ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ಗೆ ಕರಾಳ ಶುಕ್ರವಾರ : ಭಾರತಕ್ಕೆ ವಿದೇಶದಿ ಐತಿಹಾಸಿಕ ಗೆಲುವು

By Staff
|
Google Oneindia Kannada News

ಪಾಕ್‌ಗೆ ಕರಾಳ ಶುಕ್ರವಾರ : ಭಾರತಕ್ಕೆ ವಿದೇಶದಿ ಐತಿಹಾಸಿಕ ಗೆಲುವು
ಇನಿಂಗ್ಸ್‌ ಹಾಗೂ 131 ರನ್‌ಗಳ ಜಯ. 2-1 ರಿಂದ ಸರಣಿ ಕೈವಶ.

ರಾವಲ್ಪಿಂಡಿ : ಈಗ ‘ಹಮ್ಮ್‌ ದಿಲ್‌ ಭೀ ಜೀತ್‌ ಲಿಯಾ ಔರ್‌ ಮ್ಯಾಚ್‌ ಭೀ ಜಿತ್‌ ಲಿಯಾ’ ಎಂದು ಹೇಳಬಹುದಾದ ಪರ್ವ ಕಾಲ.

ಪಾಕಿಸ್ಥಾನದ ನೆಲದಲ್ಲಿ ಭಾರತೀಯ ಕ್ರಿಕೆಟ್‌ ತಂಡ ಚೊಚ್ಚಲ ಟೆಸ್ಟ್‌ ಸರಣಿ ಗೆದ್ದಿದೆ. ಅಂತರರಾಷ್ಟ್ರಿಯ ಮಟ್ಟದಲ್ಲಿ ಪಾಕಿಸ್ಥಾನ ತಂಡ ರೂಪುಗೊಂಡ ಮೇಲೆ ಇದೇ ಸರಣಿಯಲ್ಲಿ ಮೊದಲ ಬಾರಿಗೆ, ಪಾಕ್‌ ನೆಲದಲ್ಲೇ (ಮುಲ್ತಾನ್‌) ಟೆಸ್ಟ್‌ ಮ್ಯಾಚ್‌ ಜಯಿಸಿದ್ದ ಭಾರತ ಈಗ ಸರಣಿಯನ್ನು 2-1ರೊಂದಿಗೆ ತನ್ನದಾಗಿಸಿಕೊಳ್ಳುವುದರೊಂದಿಗೆ ಐತಿಹಾಸಿಕ ಸಾಧನೆ ಮೆರೆದಿದೆ.

ಈ ಮುನ್ನ ಸ್ನೇಹಸರಣಿಯ ಏಕದಿನ ಸರಣಿಯನ್ನೂ ಭಾರತ ಗೆದ್ದಿತ್ತು . ರಾವಲ್‌ಪಿಂಡಿ ಟೆಸ್ಟ್‌ನ ನಾಲ್ಕನೇ ದಿನವಾದ ಏಪ್ರಿಲ್‌ 16ರಂದು ಭಾರತ ಗೆಲ್ಲುವ ಭರವಸೆಯಾಂದಿಗೆ ದಾಳಿ ಆರಂಭಿಸಿತ್ತು. ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ರಾಹುಲ್‌ ದ್ರಾವಿಡ್‌ರ 270 ರನ್ನುಗಳ ಸಹಾಯದಿಂದ 600 ರನ್ನುಗಳನ್ನು ಸೌರವ್‌ ಪಡೆ ಗಳಿಸಿತ್ತು . 376 ರನ್ನುಗಳ ಹಿನ್ನಡೆಯಾಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ್ದ ಪಾಕಿಸ್ತಾನ, ಗುರುವಾರ ಆಟದ ಕೊನೆಗೆ ಎರಡು ವಿಕೆಟ್‌ ಕಳೆದು ಕೊಂಡು 49 ರನ್‌ ಗಳಿಸಿತ್ತು . ಆದರೆ ಶುಕ್ರವಾರದ ಆಟದಲ್ಲಿ ನಿಯಮಿತವಾಗಿ ವಿಕೆಟ್‌ ಕಳೆದುಕೊಂಡ ಪಾಕಿಸ್ಥಾನ 245 ರನ್‌ಗಳಿಗೆ ಎಲ್ಲ ವಿಕೆಟ್‌ ಕಳೆದುಕೊಂಡಿತು. ಇದರೊಂದಿಗೆ ಭಾರತಕ್ಕೆ ಇನಿಂಗ್ಸ್‌ ಹಾಗೂ 131 ರನ್‌ಗಳ ಜಯ ಗಳಿಸಿತು.

