ಭಾರತೀಯ ಜನತಾಪಕ್ಷಕ್ಕೆನಿವೃತ್ತ ಡಿಜಿಪಿ ಎಚ್. ಟಿ. ಸಾಂಗ್ಲಿಯಾನ
ಭಾರತೀಯ ಜನತಾಪಕ್ಷಕ್ಕೆನಿವೃತ್ತ ಡಿಜಿಪಿ ಎಚ್. ಟಿ. ಸಾಂಗ್ಲಿಯಾನ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸಾಂಗ್ಲಿಯಾನ ಸ್ಪರ್ಧೆ ?
ಮಾಜಿ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ಅವರನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯ ನಾಯ್ಡು ಹಾಗೂ ರಾಜ್ಯಾಧ್ಯಕ್ಷ ಅನಂತಕುಮಾರ್ ಪಕ್ಷಕ್ಕೆ ಸ್ವಾಗತಿಸಿದರು. ಉತ್ತರಹಳ್ಳಿ ವಿಧಾನಸಭಾ ಸದಸ್ಯ ಅಶೋಕ್ ಅವರು ಕೂಡ ಸಾಂಗ್ಲಿಯಾನ ಬಿಜೆಪಿಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಹಾಜರಿದ್ದರು.
ಶಾಸಕ ಅಶೋಕ್ ಹಾಗೂ ಅನಂತಕುಮಾರ್ ಅವರೊಂದಿಗೆ ಬುಧವಾರವೇ ಸಾಂಗ್ಲಿಯಾನ ದೆಹಲಿಗೆ ತೆರಳಿದ್ದರು. ಬಿಜೆಪಿಗೆ ಸೇರಿದ್ದನ್ನು ಸಮರ್ಥಿಸಿಕೊಂಡಿರುವ ಸಾಂಗ್ಲಿಯಾನ- ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಬಿಜೆಪಿಯಿಂದ ದೂರವಿರುವ ದಿನಗಳು ಮುಗಿದವು ಎಂದಿದ್ದಾರೆ.
ಐಪಿಎಸ್ ಅಧಿಕಾರಿಯಾಗಿ ರಾಜ್ಯದಲ್ಲಿ ತಮ್ಮ ಅಧಿಕಾರಾವಧಿಯ ಬಹುತೇಕ ವರ್ಷಗಳನ್ನು ಕಳೆದಿದ್ದ ಸಾಂಗ್ಲಿಯಾನ, ಬೆಂಗಳೂರು ನಗರ ಆಯುಕ್ತ ರಾಗಿಯೂ ಕಾರ್ಯ ನಿರ್ವಹಿಸಿದ್ದರು. ಒಂದೊಮ್ಮೆ ತಮ್ಮ ದಿಟ್ಟ ಕ್ರಮಗಳಿಂದ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದ ಸಾಂಗ್ಲಿಯಾನ, ನಿವೃತ್ತಿಯ ದಿನಗಳಲ್ಲಿ ತುಘಲಕ್ ಎನ್ನಿಸಿಕೊಂಡಿದ್ದರು. ವೀರಪ್ಪನ್ ಶಿಕಾರಿಯಲ್ಲೂ ಸ್ವಲ್ಪ ಕಾಲ ಭಾಗಿಯಾಗಿದ್ದ ಅವರು ಕಾಡಿನಿಂದ ಬರಿಗೈಯಲ್ಲಿ ವಾಪಸ್ಸಾಗಿದ್ದರು. ನಕಲಿ ಛಾಪಾ ಪಾಪದ ಹಗರಣದ ಪ್ರಾಥಮಿಕ ತನಿಖೆಯಲ್ಲೂ ಸಾಂಗ್ಲಿಯಾನ ಭಾಗಿಯಾಗಿದ್ದರು.
ನಿವೃತ್ತಿಯಾದ ದಿನದಿಂದಲೂ ರಾಜಕೀಯ ಪ್ರವೇಶದ ಕುರಿತು ಒಲವು ವ್ಯಕ್ತಪಡಿಸುತ್ತಿದ್ದ ಸಾಂಗ್ಲಿಯಾನ ಈಗ ಬಿಜೆಪಿ ಸೇರಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸಾಂಗ್ಲಿಯಾನ ಸ್ಪರ್ಧಿಸುವರು ಎಂದು ನಿರೀಕ್ಷಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications