ಶ್ರೀ ರಾಮಚಂದ್ರಾಪುರದಲ್ಲಿ ವೈಭವದ ಶ್ರೀರಾಮೋತ್ಸವ
ಶ್ರೀ ರಾಮಚಂದ್ರಾಪುರದಲ್ಲಿ ವೈಭವದ ಶ್ರೀರಾಮೋತ್ಸವ
ಮಾ.21ರ ಯುಗಾದಿಯಿಂದ ಹತ್ತು ದಿನಗಳ ಕಾಲ ತಾರಣನಾಮ ಸಂವತ್ಸರದ ‘ಶ್ರೀರಾಮೋತ್ಸವ’ ರಾಮಚಂದ್ರಾಪುರದಲ್ಲಿ ನಡೆಯಲಿದೆ. ರಾಮ ನಾಮ ಸಮಿಯ ಜೊತೆಗೆ ಸಾಂಸ್ಕೃತಿಕ ರಸಾಯನವೂ ಇಲ್ಲುಂಟು.
- ಶ್ರೀಕಾಂತ ಹೆಗಡೆ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿ ಶರಾವತೀ ನದಿತೀರದ, ಪವಿತ್ರ ಅಗಸ್ತ್ಯತೀರ್ಥರ ಸೆರಗಿನಲ್ಲಿರುವ ಶ್ರೀ ರಾಮಚಂದ್ರಾಪುರವು ರಾಜಮಾನ್ಯ ಇತಿಹಾಸವನ್ನು ಹೊಂದಿದೆ. ಶ್ರೀ ಆದಿಶಂಕರಾಚಾರ್ಯ ಕರಾಚ್ಭಿತವಾದ ಶ್ರೀ ಚಂದ್ರಮೌಳೀಶ್ವರೇತ್ಯಾದಿ ದೇವತಾ ವಿಗ್ರಹಗಳು ನಿತ್ಯ ಪೂಜಿತವಾಗುವ ಪುಣ್ಯಸ್ಥಳ ಈ ರಾಮಚಂದ್ರಾಪುರ.
ಪೀಠಾರೋಹಣ ಮಾಡಿದ ದಶಕದವಧಿಯಲ್ಲಿಯೇ ದೇಶವ್ಯಾಪಿ ಶಿಷ್ಯಸ್ತೋಮವನ್ನು ಹೊಂದಿ ಸಕಲಜನಪ್ರಿಯರಾಗಿರುವ ಮಹಾಮಹಿಮರಾದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಆಚಾರ್ಯ ಶಂಕರರು ಸ್ಥಾಪಿಸಿದ ಶ್ರೀ ಗೋಕರ್ಣ ಮಹಾಸಂಸ್ಥಾನದ ಅವಿಚ್ಛಿನ್ನ ಪರಂಪರೆಯ ಮೂವತ್ತಾರನೆಯ ಪೀಠಪತಿಗಳು. ಈ ಪರಮಪೂಜ್ಯರ ಮಾರ್ಗದರ್ಶನ ಹಾಗೂ ದಿವ್ಯ ಸಾನ್ನಿಧ್ಯದಲ್ಲಿ , ಶಿವಮೊಗ್ಗ ಜಿಲ್ಲೆಯ ಶ್ರೀ ರಾಮಚಂದ್ರಾಪುರದಲ್ಲಿ ಮುಂಬರುವ ಚೈತ್ರ ಶುದ್ಧ ಪ್ರತಿಪದೆ(ಯುಗಾದಿ)ಯಿಂದ ನವಮಿಯವರೆಗೆ (ದಿನಾಂಕ 21.3.2004 ರಿಂದ 30.3.2004) ಹತ್ತು ದಿನಗಳ ಕಾಲ ವೈಭವಪೂರ್ಣ ಉತ್ಸವಕ್ಕೆ ವ್ಯಾಖ್ಯಾನವೆಂಬ ಕ್ರಮದಲ್ಲಿ ಶ್ರೀ ತಾರಣನಾಮ ಸಂವತ್ಸರದ (ಈ ವರ್ಷದ) ‘ಶ್ರೀರಾಮೋತ್ಸವ ’ವು ಜರುಗಲಿದೆ. (ಪರಮ ಪುರುಷೋತ್ತಮನಾದ ಶ್ರೀ ರಾಮನು ಚೈತ್ರ ಶುದ್ಧ ಪ್ರತಿಪದೆಯಂದು, ಪುನರ್ವಸು ನಕ್ಷತ್ರದಲ್ಲಿ ಸೂರ್ಯವಂಶದೀಪಕನಾಗಿ ಅಯೋಧ್ಯೆಯಲ್ಲಿ ಜನಿಸಿದನೆಂಬುದು ಇತಿಹಾಸ).
