ್ರ ರಾಜನೀತಿಗೆ, ನ್ಯಾಯನೀತಿಗೆ. ವಾಕರಿಕೆ ಬರುತ್ತದೆ ನಮ್ಮ ಅಧಿಕಾರಶಾಹೀ ಆಡಳಿತಕ್ಕೆ. ಧನಂಜಯ್‌ ಚಟರ್ಜಿಯ ಗಲ್ಲುಗಂಬದ ಚಿತ್ರವನ್ನೇ ಊಹಿಸಿ ಸಂಕಟವಾಗುತ್ತದೆ.. ದೇವರು ಇನ್ನೊಮ್ಮೆ ಯಾವುದಾದರೂ ಅವತಾರ ತಾಳಿಬಂದು ದುಷ್ಟರನ್ನೆಲ್ಲಾ ದಮನ ಮಾಡುವಂತಾಗಲಿ. ಯಾವಾಗ ಬಂದೀತು ಆ ಯುಗ ?

English summary
Indian Democracy and Dhananjay Chatterjee. An article by Renuka Shyam, New Delhi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X