• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಪಾಳುಬಿದ್ದಿದೆ ಕುವೆಂಪು ಭವನ, ನೋಡು ಬಾ ಓ ಕನ್ನಡಿಗ’

By Staff
|

‘ಪಾಳುಬಿದ್ದಿದೆ ಕುವೆಂಪು ಭವನ, ನೋಡು ಬಾ ಓ ಕನ್ನಡಿಗ’

ಹಿರೇಕೂಡಿಗೆಯಲ್ಲಿ ಪಾಳುಬಿದ್ದಿಹುದು ಕುವೆಂಪು ಭವನ, ಗಂಗಾವತಿಯಲ್ಲಿ ಕವಿ ಕಾರ್ಯಕ್ರಮಕ್ಕೆ ಬರದ ಜನ ; ಯುಗದ ಕವಿಗೆ ಜಗದ ಕವಿಗೆ ರಾಮಾಯಣ ದರ್ಶನದಿಂದಲೇ ಕೈಮುಗಿದ ವಿಶ್ವಕುಟುಂಬಿ ರಸಋಷಿಗೆ ತೋರುವ ಗೌರವ ಇದೇನಾ?

  • ದಟ್ಸ್‌ಕನ್ನಡ ಬ್ಯೂರೊ

ಒಂದೆಡೆ ಕುವೆಂಪು ಶತಮಾನೋತ್ಸವ, ಇನ್ನೊಂದೆಡೆ ಕುವೆಂಪು ಭವನದ ದುಸ್ಥಿತಿ!

ಕುವೆಂಪು ಅವರ ಜನ್ಮ ಶತಮಾನೋತ್ಸವ ಆಚರಣೆಗೆ ಚಾಲನೆ ದೊರೆತಿರುವ ಸಂದರ್ಭದಲ್ಲಿ ಹೊರಬಿದ್ದಿರುವ ವಿರೋಧಾಭಾಸದ ಸಂಗತಿಯಿದು. ವಿಷಯ ಇಷ್ಟು :

ಮಲೆನಾಡಿನ ಕೊಪ್ಪ ತಾಲ್ಲೂಕಿನ ಹಿರೇಕೂಡಿಗೆ ಎಂಬುದೊಂದು ಗ್ರಾಮ. ಕುವೆಂಪು ಹುಟ್ಟಿಬೆಳೆದ ಸ್ಥಳವಿದು. ಇಲ್ಲಿ ಕುವೆಂಪು ಸಂದೇಶ ಭವನ ಎನ್ನುವ ಕಟ್ಟಡವೊಂದಿದೆ. ಹೆಸರೇ ಹೇಳುವಂತೆ ರಸಋಷಿ ಕುವೆಂಪು ಅವರ ಸಂದೇಶವನ್ನು ಬಿತ್ತರಿಸುವುದು ಈ ಸ್ಮಾರಕದ ಉದ್ದೇಶ. ದಶಕಗಳ ಹಿಂದೆ ರಾಜ್ಯ ಸರ್ಕಾರ ನಿರ್ಮಿಸಿ, ಮರೆತ ಈ ಕಟ್ಟಡ ಈಗ ಪಾಳುಬಿದ್ದಿದೆ.

ಕುವೆಂಪು ಸಂದೇಶ ಭವನದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಖಾಸಗಿ ಭೂಮಿಯನ್ನು ವಶಪಡಿಸಿಕೊಂಡಿದೆ. ಕುವೆಂಪು ಅವರ ಅಮೃತಶಿಲೆ ವಿಗ್ರಹವೊಂದನ್ನು ಇಲ್ಲಿ ಸ್ಥಾಪಿಸಲಾಗಿದೆ. ಸನಿಹದಲ್ಲೇ ಗ್ರಂಥಾಲಯವೂ ಇದೆ. ಆದರೆ, ಇದರಿಂದ ಯಾರಿಗೆ ಉಪಯೋಗ ? ಕುವೆಂಪು ಸಂದೇಶ ಭವನವೆಂಬುದು ಧೂಳಿನ ಉಗ್ರಾಣ. ಗ್ರಂಥಾಲಯವಂತೂ ಹೇಳುವವರಿಲ್ಲದ ಕೇಳುವವರಿಲ್ಲದ ಗತ-ಆಲಯ. ಭವನದ ಸಂದೇಶಕ್ಕೆ ಕಿವಿಗೊಡುವವರ ಮಾತುಬಿಡಿ; ಗ್ರಂಥಾಲಯದ ಅನುಕೂಲ ಪಡೆಯುವ ಆಸಕ್ತಿಯೂ ಯಾರಿಗೂ ಇದ್ದಂತಿಲ್ಲ .