ಈ ವರ್ಷ ಶ್ರೀಗಳ ಸನ್ಯಾಸ ದೀಕ್ಷೆಯ ದಶಮಾನೋತ್ಸವವಾಗಿರುವುದರಿಂದ ಈ ಸಂದರ್ಭದಲ್ಲಿ ವಿವಿಧ ವಿಶಿಷ್ಟ ಉತ್ಸವಗಳನ್ನು ಏರ್ಪಡಿಸಲಾಗಿದೆ. ಈ ದಿನಗಳಲ್ಲಿ ಬೆಳಿಗ್ಗೆ ಶ್ರೀಗಳಿಂದ ಸ್ವರ್ಣ ಮಂಟಪದಲ್ಲಿ ಶ್ರೀ ಶಂಕರ ಭಗವತ್ಪಾದ ಕರಾಚ್ಭಿತ ಶ್ರೀ ಸೀತಾರಾಮಚಂದ್ರ ಶ್ರೀ ಚಂದ್ರಮೌಳೀಶ್ವರ ರಾಜರಾಜೇಶ್ವರೀ ದೇವತೆಗಳ ಪೂಜೆ ನಡೆಯಲಿದೆ. ಅನಂತರದಲ್ಲಿ ಕುಂಕುಮಾರ್ಚನೆ ರಾಮತಾರಕ ಮಂತ್ರಜಪ, ಶಿಷ್ಯರಿಂದ ಗುರುಗಳಿಗೆ ಹೊರಗಾಣಿಕೆ ಸಮರ್ಪಣೆ, ಸಭಾಕಾರ್ಯಕ್ರಮಗಳು, ವಿವಿಧ ಗೋಷ್ಠಿಗಳು, ಕಲಾಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಶ್ರೀಗಳಿಂದ ಆಶೀರ್ವಚನ ಮತ್ತು ಪ್ರಸಾದ ಭೋಜನ ಕಾರ್ಯಕ್ರಮಗಳಿರುತ್ತವೆ.
ಮಾರ್ಚ್ 21ರಂದು ಗಣಹವನದೊಂದಿಗೆ ಪ್ರಾರಂಭೋತ್ಸವವಿದೆ. ಅಂದು ಸಂಜೆ ಶ್ರೀ ಸುಬ್ರಹ್ಮಣ್ಯಶಾಸ್ತ್ರಿಗಳಿಂದ ಪಂಚಾಂಗ ಪೂಜೆ ಪಂಚಾಂಗ ವಾಚನವಿದೆ. ಆಗ ಹೊಸನಗರದ ತಹಶೀಲ್ದಾರರಾದ ಉಪೇಂದ್ರ ನಾಯಕರು ಅಭ್ಯಾಗತರಾಗಲಿದ್ದಾರೆ. ಸಂಜೆ ಶ್ರೀ ಮಾತಾ ಗುರುಕುಲದ ಶ್ರೀಭಾರತೀ ಗುರುಕುಲದ ವಿದ್ಯಾರ್ಥಿಗಳಿಂದ ವಿವಿಧ ಕಲೆಗಳ ಪ್ರದರ್ಶನಗಳು ನಡೆಯಲಿವೆ. ಹೀಗೆ ಹತ್ತೂ ದಿನ ರಾತ್ರಿಗಳ ಕಾಲ ಕಾವ್ಯೋತ್ಸವ, ಸಂಸ್ಕೃತ ಕಾವ್ಯಗೋಷ್ಠಿ, ಪ್ರಾಚೀನ ಕನ್ನಡ ಕಾವ್ಯಗೋಷ್ಠಿ, ಕವಿಗೋಷ್ಠಿ, ದಾಸಸಾಹಿತ್ಯ ಗಾನ, ಚಿತ್ರೋತ್ಸವ, ಆರೋಗ್ಯೋತ್ಸವ, ವೈರಾಗ್ಯೋತ್ಸವ, ರಕ್ತದಾನ ಶಿಬಿರ, ಪೂಗೋತ್ಸವ, ಹರಿಕಥೆ, ಪಾಕೋತ್ಸವ, ಯಕ್ಷಗಾನೋತ್ಸವ, ನಾತೋತ್ಸವ, ವಾದ್ಯೋತ್ಸವ, ನಾದೋತ್ಸವ, ಶ್ರೀರಾಮ ಜನ್ಮೋತ್ಸವ, ಗರುಡೋತ್ಸವ, ಸೀಮೋತ್ಸವ, ಮಹಾರಥೋತ್ಸವ, ಕಿರೀಟೋತ್ಸವಗಳು ನಡೆಯಲಿವೆ.
ನಾಡಿನ ಪ್ರಸಿದ್ಧ ಕವಿಗಳು, ಕಲಾವಿದರು, ಮಂತ್ರಿಮಹೋದಯರು, ಅಧಿಕಾರಿಗಳು, ಸರ್ವಸೀಮೆಗಳ ಗುರಿಕಾರರು, ಶಿಸ್ತುಬದ್ಧ ಸ್ವಯಂಸೇವಕರು ಸಾರ್ವಜನಿಕರು ಎಲ್ಲ ಸೇರಿ ಸುಮಾರು ಮೂರು ಲಕ್ಷ ಜನ ಈ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಮುಖಪುಟ / ವಾರ್ತೆಗಳು












Click it and Unblock the Notifications