ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾತನೂರಲ್ಲಿ ಜಾತ್ಯತೀತ ದಳ ಕಾರ್ಯಕರ್ತನ ಮೇಲೆ ಆ್ಯಸಿಡ್‌ ದಾಳಿ

By Staff
|
Google Oneindia Kannada News

ಸಾತನೂರಲ್ಲಿ ಜಾತ್ಯತೀತ ದಳ ಕಾರ್ಯಕರ್ತನ ಮೇಲೆ ಆ್ಯಸಿಡ್‌ ದಾಳಿ
ಆರೋಪ ಪ್ರತ್ಯಾರೋಪದಲ್ಲಿ ಮುಳುಗಿದ ದೇವೇಗೌಡ-ಶಿವಕುಮಾರ್‌

ಕನಕಪುರ : ಸಾತನೂರು ವಿಧಾನಸಭಾ ಕ್ಷೇತ್ರದ ಕೋಡಿಹಳ್ಳಿಯ ಜಾತ್ಯತೀತ ಜನತಾದಳ ಕಾರ್ಯಕರ್ತ ಮಾದೇಶ್‌ ಮೇಲೆ ಕಿಡಿಗೇಡಿಗಳ ಗುಂಪೊಂದು ಏಪ್ರಿಲ್‌ 19ರ ಮುಂಜಾನೆ ಆ್ಯಸಿಡ್‌ ದಾಳಿ ನಡೆಸಿದೆ. ಮಾದೇಶ್‌ ಅವರ ಮನೆ ಮೇಲೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿರುವುದಾಗಿಯೂ ಪೊಲೀಸ್‌ ಮೂಲಗಳು ತಿಳಿಸಿವೆ.

ಆ್ಯಸಿಡ್‌ ದಾಳಿಯಲ್ಲಿ ಮಾದೇಶ್‌ ಅವರ ಕೈ, ಭುಜ, ಬೆನ್ನು ಹಾಗೂ ಕಾಲುಗಳು ತೀವ್ರವಾಗಿ ಸುಟ್ಟಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪತ್ನಿ ಲಕ್ಷ್ಮಮ್ಮ, ತಂದೆ ಮಾದೇವಯ್ಯ ಅವರಿಗೂ ಸಣ್ನಪುಟ್ಟ ಗಾಯಗಳಾಗಿವೆ. ತಾಯಿ ಪುಟ್ಟಮ್ಮ ಹಾಗೂ ನಾಲ್ವರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ನಗರಾಭಿವೃದ್ಧಿ ಸಚಿವ ಹಾಗೂ ಸಾತನೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಶಿವಕುಮಾರ್‌ ಅವರ ಸಹೋದರ ಡಿ.ಕೆ. ಸುರೇಶ್‌, ಮತ್ತವರ ಬೆಂಬಲಿಗರು ಈ ಅಮಾನವೀಯ ಕೃತ್ಯವೆಸಗಿದ್ದಾರೆಂದು ಜಾತ್ಯತೀತ ಜನತಾದಳದ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಆರೋಪಿಸಿದ್ದಾರೆ.

ಹಿನ್ನೆಲೆ: ಚುನಾವಣೆ ಸಂಬಂಧ ಮಾದೇಶ್‌ ಹಾಗೂ ಕಾಂಗ್ರೆಸ್‌ನ ಶಿವನಂಜೇಗೌಡ ಎಂಬುವರ ಮಧ್ಯೆ ಏಪ್ರಿಲ್‌ 18ರ ಮಧ್ಯ ರಾತ್ರಿ ಮಾತಿಗೆ ಮಾತು ಬೆಳೆದು ಜಗಳವಾಗಿತ್ತು. ಹಣ ಮತ್ತು ಹೆಂಡ ವಿತರಣೆ ಮಾಡುತ್ತಿದುದನ್ನು ವಿರೋಧಿಸಿದ ಮಾದೇಶ್‌ ಮೇಲೆ ಶಿವನಂಜೇಗೌಡ ಮತ್ತು ಆತನ ಬೆಂಬಲಿಗರು ಹಲ್ಲೆ ಮಾಡಿದ್ದರು.

ಅಷ್ಟಕ್ಕೂ ಜಗಳ ಮುಗಿಸದ ದುಷ್ಕರ್ಮಿಗಳು ಮಾದೇಶ್‌ ತೋಟದ ಮನೆಯಲ್ಲಿ ಮಲಗಿದ್ದಾಗ ಮನೆಯ ಹೊರಗಿನಿಂದ ಬೀಗ ಹಾಕಿ, ಮನೆಯ ಹೆಂಚು ತೆಗೆದು ಟಾರ್ಚ್‌ ಸಹಾಯದಿಂದ ಮಾದೇಶ್‌ ಮಲಗಿರುವ ಜಾಗ ಗುರ್ತಿಸಿ, ಆ್ಯಸಿಡ್‌ ತುಂಬಿದ ಬಾಟಲಿಯನ್ನು ಎಸೆದಿದ್ದಾರೆ. ನಂತರ ಮನೆಯಾಳಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾರೆ.

ಮಾದೇಶನ ಕಿರುಚಾಟ ಕೇಳಿದ ನೆರೆಹೊರೆಯವರು ಬಾಗಿಲು ಮುರಿದು ಬಂದು ಒಳಗಿದ್ದವರನ್ನು ರಕ್ಷಿಸಿದ್ದಾರೆ. ಸ್ವಲ್ಪ ತಡವಾದರೂ ಇಡೀ ಕುಟುಂಬವೇ ಸಜೀವದಹನವಾಗಿಬಿಡುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದೆಲ್ಲ ಡ್ರಾಮಾ ಮಾಸ್ಟರ್‌ ದೇವೇಗೌಡರ ಗಿಮಿಕ್ಕು: ಕೋಡಿಹಳ್ಳಿಯಲ್ಲಿ ನಡೆದಿರುವ ಈ ಆ್ಯಸಿಡ್‌ ದಾಳಿ ಡ್ರಾಮಾ ಮಾಸ್ಟರ್‌ ದೇವೇಗೌಡ ಕೃಪಾಪೋಷಿತ ನಾಟಕ ಮಂಡಳಿಯ ಸೃಷ್ಟಿ ಎಂದು ಸಚಿವ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಅಶಾಂತಿ ಸೃಷ್ಟಿಸುವ ಮೂಲಕ ಕಾನೂನುಭಂಗ ಮಾಡುತ್ತಿರುವ ಮಾಜಿ ಪ್ರಧಾನಿ ದೇವೇಗೌಡರನ್ನು ಬಂಧಿಸಬೇಕು ಎಂದೂ ಶಿವಕುಮಾರ್‌ ಒತ್ತಾಯಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X