ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಡುಗಿಯರೇ, ಭಸ್ಮಾಸುರರಿದ್ದಾರೆ ಎಚ್ಚರಿಕೆ !

By Staff
|
Google Oneindia Kannada News

ಹುಡುಗಿಯರೇ, ಭಸ್ಮಾಸುರರಿದ್ದಾರೆ ಎಚ್ಚರಿಕೆ !
ನಗರಗಳ ಮಾತಿರಲಿ, ಹಳ್ಳಿಗಾಡುಗಳಲ್ಲೂ ಭಸ್ಮಾಸುರರ ಸಂಖ್ಯೆ ಹೆಚ್ಚುತ್ತಿದೆ. ನಿಮಗೆ ಪುರಾಣದ ಭಸ್ಮಾಸುರನ ಕಥೆ ಗೊತ್ತಾ ? ಅವನೊಬ್ಬ ರಾಕ್ಷಸ. ಅವನು ತಲೆಯ ಮೇಲೆ ಕೈಯಿಟ್ಟವರೆಲ್ಲ ಸುಟ್ಟು ಬೂದಿಯಾಗುತ್ತಿದ್ದರು. ಈ ಆಧುನಿಕ ಭಸ್ಮಾಸುರ ಕೂಡ ಸುಡುವ ಮಂದಿಯೇ. ಇವರ ಗುರಿ ಹುಡುಗಿಯರು ಮಾತ್ರ!!

  • ರಘು, ಬೆಂಗಳೂರು
Acid Attack on women is an alarming trend in Karnataka todayಶ್ರುತಿ ಎನ್ನುವ ಬೆಂಗಳೂರಿನ ಹುಡುಗಿಯ ನೆನಪಿದೆಯಾ ?

ವಿಕೃತ ಹುಡುಗನೊಬ್ಬನಿಂದ ಮುಖದ ತುಂಬ ಆ್ಯಸಿಡ್‌ ಸುರಿಸಿಕೊಂಡು ವಾರಗಟ್ಟಲೆ ಆಸ್ಪತ್ರೆಯಲ್ಲಿ ಒದ್ದಾಡಿದ ಜೀವ ಆಕೆಯದು. ಆಕೆಗೆ ದೃಷ್ಟಿ ಬರಿಸಲು ಡಾಕ್ಟರು ಸರ್ವಯತ್ನ ನಡೆಸಿದ ನಂತರ ಯಶಸ್ಸು ಕಂಡರು. ಹಲವು ಸುತ್ತಿನ ಸುರೂಪ ಚಿಕಿತ್ಸೆಯ ನಂತರ ಆಕೆಯ ಮುಖ ನೋಡುವ ಮಟ್ಟಕ್ಕೆ ಬಂದಿದೆ. ನೆರೆಮನೆ ಹುಡುಗಿಯಂಥ ಮುಗ್ಧ ಚೆಲುವೆ ಶ್ರುತಿಯ ದುರವಸ್ಥೆಗೆ ನಾಡಿಗೆ ನಾಡೇ ಮರುಗಿತ್ತು . ವಾರ ಪತ್ರಿಕೆಯಾಂದು ಬಡ ಕುಟುಂಬದ ಶ್ರುತಿಯ ಚಿಕಿತ್ಸೆಗೆ ನಿಧಿ ಸಂಗ್ರಹಿಸಿ ನೆರವಾಯಿತು.

ಶ್ರುತಿಯಂಥ ಹೆಣ್ಣು ಮಕ್ಕಳ ಸುದ್ದಿ ಆಗಾಗ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇರುತ್ತದೆ. ಈ ಹುಡುಗರಿಗೆ ಅದೇನಾಗುತ್ತದೋ ಏನೋ, ಇಂಥ ಹುಚ್ಚು ಕೆಲಸಗಳಿಗೆ ತೊಡಗುತ್ತವೆ. ಉಪೇಂದ್ರನ ಸ್ಟೈಲಿನಲ್ಲಿ ‘ಪ್ರೀತ್ಸೆ ಪ್ರೀತ್ಸೆ’ ಎಂದು ಬೆನ್ನು ಬೀಳುವ ಹುಡುಗರು- ಹುಡುಗಿ ನಿರಾಕರಿಸಿದರೆ ವ್ಯಗ್ರಗೊಳ್ಳುತ್ತವೆ. ಅಸಲಿಗೆ, ಪ್ರೀತಿಯೆಂಬುದು ಇವರಿಗೆ ಗೊತ್ತಿಲ್ಲದ ಗುಟ್ಟು . ಯಾವ ಪ್ರೀತಿ ತಾನೆ ಹಿಂಸೆಯನ್ನು ಒಪ್ಪಿಕೊಂಡೀತು ಹೇಳಿ? ಪ್ರೀತಿ ಶಾಂತಿಯೆಂಬ ತೋಟದಲ್ಲಿ ರೆಕ್ಕೆಬಿಚ್ಚುವ ಪಾರಿವಾಳ.

