ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಂದ್‌: ಬಿಜೆಪಿ ಬೆಲ್ಟ್‌ನಲ್ಲಿ ಬೆಂಬಲ, ಉಳಿದೆಡೆಯಲ್ಲಿ ವಿಫಲ

By Staff
|
Google Oneindia Kannada News

ಕರ್ನಾಟಕ ಬಂದ್‌: ಬಿಜೆಪಿ ಬೆಲ್ಟ್‌ನಲ್ಲಿ ಬೆಂಬಲ, ಉಳಿದೆಡೆಯಲ್ಲಿ ವಿಫಲ
ಸಣ್ಣಪುಟ್ಟ ಅಹಿತಕರ ಘಟನೆಗಳ ಹೊರತುಪಡಿಸಿ ಶಾಂತಿಯುತ ಬಂದ್‌

ಬೆಂಗಳೂರು : ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರ ಮೇಲಿನ 10 ವರ್ಷಗಳಷ್ಟು ಹಳೆಯದಾದ ಕ್ರಿಮಿನಲ್‌ ಮೊಕದ್ದಮೆಯನ್ನು ವಾಪಸ್ಸು ಪಡೆಯುವಂತೆ ಒತ್ತಾಯಿಸಿ ರಾಜ್ಯ ಬಿಜೆಪಿ ಘಟಕ ಕರೆ ನೀಡಿದ್ದ ಒಂದು ದಿನದ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಜೆಪಿ ಪ್ರಭಾವ ದಟ್ಟವಾಗಿರುವ ಕರಾವಳಿ ಪ್ರದೇಶದಲ್ಲಿ ಬಂದ್‌ಗೆ ಉತ್ತಮ ಎನ್ನಬಹುದಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಬೆಂಗಳೂರು ಸೇರಿದಂತೆ ಉಳಿದೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕಲ್ಲುತೂರಾಟದಂಥ ಸಣ್ಣಪುಟ್ಟ ಘಟನೆಗಳು ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸಂಪೂರ್ಣ ಬಂದ್‌ : ಇಡೀ ಪ್ರಕರಣದ ಕೇಂದ್ರ ಸ್ಥಳವಾದ ಹುಬ್ಬಳ್ಳಿಯಲ್ಲಿ ಬಿಜೆಪಿ ಪ್ರೇರಿತ ಬಂದ್‌ಗೆ ಪೂರ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಟೇಲ್‌ಗಳು, ಅಂಗಡಿ ಮುಂಗಟ್ಟುಗಳು, ಸಿನಿಮಾ ಮಂದಿರಗಳು, ವಾಣಿಜ್ಯ ಸಂಕೀರ್ಣಗಳು ಬಾಗಿಲು ತೆಗೆಯುವ ಸಾಹಸ ಮಾಡಲಿಲ್ಲ . ಶಾಲಾ ಕಾಲೇಜುಗಳಿಗೆ ರಜೆ ಮುಂದುವರಿದಿದೆ. ಬಸ್ಸು ಸಂಚಾರ ಸ್ಥಗಿತಗೊಂಡಿತ್ತು . ಐದು ನಗರ ಸಾರಿಗೆ ಬಸ್ಸುಗಳ ಮೇಲೆ ಕಲ್ಲು ತೂರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಬಂದ್‌ ಪ್ರಯುಕ್ತ ಬಿಜೆಪಿ ಭಾರೀ ರ್ಯಾಲಿ ನಡೆಸಿತು. ಪ್ರದರ್ಶನಕಾರರನ್ನು ಉದ್ದೇಶಿಸಿ ಮಾತನಾಡಿದ ವಿಧಾನಸಭೆಯ ನಿಕಟಪೂರ್ವ ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌- ಉಮಾಭಾರತಿ ವಿರುದ್ಧದ ಮೊಕದ್ದಮೆಯನ್ನು ವಾಪಸ್ಸು ಪಡೆಯುವವರೆಗೆ ತಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದರು.

ಹುಬ್ಬಳ್ಳಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗೆ 3000 ಪೊಲೀಸ್‌ ಸಿಬ್ಬಂದಿಯಾಂದಿಗೆ ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಮೀಸಲು ಪಡೆ ಪೊಲೀಸರನ್ನು ನಿಯೋಜಿಸಲಾಗಿದೆ.

ಬೆಂಗಳೂರಿನಲ್ಲಿ ನಗರ ಸಾರಿಗೆ ಎಂದಿನಂತಿದೆ. ಶಾಲಾ ಕಾಲೇಜು, ಬ್ಯಾಂಕು ಹಾಗೂ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ನಗರದ ಕೆಲ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಗುಂಪುಗಳು ಬಲವಂತವಾಗಿ ಮುಚ್ಚಿಸಿದವು. ರಾಜಾಜಿನಗರದಲ್ಲಿ ಬಸ್ಸೊಂದರ ಮೇಲೆ ಕಲ್ಲುತೂರಾಟ ನಡೆಯಿತು.

ಗುಲ್ಬರ್ಗಾ, ಬಿಜಾಪುರ, ದಾವಣಗೆರೆ, ಶಿವಮೊಗ್ಗ , ಬಳ್ಳಾರಿ ಹಾಗೂ ಬೀದರ್‌ಗಳಲ್ಲೂ ಬಂದ್‌ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳೂರು ಹಾಗೂ ಉಡುಪಿಯಲ್ಲೂ ಬಂದ್‌ ಪರಿಣಾಮಕಾರಿಗಿದೆ.

ಮಂಗಳೂರಿನ ಕೆಲವೆಡೆ ಕಲ್ಲು ತೂರಾಟ ನಡೆದಿದೆ. ಉದ್ರಿಕ್ತರ ಗುಂಪು ಟೈರುಗಳಿಗೆ ಬೆಂಕಿ ಹಚ್ಚಿ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಎಸೆದ ಘಟನೆಗಳೂ ನಡೆದಿವೆ. ಸುರತ್ಕಲ್‌ ಸಮೀಪ ಖಾಸಗಿ ಬಸ್ಸೊಂದು ಕಲ್ಲಿನ ದಾಳಿಗೆ ತುತ್ತಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಚ್‌.ಎಸ್‌.ಲೋಕೇಶ್‌ಕುಮಾರ್‌ ತಿಳಿಸಿದ್ದಾರೆ. ಅಂಗಡಿ ಮುಂಗಟ್ಟು , ಹೊಟೇಲು ಹಾಗೂ ಬಹುತೇಕ ಶಾಲಾ ಕಾಲೇಜುಗಳು ಮುಚ್ಚಿವೆ.

ಅನಂತಕುಮಾರ್‌ ಬಂಧನ : ಬೆಂಗಳೂರಿನ ಆನಂದರಾವ್‌ ವೃತ್ತದಲ್ಲಿ ರಸ್ತೆ ತಡೆ ನಡೆಸುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಅನಂತಕುಮಾರ್‌ ಸೇರಿದಂತೆ ಬಿಜೆಪಿ 100 ಮಂದಿಯನ್ನು ಪೊಲೀಸರು ಬಂಧಿಸಿ, ಸ್ವಲ್ಪಕಾಲದ ನಂತರ ಬಿಡುಗಡೆ ಮಾಡಿದರು.

ಮೈಸೂರಿನಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿ ಜನಜೀವನ ಎಂದಿನಂತಿತ್ತು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X