ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾರಪ್ಪ-ಖರ್ಗೆ ಭೇಟಿ ; ಮುಖ್ಯಮಂತ್ರಿ ಸ್ಥಾನಕ್ಕೆ ಜೆಮಿನಿ ಸರ್ಕಸ್‌!

By Staff
|
Google Oneindia Kannada News

ಬಂಗಾರಪ್ಪ-ಖರ್ಗೆ ಭೇಟಿ ; ಮುಖ್ಯಮಂತ್ರಿ ಸ್ಥಾನಕ್ಕೆ ಜೆಮಿನಿ ಸರ್ಕಸ್‌!
ಹಿಡಿದ ಮೊಲಕ್ಕೆ ಮೂರೇ ಕಾಲು - ಹಠ ಬಿಡದ ಜೆಡಿಎಸ್‌ ಹಾಗೂ ಕಾಂಗ್ರೆಸ್‌

ಬೆಂಗಳೂರು : ರಾಜ್ಯದಲ್ಲಿ ನೂತನ ಸರ್ಕಾರ ರಚಿಸುವ ಸಂಬಂಧ ಲೆಕ್ಕಾಚಾರ-ಸರ್ಕಸ್ಸುಗಳು ಮುಂದುವರಿದಿದ್ದು, ವಿವಿಧ ಧುರೀಣರ ಬಲಾಬಲ ಪ್ರದರ್ಶನದಿಂದ ರಾಜಧಾನಿ ಬೆಂಗಳೂರು ರಂಗೇರಿದೆ.

ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌ ಹಾಗೂ ಜಾತ್ಯತೀತ ಜನತಾದಳದ ಸಿದ್ಧರಾಮಯ್ಯನವರ ಸಾವಿರಾರು ಸಂಖ್ಯೆಯ ಬೆಂಬಲಿಗರು ಮೇ 24ರ ಸೋಮವಾರ ಬೆಂಗಳೂರಿಗೆ ದಾಳಿಯಿಟ್ಟಿದ್ದರು. ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಮಾಡುವಂತೆ ಸಾವಿರಾರು ಮಂದಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಡಿ.ಕೆ.ಶಿವಕುಮಾರ್‌ ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಧರಣಿ ನಡೆಸಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನನ್ನು ಆರಿಸುವ ಉದ್ದೇಶದಿಂದ ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ವೀಕ್ಷಕರು ತಮ್ಮ ಪ್ರಯತ್ನದಲ್ಲಿ ಸಾಕಷ್ಟು ಅಡೆತಡೆ ಎದುರಿಸುತ್ತಿದ್ದಾರೆ. ಪಕ್ಷದ ಮುಖಂಡರು, ನೂತನ ಶಾಸಕರು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ವೀಕ್ಷಕರು ಪಡೆದಿದ್ದಾರೆ. ಈ ಅಭಿಪ್ರಾಯಗಳ ಪ್ರಕಾರ- ಶಾಸಕಾಂಗ ಪಕ್ಷದ ನಾಯಕನಾಗಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣರ ಹೆಸರು ಮುಂಚೂಣಿಯಲ್ಲಿದೆ. ಉಳಿದಂತೆ ಎಚ್ಕೆ.ಪಾಟೀಲ್‌, ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್‌ರ ಹೆಸರುಗಳಿವೆ.

ಖರ್ಗೆ-ಬಂಗಾರಪ್ಪ ಭೇಟಿ : ಇತ್ತೀಚೆಗಷ್ಟೇ ಬಿಜೆಪಿಗೆ ನೆಗೆದ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ನವರನ್ನು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಚರ್ಚಿಸಿದ್ದು ಸೋಮವಾರದ ಪ್ರಮುಖ ವಿದ್ಯಮಾನಗಳಲ್ಲೊಂದು. ಭೇಟಿಯ ಬಗ್ಗೆ ನಾನಾ ವದಂತಿಗಳು ಹಬ್ಬಿವೆ. ಆದರೆ, ಮಾತುಕತೆಯ ವಿವರಗಳನ್ನು ಬಹಿರಂಗಪಡಿಸಲು ಇಬ್ಬರು ಮುಖಂಡರು ನಿರಾಕರಿಸಿದ್ದಾರೆ.

