• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೆಲುವ ಕನ್ನಡನಾಡು-2003: ರಾಜಕಾರಣ, ಜನ, ಇತ್ಯಾದಿ..

By Staff
|

ಚೆಲುವ ಕನ್ನಡನಾಡು-2003: ರಾಜಕಾರಣ, ಜನ, ಇತ್ಯಾದಿ..
ಇದು 2003ನೇ ಇಸವಿಯ, ಕರ್ನಾಟಕದಲ್ಲಿ ನಡೆದ ಘಟನೆಗಳ ಡೈರಿಯಲ್ಲ ; ಜನಮನದ ಮೇಲೆ ಪ್ರಭಾವ ಬೀರಿದ ಪ್ರಮುಖ ಘಟನೆಗಳ ಟಿಪ್ಪಣಿ.

 • ದಟ್ಸ್‌ಕನ್ನಡ ಬ್ಯೂರೊ
ಒಂದು, 30 ಸಾವಿರ ಕೋಟಿ ರುಪಾಯಿಯ ಹಗರಣ; ಇನ್ನೊಂದು ಬೆಂಗಳೂರಿನಲ್ಲಿನ ಶಾಸಕರ ಭವನಕ್ಕೆ ಬಾಂಬಿಟ್ಟ ಪ್ರಕರಣ; ಎತ್ತಲಿಂದ ನೋಡಿದರೂ ಇವೆರಡು ಘಟನೆಗಳು- ಈಗಷ್ಟೇ ಇತಿಹಾಸದ ಪುಟಗಳನ್ನು ಸೇರಿರುವ 2003ನೇ ಇಸವಿಯ ಕರ್ನಾಟಕದಲ್ಲಿ ಕಣ್ಣಿಗೆ ರಾಚುವಂತೆ ಕಾಣುತ್ತವೆ.

ಕಳೆದ ಮೂರ್ನಾಲ್ಕು ವರ್ಷಗಳ ಬರ ಈ ಬಾರಿಯೂ ಚಾಲ್ತಿಯಲ್ಲಿತ್ತು . ರಾಜಕೀಯ ಪಕ್ಷಗಳ ದೊಂಬರಾಟ ಈ ವರ್ಷವೂ ಮುಂದುವರೆದೂ ಹೊಸ ವರ್ಷಕ್ಕೂ ಕಾಲಿಟ್ಟಿತು. ಸಾಲು ಸಾಲು ರೈತರು ಬರದಿಂದ ನೇಣಿಗೆ-ಪಾಷಾಣಕ್ಕೆ ಶರಣಾದರು. ಯಥಾಪ್ರಕಾರ ಹೊಸೂರು ರಸ್ತೆಯಲ್ಲಿ ಮಾಹಿತಿ ತಂತ್ರಜ್ಞಾನದ ಧಣಿಗಳು ಫ್ಲೈಓವರ್‌ ಮೂಲಕ ಪ್ರಯಾಣ ಮುಂದುವರಿಸಿದರು. ಕುದುರೆಮುಖದ ಕಾಡಿನಲ್ಲಿ ನಕ್ಸಲೀಯರು ಸುಳಿದರು. ದಕ್ಷಿಣಕನ್ನಡದ ಮನೆಯಾಂದರಲ್ಲಿ ಇಬ್ಬರು ಯುವತಿಯರನ್ನು ನಕ್ಸಲರೆಂದು ಶಂಕಿಸಿ ಗುಂಡಿಟ್ಟು ಕೊಲ್ಲಲಾಯಿತು. ಬಾಬಾಬುಡನ್‌ ಗಿರಿಯಲ್ಲಿ ದತ್ತಾತ್ರೇಯ ಜಯಂತಿ ಹೆಸರಲ್ಲಿ ಅಲ್ಪಸಂಖ್ಯಾತರ ಎದೆಯಲ್ಲಿ ಭಯವನ್ನು ಬಿತ್ತಲಾಯಿತು. ಹಳ್ಳಿ ಹೆಣ್ಣುಮಕ್ಕಳು ಚಿಂದಿಯುಡುತ್ತಿರುವ ಸಂದರ್ಭದಲ್ಲೇ, ಬೆಂಗಳೂರಿನ ಬೀದಿಬೀದಿಗಳ ತುಂಬ ತಾನುತಾನು ಬಟ್ಟೆಯ ಕೇಸರಿಧ್ವಜ-ಬ್ಯಾನರ್‌ಗಳು ಕಾಣಿಸಿಕೊಂಡ ತಿಪ್ಪೆ ಸೇರಿದವು. ಇದಪ್ಪಾ 2003ರ ಕರ್ನಾಟಕ ! ಬೀದಿ ನಾಟಕದ ಪ್ರಸಂಗಗಳಂತೆ ಇದೆಯಲ್ಲವೆ ?