ನತದೃಷ್ಟ ಹೆಣ್ಣುಮಗಳು ಶ್ರುತಿ ನೆನಪಾಗಲಿಕ್ಕೆ ಕಾರಣ ಇಲ್ಲಿರುವ ಅಂಕಿಅಂಶಗಳು. ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲೆ ಆ್ಯಸಿಡ್‌ ದಾಳಿ ನಿಯತ ಗತಿಯಲ್ಲಿ ಸಾಗುತ್ತಿರುವ ಕುರಿತು ಈ ವರದಿ ಹೇಳುತ್ತಿದೆ. 1999ರಿಂದ ರಾಜ್ಯದಲ್ಲಿ ಆ್ಯಸಿಡ್‌ ಸುರಿಸಿಕೊಂಡ ಹೆಣ್ಣುಮಕ್ಕಳ ಸಂಖ್ಯೆ 22. ಇವಿಷ್ಟೂ ದಾಖಲಾಗಿರುವಂಥ ಅಧಿಕೃತ ಪ್ರಕರಣಗಳು. ದಾಖಲಾಗದ ಪ್ರಕರಣಗಳು ಅದೆಷ್ಟಿವೆಯಾ ?

ಅದೆಷ್ಟೊ ಅಮಾಯಕರು ಅನ್ಯಾಯವನ್ನು ಪ್ರತಿಭಟಿಸಲಿಕ್ಕೂ ಅಂಜುತ್ತಾರೆ. ಪೊಲೀಸ್‌ ಠಾಣೆಯ ಮೆಟ್ಟಿಲು ಹತ್ತುವುದೆಂದರೆ ಮಾನವನ್ನು ಬಯಲಲ್ಲಿ ಹರಾಜಿಟ್ಟಂತೆ ಎಂದು ನಂಬುವವರ ಸಂಖ್ಯೆ ದೊಡ್ಡದಿದೆ.

ಆಮ್ಲೀಯ ಪ್ರೇಮವಷ್ಟೇ ಅಲ್ಲ , ಕೌಟುಂಬಿಕ ಕಲಹಗಳು ಕೂಡ ಇಂಥ ದುರಂತಗಳಿಗೆ ನೆಪವಾಗುತ್ತವೆ. ಈ ಸಂದರ್ಭಗಳಲ್ಲೂ ದಾಳಿಗೆ ಗುರಿಯಾಗುವವರು ಹೆಣ್ಣುಮಕ್ಕಳೇನೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬದ ದಾಯಾದಿ ಕಲಹ ನಿಮಗೆ ನೆನಪಿರಬೇಕು; ಈ ದಾಯಾದಿ ಕಲಹದಲ್ಲಿ ವರಸೆಯಲ್ಲಿ ಮಗನಾಗಬೇಕಾದ ಹುಡುಗನಿಂದ ಮಾಜಿ ಪ್ರಧಾನಿಗಳ ಪತ್ನಿ ಚನ್ನಮ್ಮ ಆ್ಯಸಿಡ್‌ ದಾಳಿಗೊಳಗಾಗಿದ್ದರು. ಆಕೆಯ ಅದೃಷ್ಟ , ಗುರಿ ತಪ್ಪಿ ಆ್ಯಸಿಡ್‌ನ ಕೆಲವು ಹನಿಗಳಷ್ಟೇ ತಗುಲಿ ಚನ್ನಮ್ಮ ಅಪಾಯದಿಂದ ಪಾರಾದರು.