ಮುಖ್ಯಮಂತ್ರಿ ಪಟ್ಟ ಕಾಂಗ್ರೆಸ್‌ಗೇ ಸಲ್ಲಬೇಕು : ಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್‌ಗೆ ಸಲ್ಲಬೇಕು ಎನ್ನುವ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಎಐಸಿಸಿ ವೀಕ್ಷಕ ವಿಲಾಸ್‌ರಾವ್‌ ದೇಶ್‌ಮುಖ್‌ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ರಚನೆಯಾಗಬೇಕು ಎನ್ನುವುದು ಪಕ್ಷದ ನಿಲುವು. ಇದು ಸಾಧ್ಯವಾಗದಿದ್ದಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿ ಕೂರಲು ಕಾಂಗ್ರೆಸ್‌ ಸಿದ್ಧ ಎಂದು ವಿಲಾಸ್‌ರಾವ್‌ ಹೇಳಿದ್ದಾರೆ.

ನಮ್ಮದು ನ್ಯಾಯಬದ್ಧ ಒತ್ತಾಯ : ಕಾಂಗ್ರೆಸ್‌ನಲ್ಲಿ ರಂಪ ರಾಮಾಯಣ ಮುಂದುವರಿಯುತ್ತಿದ್ದಂತೆ, ಜಾತ್ಯತೀತ ಜನತಾದಳದಲ್ಲೂ ಚಟುವಟಿಕೆಗಳು ಕಾವೇರಿವೆ. ಬೆಂಗಳೂರಿನ ಹೊರವಲಯದಲ್ಲಿ ಪಕ್ಷದ ಶಾಸಕಾಂಗ ಸಭೆ ನಡೆಯಿತು. ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವಂತೆ ಸಿದ್ಧರಾಮಯ್ಯನವರ ಮನವೊಲಿಸುವ ಪ್ರಯತ್ನದಲ್ಲಿ ದೇವೇಗೌಡ ವಿಫಲರಾಗಿದ್ದಾರೆ ಎನ್ನಲಾಗಿದೆ.

ಶಾಸಕಾಂಗ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ಮುಖ್ಯಮಂತ್ರಿ ಸ್ಥಾನ ಜೆಡಿಎಸ್‌ಗೆ ಸಲ್ಲಬೇಕು ಎನ್ನುವ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದರು. ಜನಾದೇಶ ಕಾಂಗ್ರೆಸ್‌ ವಿರುದ್ಧವಾಗಿದೆ. ಆದುದರಿಂದ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಬೇಕು ಎನ್ನುವ ಜೆಡಿಎಸ್‌ನ ನ್ಯಾಯಬದ್ಧ ಒತ್ತಾಯದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ದೇವೇಗೌಡ ಹೇಳಿದರು.

ಪಕ್ಷದ ನಿರ್ಧಾರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ತಲುಪಿಸಲಾಗುತ್ತದೆ. ನ್ಯಾಯಬದ್ಧ ಒತ್ತಾಯವನ್ನು ಕಾಂಗ್ರೆಸ್‌ ಒಪ್ಪಿಕೊಳ್ಳಬೇಕು ಎಂದು ದೇವೇಗೌಡ ಒತ್ತಾಯಿಸಿದರು.

ಮಹಾರಾಷ್ಟ್ರ ಅಥವಾ ಜಮ್ಮು ಮತ್ತು ಕಾಶ್ಮೀರ ಮಾದರಿಗಳು ಇಲ್ಲಿ ಸಾಧ್ಯವಿಲ್ಲ . ಕರ್ನಾಟಕದ ರಾಜಕೀಯ ಲೆಕ್ಕಾಚಾರಗಳೇ ವಿಭಿನ್ನವಾದವು ಎಂದು ದೇವೇಗೌಡ ವಿಶ್ಲೇಷಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X