ಭಾರತದ ಪರ ಹೆಚ್ಚಿನ ವಿಕೆಟ್‌ ಪಡೆದವರು ಅನಿಲ್‌ ಕುಂಬ್ಳೆ( 47ರನ್ನಿಗೆ 4ವಿಕೆಟ್‌) . ಬಾಲಾಜಿ ಮೂರು ವಿಕೆಟ್‌ ಪಡೆ ಯುವ ಮೂಲಕ ಕುಂಬ್ಳೆಗೆ ಉತ್ತಮ ಬೆಂಬಲವಿತ್ತರು. ಪಾಕಿಸ್ಥಾನದ ಪರ ಎ.ಕಮಲ್‌ ಅಜೇಯ 60 ರನ್‌ ಗಳಿಸಿದರು.

ನಿರೀಕ್ಷೆಯಂತೆ ದ್ವಿಶತಕ ವೀರ ದ್ರಾವಿಡ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಭಾರತದ ಏಕಮಾನ್ಯ ತ್ರಿಶತಕಧಾರಿ ಷೆಹವಾಗ್‌ ಸರಣಿ ಪುರುಷ ಪ್ರಶಸ್ತಿಯಿಂದ ಪುರಸ್ಕೃತರಾದರು.

ಇದು 15 ವರುಷಗಳ ಬಳಿಕ ಭಾರತ ತಂಡದ ಪಾಕಿಸ್ಥಾನದ ಪ್ರವಾಸವಾಗಿದ್ದು , ಸ್ನೇಹ ಸರಣಿ ಎನ್ನುವ ಖ್ಯಾತಿಗೆ ಪಾತ್ರವಾಗಿತ್ತು . ಭಾರತ ತಂಡವು ವಿದೇಶಿ ನೆಲದಲ್ಲಿ 1986ರಲ್ಲಿ ಇಂಗ್ಲೆಂಡ್‌ ತಂಡವನ್ನು 2-0ಯಿಂದ ಸೋಲಿಸಿ ಸರಣಿ ಜಯಿಸಿತ್ತು. ಆ ಬಳಿಕದ ವಿದೇಶಿ ಸರಣಿಗಳಲ್ಲಿ ಗಂಗೂಲಿ ನೇತೃತ್ವದ ಭಾರತೀಯ ತಂಡ ಜಯದ ಹೊಸ್ತಿಲಿಗೆ ಬಂದಿದ್ದರೂ ಸರಣಿ ಸಮಬಲಗೊಂಡಿತ್ತು.

ಪಾಕ್‌ ಪ್ರವಾಸದ ಸರಣಿ ಗೆದ್ದುದಲ್ಲದೇ ಭಾರತತಂಡ ಬಾಲಾಜಿ, ಇರ್ಫಾನ್‌ ಪಠಾಣ್‌, ಯುವರಾಜ್‌ ಸಿಂಗ್‌ರಂತಹ ಯುವ ಟೆಸ್ಟ್‌ ಪ್ರತಿಭೆಗಳನ್ನು ಪಡೆದದ್ದು ಉಲ್ಲೇಖಕರ.

ನಗದು ಬಹುಮಾನ : ಅತ್ತ ಭಾರತೀಯ ತಂಡ ಸರಣಿ ಗೆಲ್ಲುತ್ತಿದ್ದಂತೆ ಇತ್ತ ಭಾರತದಲ್ಲಿ ತಂಡಕ್ಕೆ ಪ್ರಶಂಸೆ-ಪುರಸ್ಕಾರಗಳ ಪೂರವೇ ಹರಿದಿದೆ. ಸರಣಿ ಗೆದ್ದ ಗಂಗೂಲಿ ಬಳಗಕ್ಕೆ ಬಿಸಿಸಿಐ 50 ಲಕ್ಷ ರುಪಾಯಿ ನಗದು ಬಹುಮಾನ ಘೋಷಿಸಿದೆ.

ಭಾರತ-ಪಾಕ್‌ ಸ್ನೇಹ ಸರಣಿಯ ಕ್ರಿಕೆಟ್‌ ಪಂದ್ಯದಲ್ಲಿ ಭಾರತವು ಸಾಧಿಸಿದ ಗೆಲುವು ಒಂದು ರೋಚಕವಾದ ಐತಿಹಾಸಿಕ ಕ್ಷಣ. ನಾನು ಈ ತಂಡದ ಸಾಧನೆಯಿಂದ ಪುಳಕಿತಗೊಂಡಿದ್ದೇನೆ ಎಂದು ಭಾರತೀಯ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಜಗಮೋಹನ್‌ ದಾಲ್ಮಿಯಾ ಹೇಳಿದರು. ಈ ಹಿಂದೆ ಬಿಸಿಸಿಐ ಏಕದಿನ ಸರಣಿ ಗೆದ್ದಾಗಲೂ 50ಲಕ್ಷ ನಗದು ಘೋಷಿಸಿತ್ತು.

ಸಂಪೂರ್ಣ ಸ್ಕೋರ್‌ಗೆ : http://www.thatscricket.com

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X