ಸ್ಥಳೀಯ ಗ್ರಾಮ ಪಂಚಾಯಿತಿ ಕುವೆಂಪು ಸಂದೇಶ ಭವನದ ನಿರ್ವಹಣೆಯ ಉಸ್ತುವಾರಿಗಾಗಿ ಪ್ರತಿ ತಿಂಗಳು 100 ರುಪಾಯಿಯನ್ನು ಮೀಸಲಿಟ್ಟಿದೆ. ಆದರೆ, ನಿರ್ವಹಣೆ ಮಾತ್ರ ಪುಸ್ತಕದ ಲೆಕ್ಕಕ್ಕೇ ಸೀಮಿತವಾದಂತಿದೆ. ಮೊನ್ನೆ , ಕುವೆಂಪು ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಕಟ್ಟಡದಲ್ಲೂ ಚಟುವಟಿಕೆಗಳು ಕಾಣಿಸಿಕೊಂಡವು. ಸುಣ್ಣಬಣ್ಣ ಮಾಡಿಸಿಕೊಂಡ ಕಟ್ಟಡದಲ್ಲಿನ ಚಟುವಟಿಕೆಗಳು ಒಂದು ದಿನಕ್ಕೆ ಮಾತ್ರ ಸೀಮಿತವಾದವು. ಏನೀ ವಿಧಿ ವಿಪರೀತ ?

ಹಿರೇಕೂಡಿಗೆಯಲ್ಲಿ ಕುವೆಂಪು ಸಂದೇಶ ಭವನ ಹಾಗೂ ಗ್ರಂಥಾಲಯದ ದುಸ್ಥಿತಿಗೆ ಯಾರನ್ನು ದೂಷಿಸುವುದು ? ಸರ್ಕಾರ, ಸ್ಥಳೀಯ ಆಡಳಿತ ಮಾತ್ರವಲ್ಲದೆ, ಜನತೆ ಕೂಡ ಆರೋಪಿಗಳ ಕಟಕಟೆಯಲ್ಲಿ ನಿಲ್ಲುತ್ತಾರೆ. ಅಸಲಿಗೆ, ಗ್ರಂಥಾಲಯ ಸ್ಥಾಪಿಸಿರುವ ಸ್ಥಳವೇ ಸರಿಯಾಗಿಲ್ಲ ಎನ್ನುತ್ತಾರೆ ಸ್ಥಳೀಯರು. ಹಿರೇಕೂಡಿಗೆ ಬದಲು ಗಾಡಿಕಲ್‌ನಲ್ಲಿ ಗ್ರಂಥಾಲಯವಿದ್ದರೆ ಒಳಿತು ಎನ್ನುವ ಅಭಿಪ್ರಾಯವಿದೆ. ಹಿರೇಕೂಡಿಗೆ ಹಾಗೂ ಕುವೆಂಪು ತವರು ಕುಪ್ಪಳ್ಳಿಯ ನಡುವಿನ ಗಾಡಿಕಲ್‌ ಜನರಿಗೆ ಒಂದುರೀತಿಯಲ್ಲಿ ಜುಗಾರಿ ಕ್ರಾಸ್‌! ಆದರೆ, ನೀತಿಸಂಹಿತೆ ರೂಪಿಸುವ ಪ್ರಭುಗಳಿಗೆ ಈ ತರ್ಕಬದ್ಧ ಪಾಯಿಂಟು ಅರ್ಥವಾಗುವುದಿಲ್ಲ ?

‘ಸಾಯುತಿದೆ ನಿಮ್ಮ ನುಡಿ ಓ ಕನ್ನಡಿಗ.....’ ಎಂದು ಕುವೆಂಪು ಕವಿತೆ ಬರೆದಿದ್ದರು. ಆ ಕವಿತೆಯನ್ನೀಗ- ‘ಪಾಳುಬಿದ್ದಿದೆ ಕುವೆಂಪು ಭವನ, ಓ ಕನ್ನಡಿಗ’ ಎಂದು ಹಾಡಬಹುದಲ್ಲವೇ ?

ಗಂಗಾವತಿಯಲ್ಲಿ ಜನರು ಬರಲಿಲ್ಲ !

ಹಿರೇಕೂಡಿಗೆಯದು ನಿರ್ಲಕ್ಷ್ಯದ ಕಥೆಯಾದರೆ, ಗಂಗಾವತಿಯದು ಉದಾಸೀನದ ವ್ಯಥೆ. ಮೊನ್ನೆ , ಗಂಗಾವತಿಯ ತಾಲ್ಲೂಕು ಆಡಳಿತ ಕುವೆಂಪು ಅವರ ಶತಮಾನೋತ್ಸವ ಕಾರ್ಯಕ್ರಮ ಏರ್ಪಡಿಸಿತ್ತು . ಆದರೆ, ಕಾರ್ಯಕ್ರಮದಲ್ಲಿ ಹಾಜರಿದ್ದುದು ಮಾತ್ರ ಕೆಲವೇ ಕೆಲವು ಮಂದಿ. ನಾಡ ಉತ್ಸವವಾಗಬೇಕಿದ್ದ ರಾಷ್ಟ್ರಕವಿಯ ಜನ್ಮ ಶತಮಾನೋತ್ಸವಕ್ಕೆ ಜನರ ಈ ಪಾಟಿ ನಿರುತ್ಸಾಹವೇ !