ನಕಲಿ ಇಲ್ಲಿ ಎಲ್ಲಾ ನಕಲಿ !

ದೇಶವನ್ನೇ ಬೆಚ್ಚಿ ಬೀಳಿಸಿದ ಮೂವತ್ತು ಸಾವಿರ ಕೋಟಿ ರುಪಾಯಿಗಳ ಸ್ಟಾಂಪ್‌ ಪೇಪರ್‌ ಹಗರಣದ ಮೂಲ ಕರ್ನಾಟಕ ಎನ್ನುವ ವಿಷಯ ಸಜ್ಜನರನ್ನು ಬೆಚ್ಚಿಬೀಳಿಸಿದ ವರ್ಷ 2003. ಸ್ಟಾಂಪ್‌ ಇನ್‌ವೆಸ್ಟಿಗೇಷನ್‌ ದಳದ (ಸ್ಟಾಂಪಿಟ್‌) ಮುಖ್ಯಸ್ಥ ಶ್ರೀಕುಮಾರ್‌ ಪ್ರಕಾರ- ಈವರೆಗೆ 70ಕ್ಕೂ ಹೆಚ್ಚು ಮಂದಿಯನ್ನು ಪ್ರಕರಣ ಸಂಬಂಧದಲ್ಲಿ ಗುರ್ತಿಸಲಾಗಿದೆ, ಈ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೂ ಇದೆ.

ಛಾಪಾ ಪಾಪದ ತನಿಖೆಗಾಗಿ ನ್ಯಾಯಮೂರ್ತಿ ಎ.ಟಿ.ಮನೋಳಿ ಅವರ ನೇತೃತ್ವದಲ್ಲಿ ವಿಶೇಷ ನ್ಯಾಯಾಲಯವನ್ನು ಕರ್ನಾಟಕ ಸರ್ಕಾರ ನೇಮಿಸಿದೆ. ಪ್ರತಿಪಕ್ಷ ಹಾಗೂ ಕೇಂದ್ರದ ಒತ್ತಡಕ್ಕೆ ಮಣಿದಿರುವ ಸರ್ಕಾರ, ಮೊನ್ನೆಯಷ್ಟೇ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದೆ.

ಪ್ರಕರಣದ ಪ್ರಮುಖ ಆರೋಪಿ ಕರೀ ಲಾಲ ತೆಲಗಿ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಪ್ರಕರಣಕ್ಕೆ ತಿರುವು ನೀಡುತ್ತಿದ್ದಾನೆ. ತೆಲಗಿಗೆ ಎಚ್‌ಐವಿ ಸೋಂಕು ಅಂಟಿಕೊಂಡಿದೆ. ಈ ಸೋಂಕನ್ನು ಜೈಲಿನ ಅಧಿಕಾರಿಗಳು ತಗುಲಿಸಿದ್ದಾರೆ ಎಂದು ತೆಲಗಿಯ ವಕೀಲರು ಆಪಾದಿಸಿದ್ದಾರೆ. ಈ ನಡುವೆ ಪ್ರಕರಣದ ಸಾಕ್ಷ್ಯಗಳ ನಾಶ ನಡೆದಿದೆ ಎನ್ನುವ ಆರೋಪವೂ ಕೇಳಿಬಂದಿದೆ. ಇಷ್ಟೆಲ್ಲಾ ಆದರೂ, ಸೋದರ ರೆಹನ್‌ಬೇಗ್‌ ಪೊಲೀಸರ ವಶದಲ್ಲಿದ್ದರೂ- ಸಚಿವ ರೋಷನ್‌ ಬೇಗ್‌ ಮೀಸೆ ಮಣ್ಣಾಗಿಲ್ಲ ಎನ್ನುತ್ತಿದ್ದಾರೆ.

