ಕರ್ನಾಟಕ ರೈತ ಸಂಘದ ಭಾಗ-ಪ್ರಗತಿಪರ ಜನತಾ ದಳ ವಿಲೀನ
ಬೆಂಗಳೂರು : ಜನತಾ ಪರಿವಾರದ ವಿಲೀನ ಪ್ರಕ್ರಿಯೆ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಅಖಿಲ ಭಾರತ ಪ್ರಗತಿಪರ ಜನತಾ ದಳ (ಎಐಪಿಜೆಡಿ) ಕರ್ನಾಟಕ ರಾಜ್ಯ ರೈತ ಸಂಘ (ಕೆಆರ್‌ಆರ್‌ಎಸ್) ದ ಒಂದು ಭಾಗದೊಡನೆ ಸೇರಿ ಮುಂದಿನ ಲೋಕಸಭಾ ಚುನಾವಣಾ ಕಣಕ್ಕೆ ಇಳಿಯಲಿದೆ. ಹೀಗೆ ವಿಲೀನವಾಗಲಿರುವ ಪಕ್ಷವೇ ಕರ್ನಾಟಕ ಪ್ರಜಾಸತ್ತಾತ್ಮಕ ಒಕ್ಕೂಟ.
ಎಐಪಿಜೆಡಿ ಕರ್ನಾಟಕ ಘಟಕದ ಅಧ್ಯಕ್ಷ ಕೆ.ಎನ್.ನಾಗೇಗೌಡ ಮತ್ತು ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಜಂಟಿ ಸುದ್ದಿಗೋಷ್ಠಿಯಲ್ಲಿ ಬುಧವಾರ (ಡಿ. 24) ಈ ವಿಷಯ ತಿಳಿಸಿದರು. ಒಕ್ಕೂಟ ನಡೆಯಬೇಕಾದ ಹಾದಿಯನ್ನು ಇನ್ನೂ ತೀರ್ಮಾನಿಸಬೇಕಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಹೊರತುಪಡಿಸಿ, ಮಿಕ್ಕ ಪಕ್ಷಗಳ ಸಮಾನ ಮನಸ್ಕರು ಒಕ್ಕೂಟಕ್ಕೆ ಸೇರುವುದಾದರೆ ಸದಾ ಸ್ವಾಗತ ಎಂದು ನಾಗೇಗೌಡ ಹಾಗೂ ಪುಟ್ಟಣ್ಣಯ್ಯಬುಲಾವು ಕೊಟ್ಟರು.
ಡಿಸೆಂಬರ್ 30ನೇ ತಾರೀಕಿನೊಳಗೆ ಜನತಾ ಪರಿವಾರದ ವಿಲೀನಕ್ಕೆ ಜಾತ್ಯತೀತ ಜನತಾ ದಳದ ನಾಯಕ ಎಚ್.ಡಿ.ದೇವೇಗೌಡರು ಸೂತ್ರ ಹೊಸೆಯಲಿ. ಇಲ್ಲವಾದರೆ ಪಕ್ಷವನ್ನು ಬೇರೆ ರೀತಿಯಲ್ಲಿ ಬಲ ಪಡಿಸುವ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ನಾಗೇಗೌಡ ಹೇಳಿದರು.
ಎಐಪಿಜೆಡಿಯ ಬಿ.ಸೋಮಶೇಖರ್, ಎಚ್.ಎನ್.ನಾಗೇಗೌಡ, ಎಂ.ರಘುಪತಿ, ಬಸವರಾಜ ಬೊಮ್ಮಾಯಿ ಹಾಗೂ ರೈತ ಸಂಘದ ನಾಯಕರಾದ ಎಚ್.ಆರ್.ಬಸವರಾಜಪ್ಪ, ಸಿ.ಡಿ.ಬಸವರಾಜಪ್ಪ, ಸಿ.ಡಿ. ಮಹಾದೇವಪ್ಪ ಮತ್ತು ಕೆ.ಬೋರಯ್ಯ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.











Click it and Unblock the Notifications