ಇಂಥ ವಿಕೃತ ಕೃತ್ಯಗಳನ್ನು ತಡೆಯುವುದಾದರೂ ಹೇಗೆ ? ಅಕರಾಳ ವಿಕರಾಳ ಸ್ಥಿತಿಯಲ್ಲಿ ಎಸಗಿದ ಈ ವಿಕೃತ ಕೃತ್ಯದ ಪರಿಣಾಮಗಳನ್ನು ಯುವ ಜನತೆಗೆ ಮನದಟ್ಟು ಮಾಡಿಸುವುದು, ಜನ ಜಾಗೃತಿ ಮೂಡಿಸುವುದು ಹೇಗೆ ? ಮಾಡುವವರು ಯಾರು ?

ನಾವು ಮಾಡುತ್ತೇವೆ ಎನ್ನುತ್ತಾರೆ ಬೆಂಗಳೂರನ್ನು ಕೇಂದ್ರವಾಗುಳ್ಳ- ‘ಮಹಿಳೆಯರ ಮೇಲಿನ ಆ್ಯಸಿಡ್‌ ದಾಳಿ ವಿರೋಧಿ ಆಂದೋಲನ’ದ ಕಾರ್ಯಕರ್ತೆಯರು. ಈ ಆಂದೋಲನದಲ್ಲಿ ಕಲಿತ ಹುಡುಗಿಯರಿದ್ದಾರೆ, ಎನ್‌ಸಿಸಿ ಕೆಡೆಟ್‌ಗಳಿದ್ದಾರೆ, ಮಹಿಳಾ ಜಾಗೃತಿಯ ಕಾರ್ಯಕರ್ತರಿದ್ದಾರೆ.

ಮಹಿಳೆಯರ ಮೇಲೆ ನಡೆಯುತ್ತಿರುವ ಅಸಂಖ್ಯ ದೌರ್ಜನ್ಯಗಳಲ್ಲಿ , ಆ್ಯಸಿಡ್‌ ಎರಚುವುದು ಮತ್ತೊಂದು ದೌರ್ಜನ್ಯ ಅಷ್ಟೇ. ಜಾತಿ, ಧರ್ಮ, ವೃತ್ತಿ , ಪ್ರವೃತ್ತಿ ಯಾವುದರ ಭೇದವೂ ಇಲ್ಲದೆ ಮಹಿಳೆ ಈ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾಳೆ ಎಂದು ‘ಮಹಿಳೆಯರ ಮೇಲಿನ ಆ್ಯಸಿಡ್‌ ದಾಳಿ ವಿರೋಧಿ ಆಂದೋಲನ’ದ ಕಾರ್ಯಕರ್ತರು ನಿಟ್ಟುಸಿರಿಡುತ್ತಾರೆ.

ಈ ಕಾರ್ಯಕರ್ತರ ಗುರಿಯಾದರೂ ಏನು ?

ನಾವು ಆ್ಯಸಿಡ್‌ ದಾಳಿಯನ್ನು ನಿರ್ಮೂಲಗೊಳಿಸಲು ಪ್ರಯತ್ನಿಸುತ್ತೇವೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ನಮ್ಮ ಕೆಲಸ. ಆ್ಯಸಿಡ್‌ ಎರಚುವುದರಿಂದ ಹಲವರು ದೃಷ್ಟಿ ಕಳಕೊಳ್ಳುತ್ತಾರೆ. ಕೆಲವರಿಗೆ ಕಿವುಡು ಉಂಟಾಗುತ್ತದೆ. ವಿರೂಪ ಉಂಟಾಗುತ್ತದೆ. ಇವುಗಳಿಗೆ ಚಿಕಿತ್ಸೆ ನೀಡುವುದು ಲಕ್ಷಾಂತರ ರುಪಾಯಿಯ ಖರ್ಚಿನ ಬಾಬತ್ತು . ಇವೆಲ್ಲ ದುಷ್ಪರಿಣಾಮಗಳನ್ನು ನಾವು ಯುವ ಜನತೆಗೆ ತಿಳಿಸಿ ಹೇಳುತ್ತೇವೆ ಎನ್ನುತ್ತಾರೆ ಆಂದೋಲನದ ಮಂದಿ.

ಆ್ಯಸಿಡ್‌ ದಾಳಿಗೆ ತುತ್ತಾದ ಹಲವು ಹೆಣ್ಣುಮಕ್ಕಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದಿರುವ ಉದಾಹರಣೆಗಳು ನಮ್ಮ ಮುಂದಿವೆ. ಹೊನ್ನಾವರದ ನಾಗಮ್ಮ ಎನ್ನುವ ಹೆಣ್ಣುಮಗಳು ಸಕಾಲಕ್ಕೆ ಚಿಕಿತ್ಸೆ ದೊರಕದೆ ಸಾವಿಗೀಡಾದ ದುರಂತ ಇನ್ನೂ ಹಸಿಹಸಿಯಾಗಿದೆ.