ನಕ್ಸಲರು ಬಂದರು ನಕ್ಸಲರು

ಕುದುರೆಮುಖ ಕಾಡಿನಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎನ್ನುವ ಸುದ್ದಿಯಿಂದ ಸರ್ಕಾರ ತಲ್ಲಣಗೊಂಡಿತು. ಇಬ್ಬರು ನಕ್ಸಲ್‌ ಯುವತಿಯರನ್ನು ಪೊಲೀಸರು ದಕ್ಷಿಣಕನ್ನಡದಲ್ಲಿ ಗುಂಡಿಟ್ಟು ಕೊಂದರು. ನಕ್ಸಲರ ನಿರ್ಮೂಲನಕ್ಕಾಗಿ ರಾಜ್ಯ ಸರ್ಕಾರ ವಿಶೇಷ ಪ್ರಹಾರಪಡೆಯನ್ನು ರಚಿಸಿದೆ. ಅಂತೆಯೇ, ನಕ್ಸಲರ ಹೆಜ್ಜೆಗುರುತುಗಳಿರುವ ಉಡುಪಿ, ದಕ್ಷಿಣಕನ್ನಡ ಚಿಕ್ಕಮಗಳೂರು ಜಿಲ್ಲೆಗಳ ಅಭಿವೃದ್ಧಿಗಾಗಿ 60 ಕೋಟಿ ರುಪಾಯಿಗಳ ವಿಶೇಷ ಪ್ಯಾಕೇಜ್‌ ನೀಡಲು ಸರ್ಕಾರ ನಿರ್ಧರಿಸಿದ್ದು 2003ರಲ್ಲಿಯೇ.

ಬರ ಬರ !

ಬರಗಾಲದ ಹ್ಯಾಟ್ರಿಕ್‌ ವರ್ಷವಿದು. ಕೇಂದ್ರ ಸರ್ಕಾರ ಬರ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎನ್ನುವ ರಾಜ್ಯ ಸರ್ಕಾರದ ರಾಗ ಈ ಬಾರಿಯೂ ಮುಂದುವರಿಯಿತು. ಬರದಿಂದಾಗಿ ರೈತರು ಪ್ರತಿನಿತ್ಯ ಆತ್ಮಹತ್ಯೆ ಮಾಡಿಕೊಳ್ಳತೊಡಗಿದ್ದು ಮುಖ್ಯಮಂತ್ರಿ ಕೃಷ್ಣ ಅವರ ನಿದ್ದೆಗೆಡಿಸಿತು. ರೈತರಿಗಾಗಿ 680 ಕೋಟಿ ರುಪಾಯಿಗಳ ವಿಶೇಷ ಪ್ಯಾಕೇಜನ್ನು ಪ್ರಕಟಿಸಿದ ಕೃಷ್ಣ , ಮಾಹಿತಿ ತಂತ್ರಜ್ಞಾನದ ಗುಂಗಿನಿಂದ ಹೊರಬಂದವರಂತೆ ಕಂಡರು. ವರ್ಷದ ಕೊನೆಗೆ ರೈತರ ಆತ್ಮಹತ್ಯೆ ಪ್ರಕರಣಗಳು ಹದ್ದಿಗೆ ಬಂದಿರುವುದು ಸಮಾಧಾನ.

ನೂರ್‌ ಎಂಬ ಗುಲಾಬಿ !

