ಕೂಡಿ ಬಂದ ಮುಹೂರ್ತ : ಡಿ.7ರಿಂದ 14,‘ಬೆಂಗಳೂರು ಹಬ್ಬ’
ಕೂಡಿ ಬಂದ ಮುಹೂರ್ತ : ಡಿ.7ರಿಂದ 14,‘ಬೆಂಗಳೂರು ಹಬ್ಬ’
ಬೆಂಗಳೂರು ಹಬ್ಬಕ್ಕೆ ಬಿಸ್ಮಿಲ್ಲಾ ಖಾನ್, ಕೆರೆಮನೆ ಶಂಭುಹೆಗಡೆ ಇತ್ಯಾದಿ ಘಟಾನುಘಟಿಗಳು
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಆರ್ಟಿಸ್ಟ್ಸ್ ಫೌಂಡೇಶನ್ ಫಾರ್ ಆರ್ಟ್ಸ್ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ಹಬ್ಬ ನಡೆಯಲಿದೆ. ಈ ಹಬ್ಬವು ಬೆಂಗಳೂರಿನ ನಾಗರಿಕರಿಗೆ ನೃತ್ಯ, ಸಂಗೀತ, ನಾಟಕ, ಪಾಪ್ ಸಂಗೀತದ ರಸದೌತಣ ಉಣಬಡಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಡಿ.ಬಿ.ಇನಾಂದಾರ್ ಬೆಂಗಳೂರು ಹಬ್ಬದ ರೂಪುರೇಷೆಗಳನ್ನು ಸುದ್ದಿಗಾರರಿಗೆ ತಿಳಿಸಿದರು.
ನಾಡ ಸಂಸ್ಕೃತಿ ಪ್ರದರ್ಶನ ಮಾತ್ರವಲ್ಲದೆ ಸಮಕಾಲೀನ ಕಲೆಗಳಿಗೂ ಬೆಂಗಳೂರು ಹಬ್ಬದಲ್ಲಿ ಆದ್ಯತೆ ನೀಡಲಾಗುವುದು. ಇದು ಬೆಂಗಳೂರಿಗೆ ಸಾಂಸ್ಕೃತಿಕ ಹಬ್ಬವನ್ನು ಆಚರಿಸುವ ಒಂದು ವೇದಿಕೆ ಎಂದು ಸಚಿವ ಇನಾಂದಾರ್ ಬೆಂಗಳೂರು ಹಬ್ಬದ ವೈಶಿಷ್ಟ್ಯ ಬಣ್ಣಿಸಿದರು.
ಆರ್ಟಿಸ್ಟ್ಸ್ ಫೌಂಡೇಶನ್ ಫಾರ್ ಆರ್ಟ್ಸ್‌ನ ಸದಸ್ಯರಾದ ನಂದಿನಿ ಆಳ್ವ ಅವರು ಬೆಂಗಳೂರು ಹಬ್ಬದ ಮೂಲಕ ಕಲೆಯ ಬಗೆಗೆ ಬದ್ಧತೆ ಹಾಗೂ ಜಾಗೃತಿಯನ್ನು ಕಲಾವಿದರಲ್ಲಿ ಮೂಡಿಸಲಾಗುವುದು ಎಂದರು.
ಬಿಸ್ಮಿಲ್ಲಾ ಖಾನ್, ನಿಶಾದ್ ಖಾನ್, ಹರಿಪ್ರಸಾದ್ ಚೌರಾಸಿಯಾ, ಎಲ್.ಸುಬ್ರಹ್ಮಣ್ಯಂ, ಎಂ.ಎಸ್.ಗೋಪಾಲಕೃಷ್ಣನ್, ಕೆರೆಮನೆ ಶಂಭು ಹೆಗಡೆ, ಶಂಕರ ಮಹದೇವನ್, ಮಾಸ್ಟರ್ ಹಿರಣ್ಣಯ್ಯ, ಕದ್ರಿ ಗೋಪಾಲನಾಥ್ ಮುಂತಾದ ಖ್ಯಾತ ಕಲಾವಿದರು ಬೆಂಗಳೂರು ಹಬ್ಬದಲ್ಲಿ ಭಾಗವಹಿಸುವರು.
ಪಬ್ ಉತ್ಸವ : ನಗರದ ಪಬ್ ಸಂಸ್ಕೃತಿಗೆ ತಕ್ಕಂತಹ ಪಬ್ ಉತ್ಸವವನ್ನೂ ಇದೇ ಸಂದರ್ಭದಲ್ಲಿ ನಡೆಸುವುದಾಗಿ ಇನಾಂದಾರ್ ಹೇಳಿದರು. ಈ ಉತ್ಸವದಲ್ಲಿ ಶಂಕರ್ ಮಹಾದೇವನ್, ಇಷನ್, ಲಾಯ್, ಸುಖಬೀರ್‌ಸಿಂಗ್, ಬಾಂಬೆ ವೈಕಿಂಗ್ಸ್ ಮೊದಲಾದವರು ಭಾಗವಹಿಸಲಿದ್ದಾರೆ. ಇದಲ್ಲದೆ ಪ್ರಸಾದ್ ಬಿದ್ದಪ್ಪ ಸಂಯೋಜಿಸಿರುವ ಫ್ಯಾಷನ್ ಷೋಗಳನ್ನೂ ನಡೆಸಲಾಗುವುದು ಎಂದರು.
ಹಬ್ಬದ ಎಲ್ಲಾ ಕಾರ್ಯಕ್ರಮಗಳು ಉಚಿತ. ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಮಾತ್ರ ಪಾಸ್ ಪಡೆಯಬೇಕಾಗುತ್ತದೆ. ಗೋವಾದಲ್ಲಿನ ಕಾರ್ನಿವಲ್ ಮಾದರಿಯಲ್ಲಿ ಈ ಹಬ್ಬವನ್ನು ಆಚರಿಸಲು ಸಿದ್ಧತೆಗಳು ನಡೆದಿವೆ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications