ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಕುಂತಲಾ ಹೆಗಡೆ ಕಾಂಗ್ರೆಸ್ಸಿಗೆ? ಆಗಬಹುದು, ಆಗಬಹುದು !

By Staff
|
Google Oneindia Kannada News

ಶಕುಂತಲಾ ಹೆಗಡೆ ಕಾಂಗ್ರೆಸ್ಸಿಗೆ? ಆಗಬಹುದು, ಆಗಬಹುದು !
ಲೋಕಸಭಾ ಚುನಾವಣೆಗೆ ನಿಲ್ಲುತ್ತಾರೆ ಎನ್ನುವಊಹಾಪೋಹಗಳು ಚಾಲ್ತಿಯಲ್ಲಿ

  • (ದಟ್ಸ್‌ಕನ್ನಡ ಡೆಸ್ಕ್‌)
ಭಾರತದಲ್ಲಿ ರಾಜಕೀಯ ಎನ್ನುವುದು ಅನುವಶಿಂಕ ಆಡಳಿತಕ್ಕೆ ಇನ್ನೊಂದು ಹೆಸರು ಎಂದರೆ ಏನೇನೂ ತಪ್ಪಿಲ್ಲ. ನೆಹರು ಕುಟುಂಬದ ವಂಶಾಡಳಿತ ಕಾಂಗ್ರೆಸ್‌ನಲ್ಲಾದರೆ, ಲಲ್ಲೂವಿನ- ರಾಬ್ರಿ, ಫಾರೂಕ್‌ರ- ಅಬ್ದುಲ್ಲ , ಕರುಣಾನಿಧಿಯ -ಸ್ಟಾಲಿನ್‌ , ಕರುಣಾಕರನ್‌ರ-ಮುರಳೀಧರನ್‌, ದೇವೇಗೌಡರ -ರೇವಣ್ಣ, ಮಾರನ್‌ರ -ಕಲಾನಿಧಿ ... ಪಟ್ಟಿ ಮಾಡುತ್ತಾ ಹೋದರೆ ಕೊನೆಯಿಲ್ಲ. ರಾಜಕಾರಣಕ್ಕೂ ರಕ್ತದ ನಂಟು ಹೆಚ್ಚು. ಬಿ-ಫಾರ್ಮ್‌ ಸುಲಭವಾಗಿ ಲಭಿಸುವುದು ವಂಶಿಕ ಜೀನ್‌ನಲ್ಲಿ ಅಂತ ಕಾಣತ್ತೆ. ವಿಧಾನ ಸಭೆಗೆ ಇತ್ತೀಚೆಗೆ ವೇಮಗಲ್‌ನಿಂದ ಬೈರೇಗೌಡರ ಮಗ ಬಂದರೆ, ಇಲಕಲ್ಲಿನಿಂದ ಕಾಶಪ್ಪನವರ್‌ ಪತ್ನಿ ಬಂದರು. ಯಾರೊಬ್ಬ ರಾಜಕಾರಣಿ ಇಹಲೋಕ ತ್ಯಜಿಸಿದರೆ ಆವರ ಕುಟುಂಬಕ್ಕೆ ಮೊದಲ ಮಣೆ. ಕ್ಷೇತ್ರದಲ್ಲಿ ತೀರಿಕೊಂಡ ಜನಪ್ರತಿನಿಧಿಯ ಕುಟುಂಬದ ಪರ ಅನುಕಂಪದ ಅಲೆ ತೇಲಿಬರುತ್ತವೆ ಎಂಬ ಆಸೆಗಣ್ಣಿನಿಂದ ಪಕ್ಷಗಳು ಮನೆಬಾಗಿಲಿಗೆ ಕಾಕಾ ಅಂದುಕೊಂಡು ಬರುತ್ತವೆ. ತೀರಿಕೊಂಡವರ ಗಂಡನಿಗೋ, ಹೆಂಡತಿಗೋ, ಮಗನಿಗೋ ಮಗಳಿಗೋ ಸ್ಪರ್ಧಿಸಲು ಟಿಕೆಟ್‌ ಕೊಡುತ್ತವೆ. ಜನ ಓಟು ಹಾಕುತ್ತಾರೆ. ಪ್ರಜಾಪ್ರಭುತ್ವ ಮುಂದುವರೆಯುತ್ತದೆ.