ಸಾವುನೋವು ಕೋಮುಗಲಭೆ ಮುಂತಾದ ಕಹಿ ಪ್ರಕರಣಗಳ ನಡುವೆ ಮಾನವೀಯತೆಯ ಒರತೆಯ ಮೀಟಿದ ಪುಟಾಣಿಯ ಹೆಸರು ನೂರ್‌ ಫಾತಿಮಾ. ಪಾಕಿಸ್ತಾನದ ಪುಟಾಣಿ ನೂರ್‌, ತನ್ನ ಹೃದಯ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಾಗ ಕನ್ನಡಿಗರು ಅತೀವ ಔದಾರ್ಯ ತೋರಿದರು. ನೂರ್‌ಗೆ ಚಿಕಿತ್ಸೆ ನೀಡಿದ ಬೆಂಗಳೂರಿನ ನಾರಾಯಣ ಹೃದಯಾಲಯ ರಾಷ್ಟ್ರವ್ಯಾಪಿ ಪ್ರಚಾರ ಪಡೆಯಿತು. ನೂರ್‌ಳ ನಂತರ ಅನೇಕ ಪಾಕಿ ಪುಟಾಣಿಗಳು ಬೆಂಗಳೂರಿಗೆ ಚಿಕಿತ್ಸೆಗೆ ಬರುವಂತಾಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ವೈದ್ಯಕೀಯ ಸವಲತ್ತುಗಳ ಕೇಂದ್ರವಾಗಿ ಗುರ್ತಿಸಿಕೊಂಡಿದ್ದು 2003ರ ವಿಶೇಷ.

ಕಾಪಾಡು ದತ್ತಾತ್ರೇಯ...

ದತ್ತಭಕ್ತರಿಂದಾಗಿ ಬಾಬಾ ಬುಡನ್‌ಗಿರಿ 2003ರಲ್ಲಿಯೂ ರಂಗೇರಿತು. ಕರ್ನಾಟಕವನ್ನು ಮತ್ತೊಂದು ಗುಜರಾತ್‌ ಮಾಡುತ್ತೇವೆಂದು ಭಜರಂಗಿಗಳು ಹಾಗೂ ವಿಶ್ವಹಿಂದೂ ಪರಿಷತ್‌ನ ಮುಖಂಡರು ಬಹಿರಂಗಿವಾಗಿಯೇ ಕೂಗಾಡಿದರು. ಇದೇ ವೇಳೆಯಲ್ಲಿ , ಗಿರೀಶ್‌ ಕಾರ್ನಾಡರ ನೇತೃತ್ವದಲ್ಲಿ ಪ್ರಗತಿಪರರು ಕೋಮು ವಿರೋಧಿ ಚಳವಳಿ ನಡೆಸಿದರು. ಸಾವಿರಾರು ಪ್ರಗತಿಪರರನ್ನು ಬಂಧಿಸುವ ಮೂಲಕ ಹಾಗೂ ದತ್ತ ಜಯಂತಿಗೆ ಅವಕಾಶ ಕಲ್ಪಿಸುವ ಮೂಲಕ ಸರ್ಕಾರ ಬುದ್ಧಿಜೀವಿಗಳ-ಜಾತ್ಯತೀತರ ಕೋಪಕ್ಕೆ ತುತ್ತಾಯಿತು.

ವೀರಪ್ಪನ್‌ ಸಿಗಲಿಲ್ಲ

ನರಹಂತಕ ವೀರಪ್ಪನ್‌ನನ್ನು ಸುತ್ತುವರೆಯಲಾಗಿದೆ. ಆತನನ್ನು ಇನ್ನೇನು ಹಿಡಿಯಲಾಯಿತು ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅನೇಕ ಬಾರಿ ಹೇಳಿದರೂ, ವೀರಪ್ಪನ್‌ ಪೊಲೀಸರ ಕಣ್ಣಿಗೂ ಬಿದ್ದಿಲ್ಲ . ಮಲೆ ಮಹದೇಶ್ವರ ಕಾಡಿನಲ್ಲಿ ವೀರಪ್ಪನ್‌ ಓಡಾಡಿಕೊಂಡೇ ಇದ್ದಾನೆ. ವೀರಪ್ಪನ್‌ ಸೆರೆಗೆ ಇಸ್ರೇಲಿ ತಂತ್ರಜ್ಞಾನದ ನೆರವು ಹಾಗೂ ನಿವೃತ್ತ ಸೈನಿಕರ ನೆರವು ಪಡೆಯುವ ಕುರಿತು ರಾಜ್ಯ ಸರ್ಕಾರ ಚಿಂತಿಸುತ್ತಿದೆ.

ಬಾಂಬ್‌ ಗಿರೀಶ್‌ !

ಗಿರೀಶ್‌ ಲೋಕನಾಥ್‌ ಮಟ್ಟೆಣ್ಣವರ್‌ ಎನ್ನುವ ಪೊಲೀಸ್‌ ಅಧಿಕಾರಿ ಜನಸಾಮಾನ್ಯರ ಪಾಲಿಗೆ 2003ರ ಹೀರೋ. ಶಾಸಕರ ಭವನದಲ್ಲಿ ಬಾಂಬ್‌ ಇಡುವ ಮೂಲಕ ರಾಜಕಾರಣಿಗಳಲ್ಲಿ ಭಯ ಮೂಡಿಸಿದ ಗಿರೀಶ್‌, ಸದ್ಯಕ್ಕೆ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಇತರೆ ಇತರೆ...

 • ತನ್ನ ಅಚ್ಚುಕಟ್ಟುತನದಿಂದಾಗಿ ಮೂಡಬಿದಿರೆ ಸಾಹಿತ್ಯ ಸಮ್ಮೇಳನ ಸಹೃದಯರ ಮೆಚ್ಚುಗೆ ಪಡೆಯಿತು.
 • ಕುವೆಂಪು ಶತಮಾನೋತ್ಸವವನ್ನು 2004 ವರ್ಷ ಪೂರ್ತಿ ಆಚರಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ- ಶತಮಾನೋತ್ಸವ ಆಚರಣೆಗೆ ಕುವೆಂಪು ಹುಟ್ಟುಹಬ್ಬ ಡಿಸೆಂಬರ್‌ 29, 2003ರಂದು ಚಾಲನೆ ನೀಡಿದೆ.
 • ಬ್ರಾಹ್ಮಣರು ಗೋಮಾಂಸ ತಿನ್ನುತ್ತಾರೆ ಎನ್ನುವ ಹೇಳಿಕೆಯ ಮೂಲಕ ವಿಚಾರವಾದಿ ಕೆ.ರಾಮದಾಸ್‌ ಹಾಗೂ ವಚನ ಸಾಹಿತ್ಯ ಹೊರತುಪಡಿಸಿ ಉಳಿದೆಲ್ಲವೂ ಬೂಸಾ ಎನ್ನುವ ಮೂಲಕ ದೇ.ಜವರೇಗೌಡ ಸುದ್ದಿಯಲ್ಲಿದ್ದ ವರ್ಷವಿದು.
 • ಗ್ರಾಮೀಣ ಕೃಪಾಂಕ ನೌಕರರ ಅಳಲು ಮುಗಿಲು ಮುಟ್ಟಿದೆ. ಸುಪ್ರಿಂಕೋರ್ಟಿನ ತೀರ್ಪಿನ ಮೇರೆಗೆ ಕೆಲಸ ಕಳಕೊಂಡ ಗ್ರಾಮೀಣ ಕೃಪಾಂಕ ನೌಕರರು, ಸರ್ಕಾರದ ವಿಶೇಷ ನಿಯಮಗಳ ಮೂಲಕ ಮತ್ತೆ ನೌಕರಿ ಪಡೆದರೂ, ಈ ನೇಮಕಕ್ಕೆ ಸುಪ್ರಿಂಕೋರ್ಟ್‌ ಮತ್ತೆ ತಡೆಯಾಜ್ಞೆ ನೀಡಿದೆ.
 • ಕಾವೇರಿಯಲ್ಲಿ ಕಲರವ ಮುಂದುವರಿಕೆ.
 • ತಮ್ಮ ತೇಜೋವಧೆಯಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಅನಂತಮೂರ್ತಿ ‘ಅಗ್ನಿ’ ವಾರಪತ್ರಿಕೆಯ ಎದುರು ಧರಣಿ ನಡೆಸಿದರು.
 • ಪೂರ್ಣಚಂದ್ರ ತೇಜಸ್ವಿ ಅವರ ಪಕ್ಷಿಚಿತ್ರಗಳು ಬೆಂಗಳೂರಿನಲ್ಲಿ ಹಾರಾಡಿದವು.
 • ದೇಶದ್ರೋಹಿ ಎನ್ನುವ ಪಟ್ಟವನ್ನು ಗಿರೀಶ್‌ ಕಾರ್ನಾಡರಿಗೆ ನೀಡಿರುವ ರಾಜ್ಯ ಬಿಜೆಪಿ ನಾಯಕರು- ಜ್ಞಾನಪೀಠ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡುವ ವಿಷಯವನ್ನು ಸಂಶೋಧಿಸಿದ್ದಾರೆ.
 • ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅಕ್ಷರ ದಾಸೋಹ ಯೋಜನೆ ಕೆಲವೆಡೆ ಎಡವಿದರೂ, ಜನ ಮೆಚ್ಚುಗೆಗೆ ಪಾತ್ರವಾಗಿದೆ.
 • ಖಾಸಗಿ ವಲಯಗಳ ಸಹಯೋಗದೊಂದಿಗೆ ಮೈಸೂರು ದಸರಾಕ್ಕೆ ಮತ್ತೆ ವೈಭವದ ಲೇಪ. ಇದರ ಕ್ರೆಡಿಟ್ಟು ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿ ವಿಶ್ವನಾಥ್‌ರ ಅಕೌಂಟಿಗೆ ಸಂದಿದೆ.
 • ಜನಸ್ಪಂದನ ಯಾತ್ರೆಯ ಮೂಲಕ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ನೇರವಾಗಿ ಜನರ ಬಳಿಗೆ ತೆರಳಿ, ಜನತೆಯ ಅಹವಾಲು ಕೇಳಿಕೆ. ಕೃಷ್ಣರ ಜನಸ್ಪಂದನಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಜನ ಸಂಘರ್ಷ ಯಾತ್ರೆ.
 • ಆನ್‌ಲೈನ್‌ ಲಾಟರಿ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ. ಮುಂದಿನ ಬಜೆಟ್‌ನಲ್ಲಿ ಲಾಟರಿ ಕುರಿತು ಸ್ಪರ್ಷ ನಿಲುವು ತಾಳುವುದಾಗಿ ಕೃಷ್ಣ ಭರವಸೆ.
 • ರಾಜ್ಯದ ಪಂಕಜ್‌ ಅಡ್ವಾಣಿ, ರಾಹುಲ್‌ ದ್ರಾವಿಡ್‌ ಕ್ರೀಡಾಕ್ಷೇತ್ರದಲ್ಲಿ ಮಿಂಚಿಂಗು.
 • ಬೆಂಗಳೂರಿನಲ್ಲಿ ಪ್ರಾರಂಭವಾದ ಜರ್ಮನಿಯ ಮೆಟ್ರೋ ಅಂಗಡಿಯ ವಿರುದ್ಧ ಸ್ಥಳೀಯ ವ್ಯಾಪಾರಿಗಳ ತಕರಾರು. ಪ್ರಸ್ತುತ ಪ್ರತಿಭಟನೆ ತಣ್ಣಗಾಗಿದ್ದು , ಮೆಟ್ರೊ ಹೊಸ ಮಳಿಗೆಗಳ ಪ್ರಾರಂಭಿಸುವ ಸಿದ್ಧತೆಯಲ್ಲಿದೆ.
 • ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸಾವಿರಾರು ದಲಿತರಿಂದ ಬೌದ್ಧ ಧರ್ಮ ಸ್ವೀಕಾರ.
2004ರ ದಿನಗಳು ಬಿಚ್ಚಿಕೊಳ್ಳುತ್ತಿವೆ. ಮುಂದಿನದೆಲ್ಲ ಒಳ್ಳಿತೇ ಇರಲಿ.
Post your views

ಪೂರಕ ಓದಿಗೆ-
ಕನ್ನಡ ಸಿನಿಮಾ-2003


ಮುಖಪುಟ / ವಾಟ್ಸ್‌ ಹಾಟ್‌

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more