ಇದರಲ್ಲಿ ಜನರ ತಪ್ಪೇನೂ ಇಲ್ಲ ಎನ್ನುತ್ತದೆ ಗಂಗಾವತಿಯ ಸಾಂಸ್ಕೃತಿಕ ಜಗತ್ತು . ಕಾರ್ಯಕ್ರಮ ನಡೆಯುತ್ತದೆಂದು ಅನೇಕರಿಗೆ ಗೊತ್ತೇ ಇರಲಿಲ್ಲ . ಪ್ರಚಾರ ನೀಡುವ ಬಗ್ಗೆ ತಾಲ್ಲೂಕು ಆಡಳಿತ ತಲೆ ಕೆಡಿಸಿಕೊಳ್ಳಲೇ ಇಲ್ಲ . ಇನ್ನು ಕಾರ್ಯಕ್ರಮದಲ್ಲಿ ಕೂಡ ಅವ್ಯವಸ್ಥೆಗಳಿದ್ದವು. ಕಾರ್ಯಕ್ರಮ ಶುರುವಾದುದ್ದೇ ಅರ್ಧ ತಾಸು ತಡವಾಗಿ. ಆಹ್ವಾನ ಪತ್ರಿಕೆಯಲ್ಲಿದ್ದ ಗಣ್ಯರು ಕೂಡ ಕಾರ್ಯಕ್ರಮಕ್ಕೆ ತಪ್ಪಿಸಿಕೊಂಡಿದ್ದರು. ಹೀಗಿರುವಾಗ ಜನರದೇನು ತಪ್ಪು ?

ಅಂದಹಾಗೆ, ಗಂಗಾವತಿಯಲ್ಲಿ ನಡೆದ ಕುವೆಂಪು ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಯಾರು ಯಾರೆಂದರೆ : ವಿಧಾನ ಪರಿಷತ್‌ ಸದಸ್ಯ ಎಚ್‌.ಆರ್‌.ಶ್ರೀನಾಥ್‌ ಹಾಗೂ ತಾಲ್ಲೂಕು ಪಂಚಾಯತ್‌ ಅಧ್ಯಕ್ಷ ತಮ್ಮಣ್ಣಿ ಅಪ್ಪನವರ್‌ ವೇದಿಕೆಯ ಮೇಲಿದ್ದರು. ಸಭಿಕರ ಸಾಲಿನಲ್ಲಿ ಕುಳಿತಿದ್ದುದು ಕಂದಾಯ ಇಲಾಖೆಯ ನೌಕರರು ಮಾತ್ರ! ಆ ನೌಕರರ ಸಂಖ್ಯೆ ಬರೋಬ್ಬರಿ 12.

ಬೆಥೆಲ್‌ ಇಂಗ್ಲಿಷು ಶಾಲೆಯ ಮಕ್ಕಳು ಕುವೆಂಪು ವಿರಚಿತ ನಾಡಗೀತೆಯನ್ನು ಹಾಡಲಿಕ್ಕಾಗಿ ಕಾರ್ಯಕ್ರಮಕ್ಕೆ ಬಂದಿದ್ದರು. ಸಾಕಷ್ಟು ಕಾಲ ಕಾದ ನಂತರ ನಾಡಗೀತೆ ಹಾಡಿದ ಮಕ್ಕಳು, ತಮ್ಮ ಪಾಡಿಗೆ ತಾವು ಮನೆಗೆ ಹೋದರು. ಅವರು ಇಂಗ್ಲಿಷು ಶಾಲೆಯ ಮಕ್ಕಳು ; ಕುವೆಂಪು ಅವರನ್ನು ಕಟ್ಟಿಕೊಂಡು ಏನು ಮಾಡಿಯಾರು ? ಕುವೆಂಪು ಅವರೇನಾದರೂ ಬದುಕಿದ್ದು, ಈ ಕಾರ್ಯಕ್ರಮ ನೋಡಿದ್ದರೆ ಹೀಗೆ ಬರೆಯುತ್ತಿದ್ದರಾ -

ಓ ನನ್ನ ಚೇತನಾ

ಆಗು ನೀ ಅನಿಕೇತನ

ಎಲ್ಲಿಯೂ ನೀ ನಿಲ್ಲದಿರು

ಮನೆಯನೆಂದು ಕಟ್ಟದಿರು

ಜನ್ಮ ಶತಮಾನೋತ್ಸವ ಕಾರ್ಯಕ್ರಮ ಮಾಡದಿರು....

*

ಯುಗದ ಕವಿ ಜಗದ ಕವಿ ಮನುಕುಲದ ಕವಿಗೆ ನಾವು ತೋರುವ ಗೌರವ ಇದೇನಾ ? ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

Post your views

ಪೂರಕ ಓದಿಗೆ-

ಮಲೆನಾಡಿನ ರಸಋಷಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more