ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂತಕದ ವಾತಾವರಣದಲ್ಲಿ ಲಖನೌದಲ್ಲಿ ವಾಜಪೇಯಿ ನಾಮಪತ್ರ

By Staff
|
Google Oneindia Kannada News

ಸೂತಕದ ವಾತಾವರಣದಲ್ಲಿ ಲಖನೌದಲ್ಲಿ ವಾಜಪೇಯಿ ನಾಮಪತ್ರ
ಐದನೇ ಬಾರಿ ಆಯ್ಕೆ ಬಯಸಿ ವಾಜಪೇಯಿ ಸ್ಪರ್ಧೆ, ಪ್ರಧಾನಿ ವಿರುದ್ಧ ಕಾಂಗ್ರೆಸ್‌ನ ಅಭ್ಯರ್ಥಿ ಆಖಿಲೇಶ್‌ ದಾಸ್‌

ಲಖನೌ : ಐದನೇ ಬಾರಿಗೆ ಪುನರಾಯ್ಕೆ ಬಯಸಿ ಲಖನೌ ಕ್ಷೇತ್ರದಲ್ಲಿ ಪ್ರಧಾನಿ ವಾಜಪೇಯಿ ಗುರುವಾರ ನಾಮಪತ್ರ ಸಲ್ಲಿಸಿದರು. ‘ಬರ್ತ್‌ಡೇ ಸೀರೆ ದುರಂತ’ ದಿಂದಾಗಿ ಅಭಿಮಾನಿಗಳ ಯಾವುದೇ ಮೆರಣಿಗೆಯಿಲ್ಲದೆ ಅವರು ನಾಮಪತ್ರ ಸಲ್ಲಿಕೆಯ ಕಛೇರಿಗೆ ಅಮಿಸಿದರು.

ಏಪ್ರಿಲ್‌ 15ರ ಗುರುವಾರದ ಶುರುಮಧ್ಯಾಹ್ನ 80ರ ಹರೆಯದ ಪ್ರಧಾನಿ , ಅವರ ಚುನಾವಣಾ ಪ್ರಚಾರಕ ಲಾಲ್‌ಜಿ ಟೆಂಡನ್‌ ಜೊತೆಯಲ್ಲಿ ಚುನಾವಣಾ ಅಧಿಕಾರಿ ಆರಾಧನಾ ಶುಕ್ಲ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಜೊತೆ ಮಾಜಿ ಮುಖ್ಯಮಂತ್ರಿಗಳಾದ ಕಲ್ಯಾಣ್‌ ಸಿಂಗ್‌ ಮತ್ತು ರಾಜ್‌ನಾಥ್‌ ಸಿಂಗ್‌ , ಕೇಂದ್ರ ಸಚಿವರಾದ ಪ್ರಮೋದ್‌ ಮಹಾಜನ್‌ ಮತ್ತು ಸುಷ್ಮಾ ಸ್ವರಾಜ್‌ ಸೇರಿದಂತೆ ಇನ್ನಿತರ ಬಿಜೆಪಿ ಮುಖಂಡರು ಹಾಜರಿದ್ದರು.

ಬಳಿಕ ವಾಜಪೇಯಿಗೆ ಪಕ್ಷದ ಕಾರ್ಯಕರ್ತರನ್ನು ಲಾಲ್‌ಜಿ ಟೆಂಡನ್‌ ಪರಿಚಯಿಸಿದರು. ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ದೇಶದ ಹಿತಾಸಕ್ತಿಗೆ ಧಕ್ಕೆ ಬರುವ ಯಾವುದೇ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ನಾವು ತಯಾರಿಲ್ಲ. ನಮ್ಮ ಸರಕಾರದ ಅಪೂರ್ಣವಾಗಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಇನ್ನು ಐದು ವರ್ಷದ ಅಧಿಕಾರ ಕೊಡಿ ಎಂದು ಕೇಳಿಕೊಂಡರು.

ಸದ್ಯಕ್ಕಿರುವ ನ್ಯೂನತೆಗಳನ್ನು ಸರಿಪಡಿಸುತ್ತೇವೆ. ಈಗಾಗಲೇ ಆರ್ಥಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧಿಸಿದ್ದೇವೆ, ಇನ್ನಷ್ಟು ಸಾಧಿಸಬೇಕಾಗಿದೆ ಎಂದು ಹೇಳಿದರು.

