ಪಟ್ಟಾ ವಿಳಂಬ,ಗಿರಿಜನರ ಶೋಷಣೆ ಖಂಡಿಸಿ ಶೃಂಗೇರಿಯಲ್ಲಿ ರ್ಯಾಲಿ
ಪಟ್ಟಾ ವಿಳಂಬ,ಗಿರಿಜನರ ಶೋಷಣೆ ಖಂಡಿಸಿ ಶೃಂಗೇರಿಯಲ್ಲಿ ರ್ಯಾಲಿ
ಕುದುರೇಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟದಿಂದ ಚುನಾವಣೆ ಬಹಿಷ್ಕಾರ
ಹಾಸನ : ಪಟ್ಟಾಗಳನ್ನು (ಕೃಷಿ ಭೂಮಿಯ ಒಡೆತನ) ನೀಡಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರತಿಭಟಿಸಿ ಕುದುರೇಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟ ಶಾರದಾಂಬೆಯ ಶೃಂಗೇರಿಯಲ್ಲಿ ಪ್ರತಿಭಟನಾ ರ್ಯಾಲಿ ಏರ್ಪಡಿಸಿದೆ.
ಪಟ್ಟಾಗಳನ್ನು ನೀಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಹಾಗೂ ಕುದುರೇಮುಖ ರಾಷ್ಟ್ರೀಯ ಉದ್ಯಾನ ಪ್ರದೇಶದಿಂದ ಗುಡ್ಡಗಾಡು ಜನರನ್ನು ಬಲವಂತವಾಗಿ ಸ್ಥಳಾಂತರಿಸಲಾಗುತ್ತಿದೆ. ಸರ್ಕಾರದ ಈ ವಿಳಂಬ ಹಾಗೂ ದಮನ ನೀತಿಯನ್ನು ವಿರೋಧಿಸಿ ಮಾ.15ರ ಸೋಮವಾರ ಶೃಂಗೇರಿಯಲ್ಲಿ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕುದುರೇಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟ ತಿಳಿಸಿದೆ.
ನಿಡುಮಾಮಿಡಿ ಮಠದ ಚನ್ನಮಲ್ಲ ವೀರಭದ್ರ ಸ್ವಾಮೀಜಿ, ಲಂಕೇಶ್ ಪತ್ರಿಕೆಯ ಗೌರಿ ಲಂಕೇಶ್, ಶ್ರೀಧರ್, ಸನತ್‌ಕುಮಾರ್ ಬೆಳಗಲಿ, ಮುಂತಾದವರು ರ್ಯಾಲಿಯಲ್ಲಿ ಭಾಗವಹಿಸುವರು ಎಂದು ಒಕ್ಕೂಟದ ಅಧ್ಯಕ್ಷ ವಿಠ್ಠಲ್ ಹೆಗ್ಗಡೆ ತಿಳಿಸಿದ್ದಾರೆ.
ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಒಕ್ಕೂಟ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುತ್ತದೆ ಎಂದು ತಿಳಿಸಿರುವ ವಿಠ್ಠಲ್ ಹೆಗ್ಗಡೆ- ಒಕ್ಕೂಟದ ಸದಸ್ಯರು ಹಾಗೂ ಗುಡ್ಡಗಾಡು ಜನರ ವಿರುದ್ಧ ವಿಶೇಷ ಕಾರ್ಯಪಡೆ ದಮನ ನೀತಿ ಅನುಸರಿಸುತ್ತಿದೆ ಎಂದು ಆಪಾದಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು