ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಂಬಾಡಿ ಕಲಕಲಕ್ಕೆ ದಸರೆ ವೈಭವ ಸ್ಪಂದನ

By Staff
|
Google Oneindia Kannada News

ಕನ್ನಂಬಾಡಿ ಕಲಕಲಕ್ಕೆ ದಸರೆ ವೈಭವ ಸ್ಪಂದನ
ರಾಜ್ಯದಲ್ಲಿ ಮಳೆ ಚೆನ್ನಾಗಿ ಆಗುತ್ತಿರುವುದರಿಂದ, ಒಳ್ಳೆಯ ಬೆಳೆಯ ನಿರೀಕ್ಷೆಯೂ ಇರುವುದರಿಂದ ದಸರೆಯನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ.

ಬೆಂಗಳೂರು : ನಾಡಹಬ್ಬ ಮೈಸೂರು ದಸರೆಯನ್ನು ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಧರ್ಮಸಿಂಗ್‌ ಅಧ್ಯಕ್ಷತೆಯಲ್ಲಿ ವರಲಕ್ಷ್ಮಿ ಹಬ್ಬದಂದು (ಆ.27) ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ದಸರಾ ಉತ್ಸವದ ಉನ್ನತ ಮಟ್ಟದ ಸಭೆ ಈ ನಿರ್ಣಯ ಕೈಗೊಂಡಿದೆ.

ರಾಜ್ಯಾದ್ಯಂತ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಹಾಗೂ ವಿಶೇಷವಾಗಿ ಕನ್ನಂಬಾಡಿ ಹಾಗೂ ಕಬಿನಿ ಜಲಾಶಯಗಳು ತುಂಬಿರುವ ಹಿನ್ನೆಲೆಯಲ್ಲಿ ದಸರೆಯನ್ನು ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಉನ್ನತ ಮಟ್ಟದ ಸಭೆ ತೀರ್ಮಾನಿಸಿತು. ಮುಖ್ಯಮಂತ್ರಿ ಧರ್ಮಸಿಂಗ್‌, ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ ಮೈಸೂರು ದಸರಾ ಎಷ್ಟೊಂದು ಸುಂದರಾ’ ಎನ್ನುವ ಜನಪ್ರಿಯ ಸಿನಿಮಾ ಹಾಡುಹೇಳುವಂತೆ ಮೈಸೂರು ದಸರಾ ಮೆರವಣಿಗೆ ವಿಶ್ವವಿಖ್ಯಾತವಾದುದು. ಪಾರಂಪರಿಕವಾಗಿ ನಡೆದು ಬಂದ ಈ ದಸರಾ ಮೆರವಣಿಗೆ ಖ್ಯಾತಿ ಸೀಮೋಲ್ಲಂಘನ ಮಾಡಿದೆ. ಅದರಲ್ಲೂ ‘ಗಜರಾಜ’ ಹೊತ್ತು ತರುವ ಬೆಲೆಕಟ್ಟಲಾಗದ ಅಂಬಾರಿ ಮೆರವಣಿಗೆ ಲಕ್ಷಾಂತರ ಮಂದಿಯ ವಿಶೇಷ ಗಮನ ಸೆಳೆಯುತ್ತ ಬಂದಿದೆ. ಆದರೆ, ಈ ಬಾರಿ ದಸರೆಯಲ್ಲಿ ಆನೆಗಳ ಪಾಲ್ಗೊಳ್ಳುವಿಕೆಯ ವಿರುದ್ಧ ಸೊಲ್ಲು ಕೇಳಿಬಂದಿದೆ.

ಉತ್ಸವದಲ್ಲಿ ಆನೆಗಳಿಗೆ ಹಿಂಸೆಯಾಗುತ್ತಿದ್ದು , ಈ ಹಿನ್ನೆಲೆಯಲ್ಲಿ ದಸರೆಯಲ್ಲಿ ಆನೆಗಳು ಭಾಗವಹಿಸುವುದನ್ನು ನಿಷೇಧಿಸಬೇಕು ಎನ್ನುವ ಕೂಗು ಪ್ರಾಣಿದಯಾ ಸಂಸ್ಥೆ ಸೇರಿದಂತೆ ಅನೇಕ ವಲಯಗಳಿಂದ ಕೇಳಿಬಂದಿದೆ.

ದಸರಾ ಮೆರವಣಿಗೆಯ ಒಂದು ತಿಂಗಳ ಮುಂಚೆ ಆನೆಗಳಿಗೆ ತರಬೇತಿ ನೀಡಲಾಗುತ್ತದೆ. ಸ್ವಚ್ಛಂದವಾಗಿ ಅರಣ್ಯದಲ್ಲಿ ಓಡಾಡಿಕೊಂಡಿದ್ದ ಆನೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ , ಡಾಂಬರ್‌ ರಸ್ತೆಗಳಲ್ಲಿ ನಡೆಸಬೇಕಾಗುತ್ತದೆ. ಇದರಿಂದ ಮೃದು ಪಾದದ ಆನೆಗಳು ರಸ್ತೆಗಳಲ್ಲಿ ನಡೆಯುವಾಗ ಗಾಜಿನ ಚೂರುಗಳು, ಹಾನಿಕಾರಕ ವಸ್ತುಗಳಿಂದ ಹಾನಿಗೊಳ್ಳುತ್ತವೆ. ಆದ್ದರಿಂದ ಮೆರವಣಿಗೆಯಲ್ಲಿ ಭಾರದ ಅಂಬಾರಿ ಹೊರಿಸಿ ಆನೆಗಳನ್ನು ಹಿಂಸಿಸುವುದು, ಅವುಗಳ ಮೇಲೆ ಚಿತ್ರಬಿಡಿಸುವುದು ಮತ್ತು ಪಳಗಿಸುವ ಸಂದರ್ಭದಲ್ಲಿ ಕೈಗೊಳ್ಳಲಾಗುವ ಕಠಿಣ ಕ್ರಮವನ್ನು ನಿಷೇಧಿಸಬೇಕು ಎಂದು ಪ್ರಾಣಿಪ್ರಿಯರು ಹೇಳುತ್ತಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X