ಮೊನ್ನೆಯಷ್ಟೇ, ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ - ‘ಮಹಿಳೆಯರ ಮೇಲಿನ ಆ್ಯಸಿಡ್‌ ದಾಳಿ ವಿರೋಧಿ ಆಂದೋಲನ’ದ ಹುಡುಗಿಯರು ಮಾನವ ಸರಪಳಿ ರಚಿಸುವ ಮೂಲಕ ಜನರ ಗಮನ ಸೆಳೆದರು. ಈ ಆಂದೋಲನ ಅವರಿಗಷ್ಟೇ ಸೀಮಿತವಾಗಬಾರದು. ನಾವು ನೀವೆಲ್ಲ ಈ ಜಾಗೃತಿ ಕಾಯಕದಲ್ಲಿ ಕೈಗೂಡಿಸಬೇಕು. ಅಮ್ಮ ಅಕ್ಕ ತಂಗಿ ಹೆಂಡತಿ ಗೆಳತಿ ಯಾರಿಗೆ ಬೇಡ ಹೇಳಿ ? ಆಕೆ ಮುಖ ಸುಟ್ಟುಕೊಳ್ಳುವಂತಾದರೆ, ಆಕೆಯ ಒಂದಂಗ ಊನವಾದರೆ ಅದು ಗಂಡು ಕುಲಕ್ಕಷ್ಟೇ ಅಲ್ಲ ; ಮನುಷ್ಯತ್ವಕ್ಕೇ ಅಪಮಾನ. ಭಸ್ಮಾಸುರರ ಗುಂಪಿಗೆ ಧಿಕ್ಕಾರವಿರಲಿ.

‘ಮಹಿಳೆಯರ ಮೇಲಿನ ಆ್ಯಸಿಡ್‌ ದಾಳಿ ವಿರೋಧಿ ಆಂದೋಲನ’ದ ಸಂಪರ್ಕ ಇ-ವಿಳಾಸ : [email protected]

ಇದು ಇನ್ನೊಂದು ಕಣ್ಣೀರ ಕಥೆ :
Tara ಈ ನತದೃಷ್ಟ ಹೆಣ್ಣುಮಗಳ ಹೆಸರು ತಾರಾ. ಸಹ ಶಿಕ್ಷಕರಿಂದ ಆ್ಯಸಿಡ್‌ ದಾಳಿಗೆ ತುತ್ತಾದ ಇಳಕಲ್‌ನ ಶಿಕ್ಷಕಿ. ಎರಡು ಮಕ್ಕಳ ತಾಯಿ ತಾರಾ ಈಗ ಮುಖ ಸುಡಿಸಿಕೊಂಡು, ದೃಷ್ಟಿ ಇಂಗಿಸಿಕೊಂಡು- ‘ಮಕ್ಕಳಿಗೋಸ್ಕರ ನಾನು ಬದುಕಬೇಕು’ ಎಂದು ಬೆಂಗಳೂರಿನ ಆಸ್ಪತ್ರೆಯಾಂದರಲ್ಲಿ ಜೀವ ಹಿಡಿಯಾಗಿಸಿಕೊಂಡು ನರಳುತ್ತಿದ್ದಾಳೆ; ಚಿಕಿತ್ಸೆಗಾಗಿ ನೆರವಿನ ನಿರೀಕ್ಷೆಯಲ್ಲಿದ್ದಾಳೆ. ‘ಇನ್ನು ಅಳುವಂತಿಲ್ಲ ’ ಎಂದು ವೈದ್ಯವೃಂದ ಅಪ್ಪಣೆ ಮಾಡಿದೆ. ಆದರೆ ಆಕೆಯ ಕಣ್ಣೀರ ಕಥೆಗೆ ಕೊನೆಯೆಲ್ಲಿ ? ಈ ಕಣ್ಣೀರ ಕಥೆಯನ್ನು ರವಿ ಬೆಳಗೆರೆ ಬರೆಯುತ್ತಿದ್ದಾರೆ..... ನಿರೀಕ್ಷಿಸಿ !

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X