ಬೆಂಗಳೂರಿನ ಸದಾಶಿವನಗರದ ಹೆಗಡೆ ಮನೆಮುಂದೆ ಇವತ್ತು ರಾಜಕೀಯ ಗಾಳಿ ಬಲವಾಗಿ ಬೀಸಲಾರಂಭಿಸಿದೆ. ಬಿಜೆಪಿಯ ಅಡ್ವಾಣಿ-ವೆಂಕಯ್ಯ ನಾಯ್ಡು ಬಂದು ಹೋದರೆ , ಎನ್‌ಡಿಎಯ ಜಾರ್ಜ್‌ ಆಗಮನ-ನಿರ್ಗಮನವಾಗಿದೆ. ಇತರ ಎಲ್ಲಾ ಪಕ್ಷಗಳು ಹೆಗಡೆ ಕುಟುಂಬಕ್ಕೆ ಆಹ್ವಾನ ಕೊಡುತ್ತಿವೆ. ಆದರೆ ಹೆಗಡೆ ಪತ್ನಿ, ಶಕುಂತಳಾ ಹೆಗಡೆ ಮಾತ್ರ ಕಾಂಗೈ ಸೇರುವ ಒಲವು ತೋರಿದ್ದಾರೆಂಬ ವರದಿಗಳಿವೆ. ಹೆಗೆಡೆ ಬದುಕಿದ್ದಾಗ ಅವರನ್ನು ಎನ್‌ಡಿಎ ಮಿತ್ರ ಕೂಟಗಳು ನಡೆಸಿಕೊಂಡ ಪರಿ, ಅವರಿಗೆ ಒಲ್ಲದ ಹುದ್ದೆಗಳು, ಅವರು ಅನಾರೋಗ್ಯ ಪೀಡಿತರಾದಾಗ ಅಲಕ್ಷಿಸಿದ ಕೇಂದ್ರ ಸರಕಾರ, ಹೆಗಡೆಯನ್ನು ನಿರ್ಲಕ್ಷಿಸಿದ ಬಿಜೆಪಿ ನಿಲುವುಗಳು ಮುಂತಾದ ಕಾರಣಗಳಿಂದಾಗಿ ಶಕುಂತಲಾ ಕಾಂಗ್ರೆಸ್‌ ಸೇರುವರೆಂದು ಪುಕಾರು. ಅಷ್ಟೇನೂ ನಂಬಲರ್ಹವಲ್ಲದ ವರದಿಯ ಪ್ರಕಾರ, ಶಕುಂತಲಾ ಹೆಗಡೆ ತೆರೆಮರೆಯಲ್ಲಿ ಕೃಷ್ಣರಿಗೆ ಕಾಂಗೈ ಸೇರುವ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ..

ಶಕುಂತಲಾ ಹೆಗೆಡೆಗೆ ಒಪ್ಪಿದರೆ ಕಾಂಗೈಗೆ ಭಾರೀ ಬಂಪರ್‌ ಸಿಕ್ಕಂತೆ. ಲೆಕ್ಕಾಚಾರಗಳು ಹೀಗೇ ಮುಂದುವರೆದರೆ, ದಕ್ಷಿಣ ಬೆಂಗಳೂರು ಅಥವಾ ಕೆನರಾ ಕ್ಷೇತ್ರದಿಂದ ಶಕುಂತಲ ಸ್ಫರ್ಧಿಸುವರು ಎಂದು ಭಾವಿಸಲಾಗುತ್ತಿದೆ. ಹೆಗಡೆ ಪುತ್ರಿ ಮಮತಾ ನಿಚ್ಚಾನಿ ಒಡೆದು ಹೋದ ದಳ ತೊರೆದು ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಎಂಬ ಪುಕಾರುಗಳು ಚುನಾವಣಾ ಮಾರುಕಟ್ಟೆಯಲ್ಲಿ ಹುಟ್ಟಿಕೊಂಡುವೆ. ಹೆಗಡೆ ಮಗ ಕೂಡ ಕಾಂಗೈಗೆ ಮರಳುವ ಸಾಧ್ಯತೆ ಇದೆ. ಹೆಗಡೆ ತಮ್ಮ ರಾಜಕೀಯ ಜೀವನ ಆರಂಭಿಸಿದ್ದೂ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ನಿಂದಲೇ.

ಈ ಬೆಳವಣಿಗೆಗಳ ನಡುವೆ ಇನ್ನಷ್ಟು ಬಡವಾಗುತ್ತಿರುವುದು ಹೆಗಡೆ ರಚಿಸಿದ ‘ದಳ’. ಎಂಬತ್ತರ ದಶಕದಲ್ಲಿ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ತಂದ ಹೆಗಡೆ ಸ್ಥಾಪಿಸಿದ ಪಕ್ಷ ಈಗ ಅಂಬಿಗನಿಲ್ಲದ ನೌಕೆಯಾಗಿದೆ.

ಇತ್ತ ರಾಜ್ಯ ಕಾಂಗೈ ವಂಶಾಡಳಿತ ಗುಂಗಿನಿಂದ ಹೊರಬಂದಂತ್ತಿಲ್ಲ! ಸೋನಿಯಾ, ಪ್ರಿಯಾಂಕಾ, ರಾಹುಲ್‌ಗೆ ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಲಾಗಿದೆ ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ. ಇಂದಿರಜ್ಜಿ ಚಿಕ್ಕಮಗಳೂರಿನಲ್ಲಿ ಗೆದ್ದರೆ, ಸೊಸೆ ಸೋನಿಯ ಅಮ್ಮ ಬಳ್ಳಾರಿಯಲ್ಲಿ ಗೆದ್ದ ರೆ, ಮೊಮ್ಮಗಳು ಪ್ರಿಯಾಂಕ ಕೋಲಾರದಲ್ಲಿ ಗೆಲ್ಲಲಾರಳಾ?

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X