ನನಗೆ ಈ ವರ್ಷ ಚುನಾವಣೆಗೆ ಸ್ಫರ್ಧಿಸುವ ಇಚ್ಛೆ ಇರಲಿಲ್ಲ. ಆದರೆ ಪಕ್ಷದ ಮತ್ತು ಮಿತ್ರ ಪಕ್ಷಗಳ ಒತ್ತಾಯಕ್ಕಾಗಿ ಸ್ಪರ್ಧಿಸುತ್ತಿದ್ದೇನೆ. ನಾನು ಒಬ್ಬ ಪಕ್ಷದ ಕಟ್ಟಾ ಕಾರ್ಯಕರ್ತ. ಆದ್ದರಿಂದ ಪಕ್ಷದ ಇಚ್ಛೆ ಮತ್ತು ಆಜ್ಞೆಯನ್ನು ಮೀರುವಂತಿಲ್ಲ ಎಂದು ಹೇಳಿದರು.

ನೀವು ರಾಜಕೀಯ ನಿವೃತ್ತಿ ಏಕೆ ಕೈಗೊಳ್ಳುತ್ತಿಲ್ಲ ಎಂಬ ಮುಜುಗರದ ಪ್ರಶ್ನೆಗಳಿಗೆ ಅವರು- ನಾನು ದೇಶ ಸೇವೆ ಮಾಡಬೇಕೆಂಬ ಉದ್ದೇಶವಿಟ್ಟು ಬಂದಿದ್ದೇನೆ. ಇದು ಪ್ರಜಾಪ್ರಭುತ್ವ. ದೇಶ ಎಂಬುದು ಒಬ್ಬ ವ್ಯಕ್ತಿ ಅಥವಾ ಪಕ್ಷದ ಸೊತ್ತಲ್ಲ. 100 ಕೋಟಿ ಜನರ ಆಶಯ- ಆಕಾಂಕ್ಷೆಯಾಗಿದೆ . ಈ ಹಿಂದೆ ಹಲವರು ಸರ್ವಾಧಿಕಾರ ಮಾಡಲು ಪ್ರಯತ್ನಸಿದರು. ಆದರೆ ನಾವು ಏನಾದರು ಮಾಡಿ ದೇಶದ ರಕ್ಷಣೆ ಮಾಡುತ್ತೇವೆ ಎಂದು ಹೇಳಿದರು.

ನಾಮಪತ್ರ ಸಲ್ಲಿಸಲು ತೆರಳುವ ಮುನ್ನ ಕಾರ್ಯಕರ್ತರು ಆಯೋಜಿಸಿದ್ದ ‘ಹವನ’ ದಲ್ಲಿ ವಾಜಪೇಯಿ ಪಾಲ್ಗೊಂಡರು. ಅಲ್ಲಿ ಪಾಲ್ಗೊಂಡಿದ್ದ ಜನರು ‘ಹರ ಹರ ಮಹದೇವ ’, ‘ಭಾರತ್‌ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗುತ್ತಿದ್ದಂತೆಯೇ ಅರ್ಚಕರು ಪ್ರಧಾನಿಗೆ ತಿಲಕವನ್ನಿಟ್ಟರು. ಈ ಕ್ಷೇತ್ರದಿಂದ ಪ್ರಧಾನಿ 1991,1996,1998 ಮತ್ತು 1999ರಲ್ಲಿ ಸತತವಾಗಿ ನಾಲ್ಕು ಬಾರಿ ಆರಿಸಿ ಬಂದಿದ್ದಾರೆ.

ಈ ನಡುವಿನ ನಾಟಕೀಯ ಬೆಳವಣಿಗೆಯಲ್ಲಿ ಪ್ರಧಾನಿ ವಿರುದ್ಧವಾಗಿ ಕಾಂಗ್ರೆಸ್‌ ತನ್ನ ಅಭ್ಯರ್ಥಿ ಆಖಿಲೇಶ್‌ ದಾಸ್‌ರನ್ನು ಕಣಕ್ಕಿಳಿಸಿದೆ. ಈ ಹಿಂದೆ ಜೇಠ್ಮಲಾನಿ ನಾಮಪತ್ರ ಹಿಂತೆಗೆಯುವಂತೆ ಪ್ರಧಾನಿ ಹೇಳಿಕೆ ನೀಡಿದ್ದರು. ಅಲ್ಲದೆ ಜೇಠ್ಮಲಾನಿ ವಿರುದ್ಧದ ತನ್ನ ಪಕ್ಷದವರ ವಾಗ್ದಾಳಿಯನ್ನು ವಾಜಪೇಯಿ ಖಂಡಿಸಿದ್ದರು. ಈ ಅನಿರೀಕ್ಷಿತ ಬೆಳವಣಿಗೆಯ ಕುರಿತು ಮುಂಜಾಗ್ರತಾ ಕ್ರಮವಾಗಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ.

(ಪಿಟಿಐ)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X